ಪ್ರಗತಿವಾಹಿನಿ ಸುದ್ದಿ, ಖಾನಾಪುರ : ಖಾನಾಪುರ ಪಟ್ಟಣದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲು ರಾಜ್ಯ ಸರ್ಕಾರ 7.5 ಕೋಟಿ ರೂ. ಅನುದಾನ ಮಂಜೂರು ಮಾಡಿದೆ ಎಂದು ಎಂದು ಶಾಸಕಿ ಡಾ. ಅಂಜಲಿ ನಿಂಬಾಳಕರ ಹೇಳಿದರು.
ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು, ಫೆಬ್ರವರಿ ತಿಂಗಳಲ್ಲಿ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ ಎಂದರು. ರಾಜ್ಯದ ಎಲ್ಲ ತಾಲೂಕಲ್ಲಿ ಹೈಟೆಕ್ ಬಸ್ ನಿಲ್ದಾಣಗಳ ನಿರ್ಮಾಣ ಮಾಡಲಾಗುತ್ತಿದ್ದು, ಖಾನಾಪುರ ಮಾತ್ರ ಬಾಕಿ ಉಳಿದಿತ್ತು. ತಾವು ಮನವಿ ಮಾಡಿದಾಗೆಲ್ಲ ಹಣಕಾಸು ತೊಂದರೆ ಕಾರಣಗಳಿಂದ ನಿರ್ಲಕ್ಷಿಸಲಾಗುತ್ತಿತ್ತು. ಸತತವಾಗಿ ಸಾರಿಗೆ ಮಹಾಮಂಡಳಿ ಮತ್ತು ಸರ್ಕಾರದ ಬೆನ್ನು ಹತ್ತಿ ಯೋಜನೆ ಮಂಜೂರು ಮಾಡಿಸಿದ್ದೇನೆ ಎಂದರು.
ಖಾನಾಪುರ ಬಸ್ ನಿಲ್ದಾಣ ನವೀಕರಣಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿತು. 12/12/2020 ರಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಮಂಡಳಿಯು 6 ಕೋಟಿ 93 ಲಕ್ಷ ರೂ.ಗಳ ವೆಚ್ಚದಲ್ಲಿ ಈ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಿದೆ.
ಹೈಟೆಕ್ ಬಸ್ ನಿಲ್ದಾಣದಲ್ಲಿ ಒಂದೇ ಸಮಯದಲ್ಲಿ 13 ಬಸ್ ನಿಲ್ಲುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ನಿಲ್ದಾಣ ನಿರ್ಮಾಣಕ್ಕೆ ಸಾರಿಗೆ ಮಹಾ ಮಂಡಳ ಶೇ.50 ಮತ್ತು ರಾಜ್ಯ ಸರ್ಕಾರ ಶೇ.50 ರಷ್ಟು ಅನುದಾನ ನೀಡಲಿವೆ. ಪಾರಿಶ್ವಾಡ ರಸ್ತೆ ಮುಖಾಂತರ ಬಸ್‌ಗಳು ಒಳಪ್ರವೇಶಿಸಿ ಬೆಳಗಾವಿ-ಗೋವಾ ಹೆದ್ದಾರಿ ಮೂಲಕ ಹೊರಗಡೆ ತೆರಳುವ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರವಾಸಿಗರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕ, ಕ್ಯಾಂಟೀನ್, ಶೌಚಾಲಯ, ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ