ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹಿಜಾಬ್ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ಇದೀಗ ಅಧಿಕೃತವಾಗಿ ಮಧ್ಯಂತರ ಆದೇಶ ಪ್ರಕಟಿಸಿದೆ.
ಹಿಜಾಬ್ ವಿವಾದ ಹೈಕೋರ್ಟ್ ಪೂರ್ಣ ಪೀಠದಲ್ಲಿ ವಿಚಾರಣೆ ಹಂತದಲ್ಲಿದ್ದು, ನಿನ್ನೆ ಮೌಖಿಕ ಮಧ್ಯಂತರ ಆದೇಶ ನೀಡಿದ್ದ ನ್ಯಾಯಾಲಯ ಇದೀಗ ಲಿಖಿತ ರೂಪದಲ್ಲಿ ಆದೇಶ ಪ್ರಕಟಿಸಿದೆ.
ನಮ್ಮದು ನಾಗರಿಕ ಸಮಾಜ. ಧರ್ಮ, ಸಂಸ್ಕೃತಿ ಹೆಸರಲ್ಲಿ ಶಾಂತಿ ಸಾಮರಸ್ಯಕ್ಕೆ ಧಕ್ಕೆ ತರುವುದು ಸರಿಯಲ್ಲ. ಪ್ರತಿಭಟನೆಯಿಂದಾಗಿ ಶಾಲಾ-ಕಾಲೇಜುಗಳು ಬಂದ್ ಆಗಿರುವುದು ನೋವಿನ ಸಂಗತಿ. ಶಿಕ್ಷಣ ಸಂಸ್ಥೆಗಳನ್ನು ಅನಿರ್ದಿಷ್ಟ ಕಾಲ ಬಂದ್ ಮಾಡುವುದು ಸರಿಯಲ್ಲ. ಶೈಕ್ಷಣಿಕ ವರ್ಷ ವಿಳಂಬ ವಿದ್ಯಾರ್ಥಿ ಭವಿಷ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಸಂವಿಧಾನ ಹಾಗೂ ವೈಯಕ್ತಿಕ ಕಾನೂನಿನ ಗಂಭೀರ ವಿಚಾರಣೆ ನಡೆಯುತ್ತಿದೆ. ತುರ್ತು ಆಧಾರದ ಮೇಲೆ ವಿಚಾರಣೆ ನಡೆಸಲಾಗುತ್ತದೆ. ನಮ್ಮದು ವೈವಿದ್ಯಮಯ ಸಂಸ್ಕೃತಿ, ಭಾಷೆ, ಧರ್ಮಗಳ ದೇಶ. ಸರ್ಕಾರಕ್ಕೆ ತನ್ನದೇ ಆದ ಧರ್ಮ ಎಂಬುದಿಲ್ಲ. ಪ್ರತಿಯೊಬ್ಬ ನಾಗರಿಕನಿಗೂ ಧಾರ್ಮಿಕ ಆಚರಣೆಯ ಹಕ್ಕಿದೆ. ಆದರೆ ಹಕ್ಕು ಪರಿಪೂರ್ಣ ಹಕ್ಕಲ್ಲ, ನಿರ್ಬಂಧಗಳಿವೆ. ತರಗತಿಯಲ್ಲಿ ಹಿಜಾಬ್ ಧರಿಸುವುದು ಮೂಲಭೂತ ಹಕ್ಕೆ? ಎಂಬ ಪ್ರಶ್ನೆ ಇದೆ. ಈ ಬಗ್ಗೆ ಆಳವಾದ ವಿಚಾರಣೆ ನಡೆಯುವ ಅಗತ್ಯವಿದೆ. ಧರ್ಮ, ಸಂಸ್ಕೃತಿ ಹೆಸರಲ್ಲಿ ಶಾಂತಿ ಕದಡುವ ಯತ್ನ ಆಗಬಾರದು. ಶೀಘ್ರವಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಿ. ಮುಂದಿನ ಆದೇಶದವರೆಗೂ ವಿದ್ಯಾರ್ಥಿಗಳು ಯಾವುದೇ ಕೇಸರಿ ಶಾಲು, ಹಿಜಾಬ್, ಸ್ಕಾರ್ಪ್, ಧಾರ್ಮಿಕ ಬಾವುಟಗಳೊಂದಿಗೆ ತರಗತಿ ಪ್ರವೇಶಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಪೊಲೀಸ್ ಭದ್ರತೆಯಲ್ಲಿ ಶಾಲಾ-ಕಾಲೇಜು ಆರಂಭ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ