ಪ್ರಗತಿವಾಹಿನಿ ಸುದ್ದಿ; ಶಿಮ್ಲಾ: ದೇಶದ ವಿವಿಧ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಈ ನಡುವೆ ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದೆ. ಕುಲು ಪ್ರದೇಶದಲ್ಲಿ ಏಕಾಏಕಿ ಸಂಭವಿಸಿದ ನೈಸರ್ಗಿಕ ವಿಕೋಪಕ್ಕೆ ಹಲವರು ನಾಪತ್ತೆಯಾಗಿದ್ದಾರೆ. ಜನ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
ಹಿಮಾಚಲ ಪ್ರದೇಶದಲ್ಲಿ ರಾತ್ರಿಯಿಂದ ಭಾರಿ ಮಳೆಯಾಗುತ್ತಿದ್ದು, ಕುಲು ಜಿಲ್ಲೆಯಲ್ಲಿ ಮಹಿಳೆಯೋರ್ವರು ಮೃತಪಟ್ಟಿದ್ದಾರೆ. 8 ಜನರು ನಾಪತ್ತೆಯಾಗಿದ್ದಾರೆ. ಕುಲು ಜಿಲ್ಲೆಯ ಮಲಾನಾ ಹಾಗೂ ಮಣಿಕರಣ್ ಪ್ರದೇಶಗಳು ಹೊರ ಜಗತ್ತಿನ ಸಂಪರ್ಕವನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ.
ಹಿಮಾಚಲ ಪ್ರದೇಶದಾದ್ಯಂತ ಗುಡುಗು, ಸಿಡಿಲು ಸಹಿತ ಮಳೆಯ ಆರ್ಭಟ ಜೋರಾಗಿದ್ದು, ಗುಡ್ಡಗಾಡು ಪ್ರದೇಶಗಳಲ್ಲಿ ಮಳೆ ತೀವ್ರತೆ ಹೆಚ್ಚಾಗಿದೆ. ಧಲ್ಲಿ ಸುರಂಗದಲ್ಲಿ ಭೂಕುಸಿತವುಂಟಾಗಿದ್ದು, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಲು ಹಾಗೂ ಕಿನೌರ್ ಜಿಲ್ಲೆಯಲ್ಲಿ ಹಠಾತ್ ಪ್ರವಾಹ ಸಂಭವಿಸಿದ್ದು, ನಾಲ್ವರು ಮೃತಪಟ್ಟಿರುವ ಸಾಧ್ಯತೆಯಿದೆ. ಮಣಿಕರಣ್ ಕಣಿವೆಯಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದ್ದು, ಸುತ್ತಮುತ್ತಲ ಜನರಲ್ಲಿ ಆತಂಕ ಮನೆಮಾಡಿದೆ. ಲಾರ್ ಜಿ, ಪಾಂಡೋ, ಬಿಲಾಸಪುರ ವಲಯಗಳಲ್ಲಿ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ.
ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ; ರಾಜ್ಯದಲ್ಲಿ ಆರೆಂಜ್ ಅಲರ್ಟ್ ಘೋಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ