*ಪ್ರದೋಷ್ಗೆ ಹೈಕೋರ್ಟ್ನಿಂದ ರಿಲೀಫ್*: *ಆರು ದಿನಗಳ ಕಾಲ ಜೈಲಿನಿಂದ ಹೊರಬರಲು ಅವಕಾಶ*

ಪ್ರಗತಿವಾಹಿನಿ ಸುದ್ದಿ: ತಂದೆಯ ತಿಥಿ ಕಾರ್ಯದಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮಾಫಿ ಸಾಕ್ಷಿ ಪ್ರದೋಷ್ಗೆ ಕೊನೆಗೂ ಅನುಮತಿ ಸಿಕ್ಕಿದೆ. ಈ ಸಂಬಂಧ ನಡೆದ ವಿಚಾರಣೆಯಲ್ಲಿ ದರ್ಶನ್ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರೂ, ಹೈಕೋರ್ಟ್ ಷರತ್ತುಬದ್ಧ ಅವಕಾಶ ನೀಡಿದೆ.
ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ಪೀಠ ಇಂದು ಅರ್ಜಿಯ ವಿಚಾರಣೆ ನಡೆಸಿತು. ತಂದೆಯ ತಿಥಿ ಕಾರ್ಯದಲ್ಲಿ ಭಾಗವಹಿಸಲು ಇಪ್ಪತ್ತು ದಿನಗಳ ಕಾಲ ಅವಕಾಶ ನೀಡುವಂತೆ ಪ್ರದೋಷ್ ಮನವಿ ಮಾಡಿದ್ದರು. ಆದರೆ, ಈ ಮನವಿಗೆ ದರ್ಶನ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ, ಅನುಮತಿ ನೀಡದಂತೆ ಕೋರಿದ್ದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ, ನವೆಂಬರ್ 7ರಿಂದ 12ರವರೆಗೆ ಆರು ದಿನಗಳ ಕಾಲ ಪಿತೃಕಾರ್ಯದಲ್ಲಿ ಭಾಗವಹಿಸಲು ಅನುಮತಿ ನೀಡಿದೆ.
ಆದರೆ, ಇದಕ್ಕೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ. ಪ್ರತಿದಿನ ಬೆಳಗ್ಗೆ 8 ಗಂಟೆಗೆ ಪ್ರದೋಷ್ನನ್ನು ಜೈಲಿನಿಂದ ಕರೆತರಬೇಕು. ಸಂಜೆ 6 ಗಂಟೆಗೆ ಮತ್ತೆ ಜೈಲಿಗೆ ಕರೆದೊಯ್ಯಬೇಕು. ಜೈಲಿನಿಂದ ಕರೆತರುವಾಗ ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಬೆಂಗಾವಲು ನೀಡಬೇಕು ಎಂದು ಸೂಚಿಸಲಾಗಿದೆ.
ಇದರ ಜೊತೆಗೆ, ಪಿತೃಕಾರ್ಯಕ್ಕೆ ಆಗಮಿಸುವ ವ್ಯಕ್ತಿಗಳ ಹೆಸರು ಮತ್ತು ಪುರೋಹಿತರ ಹೆಸರನ್ನು ಮುಂಚಿತವಾಗಿ ನೀಡಬೇಕು. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಯಾರನ್ನೂ ಭೇಟಿ ಮಾಡಲು ಅಥವಾ ಸಂಪರ್ಕಿಸಲು ಅವಕಾಶ ನೀಡಬಾರದು ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.



