Kannada NewsKarnataka NewsLatest

ಮೊಟ್ಟ ಮೊದಲ ಬಾರಿಗೆ ಮೋದಿಯವರ ರೋಡ್ ಶೋ ಗೆ ಐತಿಹಾಸಿಕ ನಗರ ಬೆಳಗಾವಿ ಸಾಕ್ಷಿಯಾಗಲಿದೆ; ಪ್ರಧಾನಿ ನರೇಂದ್ರ ಮೋದಿ ಅವರ ಬೆಳಗಾವಿ ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ

 

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬೆಳಗಾವಿಗೆ ಆಗಮಿಸಲಿದ್ದಾರೆ. ಮೊಟ್ಟ ಮೊದಲ ಬಾರಿಗೆ ಮೋದಿಯವರ ರೋಡ್ ಶೋ ಗೆ ಐತಿಹಾಸಿಕ ನಗರ ಬೆಳಗಾವಿ ಸಾಕ್ಷಿಯಾಗಲಿದೆ.

ಬೆಳಗ್ಗೆ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ನೆರವೇರಿಸುವ ಮೋದಿ ಅಲ್ಲಿಂದ 2.30ಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಎಪಿಎಂಸಿ ಮೈದಾನಕ್ಕೆ ಆಗಮಿಸುವರು. ಅಲ್ಲಿಂದ ಕಾರ್ಯಕ್ರಮ ನಡೆಯಲಿರುವ ಮಾಲಿನಿ ಸಿಟಿವರೆಗೆ 10 ಕಿಮೀ ರೋಡ್ ಶೋ ನಡೆಯಲಿದೆ.

ಎಂಪಿಎಂಸಿ ಮೈದಾನದಿಂದ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ಆರಂಭವಾಗಲಿದೆ. ಅಲ್ಲಿಂದ ಕಿತ್ತೂರು ರಾಣಿ ಚನ್ನಮ್ಮ ವೃತ್ತ…. ಕಾಲೇಜು ರಸ್ತೆ…. ಬೋಗಾರ್ವೇಸ್…. ರಾಮಲಿಂಗ್ ಖಿಂಡ್ ಗಲ್ಲಿ ….. ಶನಿಮಂದಿರ…. ಕಪಿಲೇಶ್ವರ ರೈಲ್ವೆ ಓವರ್ ಬ್ರಿಜ್…. ಛತ್ರಪತಿ ಶಿವಾಜಿ ಉದ್ಯಾನ…. ಯೂನಿಯನ್ ಬ್ಯಾಂಕ್ ಸರ್ಕಲ್… ಹೊಸ ಡಬಲ್ ರಸ್ತೆ… ಬಿ.ಎಸ್.ಯಡಿಯೂರಪ್ಪ ಮಾರ್ಗ… ಮಾಲಿನಿ ಸಿಟಿ.

ಇಡೀ ಕಾರ್ಯಕ್ರಮ ವಿಭಿನ್ನವಾಗಿರುವಂತೆ ಶಾಸಕ ಅಭಯ ಪಾಟೀಲ ಯೋಜನೆ ರೂಪಿಸಿದ್ದಾರೆ.

ಮಾರ್ಗದುದ್ದಕ್ಕೂ ರಸ್ತೆಗಳನ್ನು ಅಲಂಕರಿಸಲಾಗಿದೆ. ಭಾರತೀಯ ಜನತಾ ಪಾರ್ಟಿಯ ಧ್ವಜಗಳನ್ನು ಹಾಕಲಾಗಿದೆ. ಶಾಸಕ ಅಭಯ ಪಾಟೀಲ್ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಹಗಲು ರಾತ್ರಿ ನಗರ ಶೃಂಗಾರದಲ್ಲಿ ತೊಡಗಿದ್ದಾರೆ. ಅಭಯ ಪಾಟೀಲ ಸ್ವತಃ ರಾತ್ರಿಯೆಲ್ಲ ಧ್ವಜ, ಬ್ಯಾನರ್, ಬಂಟಿಂಗ್ಸ್ ಅಳವಡಿಕೆಯಲ್ಲಿ ತೊಡಗಿದ್ದಾರೆ.

ಮಾಲಿನಿ ಸಿಟಿ ಮೈದಾನದಲ್ಲಿ ಬೃಹತ್ ಸಭಾ ಕಾರ್ಯಕ್ರಮ ನಡೆಯಲಿದೆ. ಅಲ್ಲಿ ಕಿಸಾನ್ ಸಮೃದ್ಧಿ ಯೋಜನೆಯ ಅಡಿಯಲ್ಲಿ ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡುವ ಪ್ರಧಾನಿ, ಬೆಳಗಾವಿ – ಧಾರವಾಡ ನೇರ ರೈಲು ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ಬೆಳಗಾವಿಯ ನೂತನ ರೈಲ್ವೆ ನಿಲ್ದಾಣವನ್ನು ಸಾಂಕೇತಿಕವಾಗಿ ಉದ್ಘಾಟಿಸಲಿದ್ದಾರೆ. ಜಿಲ್ಲೆಯ 5 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಒಟ್ಟಾರೆ ಸುಮಾರು 2,200 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಪ್ರಧಾನಿ ಚಾಲನೆ ನೀಡುವರು.

ಈ ಸುದ್ದಿಯನ್ನೂ ಓದಿ: ಬೆಳಗಾವಿ-ಧಾರವಾಡ ರೈಲುಮಾರ್ಗ, 5 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಮೋದಿ ಶಂಕುಸ್ಥಾಪನೆ

ಕಾರ್ಯಕ್ರಮದ ಸ್ಥಳದಲ್ಲಿ 9 ಸಮಾನಾಂತರ ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲಿ ಮೋದಿಯವರ ಆಗಮನಕ್ಕಿಂತ ಮೊದಲು ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಜೊತೆಗೆ, ಮೋದಿ ಪ್ರಧಾನಿಯಾಗುವುದಕ್ಕಿಂತ ಮೊದಲು ಮತ್ತು ಪ್ರಧಾನಿಯಾದ ನಂತರದ ವಿವಿಧ ಚಿತ್ರಣ ನೀಡುವ ಅಪರೂಪದ ಕಾರ್ಯಕ್ರಮವನ್ನೂ ರೂಪಿಸಲಾಗಿದೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾನುವಾರ ಬೆಳಗಾವಿಗೆ ಆಗಮಿಸಿ ಸಿದ್ಧತೆಗಳ ಪರಿಶೀಲನೆ ನಡೆಸಿದರು.  ಸಂಸದ ಈರಣ್ಣ ಕಡಾಡಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ ಮೊದಲಾದವರಿದ್ದರು.

ವಿಶೇಷ ರೀತಿಯಲ್ಲಿ ಸ್ವಾಗತ

ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ವಿಭಿನ್ನವಾದ ಪರಿಕಲ್ಪನೆ ರೂಪಿಸಲಾಗಿದೆ. ಓರ್ವ ಕಟ್ಟಡ ಕಾರ್ಮಿಕ, ಓರ್ವ ನೇಕಾರ, ಓರ್ವ ಆಟೋ ಡ್ರೈವರ್, ಓರ್ವ ಕಾರ್ಮಿಕ ಮಹಿಳೆ, ಓರ್ವ ಪೌರ ಕಾರ್ಮಿಕ… ಹೀಗೆ 10 ಜನರು ಪ್ರಧಾನಿಗಳನ್ನು ಸ್ವಾಗತಿಸಲಿದ್ದಾರೆ. ಜೊತೆಗೆ 10 ಸಾವಿರ ಮಹಿಳೆಯರು ಪೂರ್ಣಕುಂಬ ಸ್ವಾಗತ ಮಾಡಲಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರು ಏಕರೂಪದ ಉಡುಗೆತೊಟ್ಟು ಆಗಮಿಸಲಿದ್ದಾರೆ.

 

ಸುಮಾರು 45 ನಿಮಿಷ ಸಭಾ ಕಾರ್ಯಕ್ರಮ ನಡೆಯಲಿದ್ದು, ನಂತರ ಪ್ರಧಾನಿ ನರೇಂದ್ರ ಮೋದಿ ವೇದಿಕೆಯ ಹಿಂಬಾಗದಲ್ಲಿ ನಿರ್ಮಿಸಲಾಗಿರುವ ಹೆಲಿಪ್ಯಾಡ್ ನಿಂದಲೇ ಹೆಲಿಕಾಪ್ಟರ್ ಮೂಲಕ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತೆರಳುವರು.

ಇದೊಂದು ಸರಕಾರಿ ಕಾರ್ಯಕ್ರಮವಾಗಿದ್ದು, ವಿಶೇಷ ರೀತಿಯಲ್ಲಿ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಂಪೂರ್ಣ ಜಿಲ್ಲಾಡಳಿತ, ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಂಪೂರ್ಣ ಪೊಲೀಸ್ ಇಲಾಖೆ ಕಾರ್ಯಕ್ರಮದ ಪೂರ್ವಸಿದ್ಧತೆಯಲ್ಲಿ ತೊಡಗಿಕೊಂಡಿದೆ. ಬಿಜೆಪಿಯ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಹೊಸ ಹುಮ್ಮಸ್ಸಿನೊಂದಿಗೆ ಪ್ರಧಾನಿಗಳನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ.

ಬರಲಿರುವ ವಿಧಾನಸಭೆ ಚುನಾವಣೆಗೆ ಈ ಕಾರ್ಯಕ್ರಮ ವಿಜಯ ಯಾತ್ರೆಯಾಗಬೇಕೆನ್ನುವ ಉದ್ದೇಶದಿಂದ ಬಿಜೆಪಿ ಯೋಜನೆ ರೂಪಿಸಿದೆ.

350 ಬಸ್, ಶಾಲೆಗಳ ವೇಳೆ ಬದಲಾವಣೆ

ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ನಿಮಿತ್ತ ಬೆಳಗಾವಿ ನಗರದಲ್ಲಿ ಸೋಮವಾರ ಶಾಲೆಗಳ ವೇಳೆಯಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 7.50ರಿಂದ 11.40ರ ವರೆಗೆ ಶಾಲೆಗಳು ನಡೆಯಲಿವೆ.

ಈ ಸುದ್ದಿಯನ್ನೂ ಓದಿ:  ಗಮನಿಸಿ, ಸೋಮವಾರ ಶಾಲೆಗಳ ಸಮಯದಲ್ಲಿ ಬದಲಾವಣೆ

ಪ್ರಧಾನಿ ಕಾರ್ಯಕ್ರಮಕ್ಕೆ ಸಾರ್ವಜನಿಕರನ್ನು ಕರೆತರಲು 350 ಬಸ್ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಹಲವಾರು ಮಾರ್ಗಗಳ ಬಸ್ ಸಂಚಾರ ರದ್ದುಗೊಳ್ಳಲಿದೆ.

ಈ ಸುದ್ದಿಯನ್ನೂ ಓದಿ: ಪ್ರಯಾಣಿಕರೇ ಗಮನಿಸಿ: ಬೆಳಗಾವಿ ವಿಭಾಗದ ಕೆಲವು ಸಾರಿಗೆಗಳು ರದ್ದು

ಪ್ರಧಾನಮಂತ್ರಿಗಳ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರಿಗೆ ಹಲವಾರು ನಿಬಂಧನೆಗಳನ್ನು ವಿಧಿಸಲಾಗಿದೆ. ನೀರಿನ ಬಾಟೆಲ್, ಕೈ ಚಾಲ, ಡಿಜಿಟಲ್ ಗ್ಯಾಜೆಟ್ ಸೇರಿದಂತೆ ಅನೇಕ ವಸ್ತುಗಳನ್ನು ತರುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.

ಈ ಸುದ್ದಿಯನ್ನೂ ಓದಿ:  ಪ್ರಧಾನಿ ಕಾರ್ಯಕ್ರಮಕ್ಕೆ ಇವುಗಳನ್ನು ತರುವಂತಿಲ್ಲ

ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ನಿಮಿತ್ತ ನಗರದಲ್ಲಿ ಸಂಚಾರ ಮಾರ್ಗಗಳ ಬದಲಾವಣೆ ಮಾಡಲಾಗಿದೆ. ನಗರದೊಳಗೆ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಬೇರೆ ಬೇರೆ ಪ್ರದೇಶಗಳಿಗೆ ತೆರಳುವವರಿಗೆ ಬದಲಿ ಮಾರ್ಗ ಅನುಸರಿಸುವಂತೆ ಸೂಚಿಸಲಾಗಿದೆ.

ಈ ಸುದ್ದಿಯನ್ನೂ ಓದಿ: ಬೆಳಗಾವಿ ನಗರದಲ್ಲಿ ಸಂಚಾರ ಮಾರ್ಗ ಬದಲಾವಣಿ

*ವಂದೇ ಭಾರತ್ ರೈಲಿನ ಮೇಲೆ ಕಲ್ಲುತೂರಾಟ; ಗಾಜುಗಳು ಪುಡಿಪುಡಿ, ಪ್ರಯಾಣಿಕರಿಗೆ ಗಾಯ*

https://pragati.taskdun.com/vonde-bharath-trainstone-throwbangalore/

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button