ಪ್ರಗತಿವಾಹಿನಿ ಸುದ್ದಿ: ರಾಜ್ಯದ ಹಲವು ಜಿಲೆಗಳಲ್ಲಿ ಗುಡುಗು, ಬಿರಿಗಾಳಿ ಸಹಿತ ಮಳೆಯಾಗುತ್ತಿದ್ದು, ರಣಬಿಸಿಲಿನಿಂದ ಕಂಗೆಟ್ಟಿದ್ದ ಕರಾವಳಿ, ಮಲೆನಾಡಿನ ಕೆಲ ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಗಳ ಕೆಲವೆಡೆ ಮಳೆಯಾಗಿದ್ದರೆ ಇನ್ನು ಹಲವೆಡೆ ಬಿಸಿಲ ಧಗೆ ಹೆಚ್ಚಾಗಿದೆ. ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆ ಧಾರಾಕಾರ ಮಳೆಯಾಗಿದ್ದು, ವರುಣಾರ್ಭಟಕ್ಕೆ ಹಲವೆಡೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಇನ್ನು ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಆದರೆ ಬರಗಾಲದ ಜೊತೆಗೆ ಬಿರು ಬಿಸಿಲಿನಿಂದ ಕಂಗಾಲಾಗಿದ್ದ ಅನ್ನದಾತನ ಮೊಗದಲ್ಲಿ ಮಳೆಯಿಂದಾಗಿ ಕೊಂಚ ಸಮಾಧಾನ ತಂದಿದೆ.
ಇನ್ನೊಂದೆಡೆ ಉಡುಪಿ ಜಿಲ್ಲೆಯಲ್ಲಿ ವರುಣಾರ್ಭಟಕ್ಕೆ ಓರ್ವ ಬಲಿಯಾಗಿದ್ದಾನೆ. ಗುಡುಗು ಮಿಂಚಿನೊಂದಿಗೆ ಧರೆಗಪ್ಪಳಿಸಿದ ಸಿಡಿಲಿಗೆ ಮನೆ ಬಳಿಯೇ ನಿಂತಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ನಡೆದಿದೆ. 38 ವರ್ಷದ ಸುರೇಶ್ ಶೆಟ್ಟಿ ಮೃತ ದುರ್ದೈವಿ.
ಇಂದು ಸಂಜೆ ಈ ದುರಂತ ಸಂಭವಿಸಿದ್ದು, ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪಿಯಲ್ಲಿ ಘಟನೆ ನಡೆದಿದೆ. ಇನ್ನು ಉಡುಪಿ ಜಿಲ್ಲೆಯ ಮಣಿಪಾಲ, ಮಲ್ಪೆ, ಸಂತೆಕಟ್ಟೆ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ