ಅಸಮಾಧಾನಿತರ ಸಮಾಧಾನಕ್ಕೆ ಹೈಕಮಾಂಡ್ ಎಂಟ್ರಿ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ಸೂಕ್ತ ಖಾತೆ ಸಿಕ್ಕಿಲ್ಲ ಮತ್ತು ನಮಗಿಂತ ಕಿರಿಯರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ ಎಂದು ಅಸಮಾಧಾನಗೊಂಡಿರುವ ಸಚಿವರಾದ ಸಿ.ಟಿ.ರವಿ, ಆರ್.ಅಶೋಕ, ಕೆ.ಎಸ್.ಈಶ್ವರಪ್ಪ ಮೊದಲಾದವರನ್ನು ಸಮಾಧಾನಪಡಿಸಲು ಹೈಕಮಾಂಡ್ ಎಂಟ್ರಿಯಾಗಿದೆ.
ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿತ್ತು. ಸಿ.ಟಿ.ರವಿ ತಮ್ಮ ಸರಕಾರಿ ಕಾರನ್ನು ವಾಪಸ್ ಕಳಿಸುವ ಜೊತೆಗೆ ಮುಖ್ಯಮಂತ್ರಿಗೆ ರಾಜಿನಾಮೆಯನ್ನೂ ರವಾನಿಸಿದ್ದರೆನ್ನಲಾಗಿದೆ. ಆದರೆ ತಕ್ಷಣ ಹೈಕಮಾಂಡ್ ಸಣ್ಣ ಎಚ್ಚರಿಕೆಯ ಜೊತೆಗೆ ಅವರನ್ನು ಸಮಾಧಾನಪಡಿಸುವ ಕೆಲಸಕ್ಕೆ ಕೈ ಹಾಕಿತು.
ಇದಾದ ನಂತರ ಟ್ವೀಟ್ ಮಾಡಿರುವ ರವಿ, ನನಗೆ ಪಕ್ಷ ಮುಖ್ಯ. ಪಕ್ಷಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ದ. ನನಗೆ ಹೇಳುವುದಕ್ಕೆ ಬೇಕಾದಷ್ಟಿದೆ. ಅದನ್ನು ಎಲ್ಲಿ ಹೇಳಬೇಕೋ ಹೇಳುತ್ತೇನೆ. ನನ್ನೊಳಗಿನ ಹೋರಾಟಗಾರ ಕೆಲವೊಮ್ಮೆ ಹೊರಬಂದರೆ ನಾನೇನು ಮಾಡಲಿ ಎಂದು ಮಾರ್ಮಿಕವಾಗಿ ಹೇಳಿದ್ದರು. ತನ್ಮೂಲಕ ತಮಗೆ ಅಸಮಾಧಾನವಾಗಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ.
ಆರ್.ಅಶೋಕ ಅವರನ್ನು ಸಮಾಧಾನಪಡಿಸುವ ಯತ್ನ ಮುಂದುವರಿದಿದ್ದು, ಈಶ್ವರಪ್ಪ ಹೈಕಮಾಂಡ್ ಮಟ್ಟದಲ್ಲಿ ತಮ್ಮ ಅಸಮಾಧಾನ ತೋರ್ಪಡಿಸಿದ್ದಾರಾದರೂ ಬಹಿರಂಗವಾಗಿ ಹೇಳಿಕೆ ನೀಡಿಲ್ಲ. ತಮಗೆ ಉತ್ತಮ ಖಾತೆ ನೀಡಿಲ್ಲ ಎನ್ನುವುದಕ್ಕಿಂತ ತಮಗಿಂತ ಕಿರಿಯರಿಗೆ ಉಪಮುಖ್ಯಮಂತ್ರಿ ಸ್ಥಾನ ಮತ್ತು ಉತ್ತಮ ಖಾತೆ ನೀಡಿರುವುದು ಇವರನ್ನೆಲ್ಲ ಕೆರಳಿಸಿದೆ.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕೂಡ ತಮ್ಮ ಖಾತೆಯ ಬಗ್ಗೆ ತೃಪ್ತಿ ಹೊಂದಿಲ್ಲ. ಮಾಜಿ ಮುಖ್ಯಮಂತ್ರಿಯಾದ ತಮ್ಮನ್ನು ಬಿಟ್ಟು ಬೇರೆಯವರಿಗೆ ಉಪಮುಖ್ಯಮಂತ್ರಿಯಂತಹ ತಮಗಿಂತ ದೊಡ್ಡ ಖಾತೆ ನೀಡಲಾಗಿದೆ ಎನ್ನುವುದು ಅವರ ಅಸಮಾಧಾನ.
ಸಂಬಂಧಿಸಿದ ಸಚಿವರ ಜಾತಿ ಸಮುದಾಯಗಳು ಕೂಡ ಪ್ರತಿಭಟನೆಗಿಳಿದಿದ್ದು, ಅದನ್ನು ತಡೆಯುವ ಯತ್ನ ಕೂಡ ನಡೆಯುತ್ತಿದೆ.
ಈ ಮಧ್ಯೆ, ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳೀನಿ ಕುಮಾರ ಕಟೀಲು ಅಧಿಕಾರ ಸ್ವೀಕರಿಸುವ ಸಮಾರಂಭಕ್ಕೆ ಕೂಡ ಹಲವು ಹಿರಿಯ ಸಚಿವರು ಗೈರಾಗಿದ್ದಾರೆ. ಬಿ.ಶ್ರೀರಾಮುಲು, ಆರ್ ಅಶೋಕ ಮೊದಲಾದವರು ಆಗಮಿಸಲಿಲ್ಲ. ಜಗದೀಶ್ ಶೆಟ್ಟರ್ ಬಂದು ಹಾಗೆಯೇ ತೆರಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ