ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇನ್ನು ಮುಂದೆ ಕೆಡಿಪಿ ಸಭೆಯನ್ನು ಮೊದಲಿನಂತೆ ನಡೆಸುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಒಂದು ದಿನ ಕೆಡಿಪಿ ಸಭೆ ನಡೆಸಿ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿತ್ತು. ಆದರೆ ಇನ್ನು ಆ ರೀತಿ ಮಾಡುವುದಿಲ್ಲ. ಒಂದೊಂದೇ ಇಲಾಖೆಯ ಪ್ರಗತಿ ಪರಿಶಾಲನೆಯನ್ನು ಇಟ್ಟುಕೊಂಡು ಸಮಗ್ರವಾಗಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು. ಅದರಂತೆ ಜೂನ್ 6ರಂದು ಬೆಳಗಾವಿಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದು ಅವರು ಹೇಳಿದರು.
ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ವ್ಯವಹಾರಗಳ ಕುರಿತು ಪ್ರತ್ಯೇಕ ತನಿಖೆ ನಡೆಸಲಾಗುವುದು. ಈ ಕುರಿತು ಪ್ರತ್ಯೇಕ ಸಭೆಯನ್ನೂ ನಡೆಸಲಾಗುವುದು ಎಂದು ಸತೀಶ್ ತಿಳಿಸಿದರು.
ಜಿಲ್ಲೆಯಲ್ಲಿ ಬಿಜೆಪಿ ಸರಕಾರ ಕೊನೆಯ ಅವಧಿಯಲ್ಲಿ ಜಾರಿಗೊಳಿಸಿದ ಎಲ್ಲ ಕಾಮಗಾರಿಗಳನ್ನು ಪರಿಶೀಲನೆ ನಡೆಸಲಾಗುವುದು. ಅವು ಜನೋಪಯೋಗಿ ಆಗಿಲ್ಲದಿದ್ದರೆ ರದ್ದುಪಡಿಸಲಾಗುವುದು ಎಂದೂ ಅವರು ಹೇಳಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ ಸಾಕಷ್ಟು ರಸ್ತೆಗಳ ಸುಧಾರಣೆಯಾಗಿಲ್ಲ. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ. ಆ ಸಮಸ್ಯೆಯನ್ನು ಬಗೆ ಹರಿಸುವ ಕೆಲಸ ಮಾಡಲಾಗುವುದು. ಹಿಂದಿನ ಸರಕಾರದ ಸಚಿವರು, ಶಾಸಕರು ಈ ಕುರಿತು ಗಮನ ಹರಿಸಬೇಕಿತ್ತು. ಅದನ್ನು ಮಾಡದೆ ಇರುವುದು ಈಗ ಸಮಸ್ಯೆಯಾಗಿದೆ. ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಎಲ್ಲಿ ಅವಶ್ಯಕತೆ ಇದೆ ಕುಡಿಯುವ ನೀರನ್ನು ಪೂರೈಕೆ ಮಾಡಬೇಕೆಂದು ಸೂಚನೆ ನೀಡಲಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ಚನ್ನರಾಜ ಹಟ್ಟಿಹೊಳಿ, ಆಸೀಫ್ ಸೇಠ್, ಮಹಾಂತೇಶ ಕೌಜಲಗಿ, ವಿಶ್ವಾಸ್ ವೈದ್ಯ, ಮಹೇಂದ್ರ ತಮ್ಮಣ್ಣವರ್, ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ