ಮಳೆ ಅವಾಂತರ; ಸಹಕರಿಸಲು ಹೆಸ್ಕಾಂ ಮನವಿ ; ಹೆಚ್ಚುವರಿ ಸಿಬ್ಬಂದಿ ಬೇಡಿಕೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಭಾರಿ ಮಳೆಯ ಹಿನ್ನೆಲೆಯಲ್ಲಿ ಬೆಳಗಾವಿ ನಗರಾದ್ಯಂತ ಭಾರಿ ಅವಾಂತರ ಸೃಷ್ಟಿಯಾಗುತ್ತಿದೆ. ಅದರಲ್ಲೂ ಅನೇಕ ಕಡೆ ಮರಗಳು ಬಿದ್ದು ವಿದ್ಯುತ್ ಕಂಬಗಳು ಬಿದ್ದಿವೆ. ಹಲವೆಡೆ ಅನಾಹುತ ಸಂಭವಿಸಬಾರದೆಂದು ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್ ಕಡಿತ ಮಾಡಲಾಗಿದೆ.
ಬಹುತೇಕ ಕಮರ್ಶಿಯಲ್ ಮತ್ತು ರೆಸಿಡೆನ್ಸಿಯಲ್ ಅಪಾರ್ಟಮೆಂಟ್ ಗಳಲ್ಲಿ ನೀರು ತುಂಬಿದೆ. ಇದರಿಂದ ಶಾರ್ಟ್ ಸರ್ಕೀಟ್ ಉಂಟಾಗಬಹುದೆನ್ನುವ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುತ್ತಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ಹೆಸ್ಕಾಂ ಸಿಬ್ಬಂದಿ ಪರದಾಡುತ್ತಿದ್ದಾರೆ. ನಿರಂತರವಾಗಿ ಸಾರ್ವಜನಿಕರು ಕರೆ ಮಾಡುತ್ತಿದ್ದು, ಸಿಬ್ಬಂದಿ ಕೊರತೆಯಿಂದಾಗಿ ಸಮಸ್ಯೆಯಾಗಿದೆ. ಕಳೆದ ಒಂದೇ ರಾತ್ರಿಯಲ್ಲಿ 30ಕ್ಕೂ ಹೆಚ್ಚು ಕಡೆಯಿಂದ ಪೋನ್ ಬಂದಿದ್ದು, ಸಿಬ್ಬಂದಿ ಒಂದೊಂದಾಗಿ ಸಮಸ್ಯೆ ಪರಿಹರಿಸುತ್ತಿದ್ದಾರೆ.
ನಗರದ ಜ್ಯೋತಿ ಕಾಲೇಜಿನ ಬಳಿ ಮರ ಮತ್ತು ಟೊಂಗೆಗಳು ಬಿದ್ದು ಭಾರಿ ಅವಾಂತರ ಸೃಷ್ಟಿಯಾಗಿದೆ. ವಿದ್ಯುತ್ ಕಂಬ ಮತ್ತು ತಂತಿಗಳು ಹರಿದು ಬಿದ್ದಿವೆ. ಒಂದೇ ಕಡೆ ಸಮಸ್ಯೆ ಪರಿಹರಿಸಲು 5 ರಿಂದ 6 ಗಂಟೆಗಳು ಬೇಕಾಗಿವೆ.
ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಸಿಬ್ಬಂದಿ ಕಳಿಸುವಂತೆ ಬೆಳಗಾವಿ ಹೆಸ್ಕಾಂ ವಿಭಾಗ ಬೇರೆ ಜಿಲ್ಲೆಗಳಿಗೆ ಮನವಿ ಮಾಡಿದೆ. ಹಿರಿಯ ಅಧಿಕಾರಿಗಳಿಗೆ ಈ ಸಂಬಂಧ ವಿನಂತಿಸಲಾಗಿದೆ ಎಂದು ಹಿರಿಯ ಅಧಿಕಾರಿ ಅರವಿಂದ ಗದಗಕರ್ ಪ್ರಗತಿವಾಹಿನಿಗೆ ಮಾಹಿತಿ ನೀಡಿದ್ದಾರೆ.
ಎಲ್ಲ ಕಡೆಯಿಂದ ನಿರಂತರ ಕರೆ ಬರುತ್ತಿರುವುದರಿಂದ ಏಕಕಾಲದಲ್ಲಿ ಸಿಬ್ಬಂದಿ ಕಳಿಸಲು ಆಗುತ್ತಿಲ್ಲ. ಸಾರ್ವಜನಿಕರು ಸಹಕರಿಸಬೇಕು. ಅವಘಡ ಸಂಭವಿಸದಂತೆ ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ವಿನಂತಿಸಿದ್ದಾರೆ.
ಇದನ್ನೂ ಓದಿ – ಭಾರಿ ಭೂ ಕುಸಿತ: ಪುಣಾ -ಬೆಂಗಳೂರು ಹೈವೇ ಬಂದ್ -Breaking News
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ