*ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ತಲೆಎತ್ತಿ ನೋಡುವಂತೆ ಮಾಡುವೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶಪಥ*
ಗ್ರಾಮ ಪಂಚಾಯಿತಿಗಳು ಸದೃಢಗೊಂಡರೆ ದೇಶದ ಅಭಿವೃದ್ಧಿ
ಪ್ರಗತಿವಾಹಿನಿ ಸುದ್ದಿ: ತಾರತಮ್ಯವಿಲ್ಲದೆ ಎಲ್ಲ ಗ್ರಾಮಗಳ ಅಭಿವೃದ್ಧಿ ಮಾಡುತ್ತೇನೆ. ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ತಲೆಎತ್ತಿ ನೋಡುವಂತೆ ಮಾಡುವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಶಪಥ ಮಾಡಿದ್ದಾರೆ.
ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕ್ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಹಿರೇ ಬಾಗೇವಾಡಿ ಇವರ ಸಂಯುಕ್ತಾಶ್ರಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಿರ್ಮಿಸಿರುವ ‘ಭಾರತ ನಿರ್ಮಾಣ ರಾಜೀವ್ ಗಾಂಧಿ ಸೇವಾ ಕೇಂದ್ರ ಹಾಗೂ ಹಿರೇ ಬಾಗೇವಾಡಿಯ ನೂತನ ಗ್ರಾಮ ಪಂಚಾಯತ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಗ್ರಾಮ ಪಂಚಾಯಿತಿಗಳು ಬಲಿಷ್ಠಗೊಂಡರೆ ಮಹಾತ್ಮ ಗಾಂಧೀಜಿ ಅವರ ಕನಸು ನನಸಾದಂತೆ ಎಂದರು.
ಗ್ರಾಮ ಪಂಚಾಯಿತಿಗಳನ್ನು ಬಲಿಷ್ಠಗೊಳಿಸುವುದು, ಸ್ಥಳೀಯರಿಗೆ ಅಧಿಕಾರ ನೀಡಿ, ಅವರಿಗೆ ಶಕ್ತಿ ತುಂಬಬೇಕು ಎಂಬುದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಉದ್ದೇಶವಾಗಿತ್ತು. ಅವರ ದೂರದೃಷ್ಟಿಯ ಫಲವಾಗಿ ಇಂದು ಪಂಚಾಯತಿಗಳಿಗೆ ಹೆಚ್ಚು ಅನುಧಾನ ಬರುವಂತಾಗಿದೆ. ಹಿರೇಬಾಗೇವಾಡಿ ಗ್ರಾಮದ ಬಗ್ಗೆ ನನಗೆ ವಿಶೇಷ ಅಭಿಮಾನವಿದ್ದು, ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದು ಸಚಿವರು ಹೇಳಿದರು.
ಈ ಹಿಂದೆ ಪಂಚಾಯತಿಗಳಿಗೆ ಅನುದಾನ ಇರಲಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗ್ರಾಮ ಪಂಚಾಯಿತಿಗಳಿಗೂ ಶಕ್ತಿ ಬಂತು. ಅಂದು ಕರೆಂಟ್ ಬಿಲ್ ಕಟ್ಟಲು ಪರದಾಡುತ್ತಿದ್ದ ಪಂಚಾಯಿಗಳು ಇಂದು ಕೋಟಿ ಕೋಟಿ ರೂಪಾಯಿ ಆದಾಯ ಹೊಂದಿವೆ. ಇದಕ್ಕೆ ಯುಪಿಎ ಸರ್ಕಾರದ ದೂರದೃಷ್ಟಿಯೇ ಕಾರಣ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಅನುದಾನ ತರುತ್ತೇನೆ. ನಾನು ಎಲ್ಲೇ ಇದ್ದರೂ ಗ್ರಾಮೀಣ ಕ್ಷೇತ್ರದ ಜನರ ಪ್ರೀತಿ ಮರೆತಿಲ್ಲ. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಕರ್ನಾಟಕ ಪಬ್ಲಿಕ್ ಸ್ಕೂಲ್, ಮುರಾರ್ಜಿ ದೇಸಾಯಿ ವಸತಿ ಶಾಲೆ ಆರಂಭಿಸಲಾಗಿದೆ ಎಂದರು.
ಯಾವುದೇ ವಿಚಾರದಲ್ಲೂ ನಾನು ಸ್ಥಳೀಯರಿಗೆ ಪ್ರಥಮ ಆದ್ಯತೆ ನೀಡುತ್ತಿದ್ದು ಬಸವಣ್ಣ, ಅಂಬೇಡ್ಕರ್ ಅವರ ಆಶಯದಂತೆ ಕೆಲಸ ಮಾಡುತ್ತಿರುವೆ. ಪ್ರಜಾಪ್ರಭುತ್ವದ ದೇವಾಲಯದಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸಿದಾಗ ಸಾರ್ಥಕತೆ ಸಿಗುತ್ತದೆ. ಎಲ್ಲರ ಕೆಲಸ ಮಾಡಿಕೊಟ್ಟಾಗ ಮನಸಿಗೆ ನೆಮ್ಮದಿ ಸಿಗುತ್ತದೆ. ಎಲ್ಲ ಸಿಬ್ಬಂದಿ, ಸದಸ್ಯರು ತಾರತಮ್ಯವಿಲ್ಲದೆ ಜನರ ಕೆಲಸ ಮಾಡಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ವಿಶೇಷ ಪ್ರಯತ್ನ ಮಾಡಿ ಪಂಚಾಯತಿ ಕಟ್ಟಡವನ್ನು ನಿರ್ಮಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಒಟ್ಟು 52 ಲಕ್ಷ ರೂಪಾಯಿ ಮಂಜೂರು ಮಾಡಿಸಲಾಗಿದೆ. ಎಲ್ಲರೂ ಕೈ ಜೋಡಿಸಿದ್ದರಿಂದ ಸುಸಜ್ಜಿತ ಕಟ್ಟಡ ನಿರ್ಮಾಣ ಆಗಿದೆ ಎಂದರು.
ಈ ವೇಳೆ ಬಡೇಕೊಳ್ಳಿಮಠದ ಸದ್ಗುರು ಶ್ರೀ ನಾಗೇಂದ್ರ ಮಹಾಸ್ವಾಮಿಗಳು, ಯುವ ಕಾಂಗ್ರೆಸ್ ಮುಖಂಡರಾದ ಮೃಣಾಲ್ ಹೆಬ್ಬಾಳಕರ್, ಅರಳಿಕಟ್ಟಿಯ ಶಿವಾಚಾರ್ಯ ಸ್ವಾಮಿಗಳು, ಮುತ್ನಾಳ ಕೇದಾರ ಪೀಠದ ಷ.ಬ್ರ.ಶಿವಾನಂದ ಶಿವಾಚಾರ್ಯರು, ದರ್ಗಾ ಅಜ್ಜನವರು, ಜಾಲಿ ಕರೆಮ್ಮ ದೇವಿಯ ಆರಾಧಕರಾದ ಉಳವಪ್ಪ ಅಜ್ಜನವರು, ತಾರಿಹಾಳ ಅಡವಿ ಸಿದ್ದೇಶ್ವರ ಮಠದ ಪೂಜ್ಯ ಶ್ರೀ ಅಡವೀಶ್ವರ ದೇವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ ಸಿ ಪಾಟೀಲ, ಸುರೇಶ ಇಟಗಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸ್ಮಿತಾ ಪಾಟೀಲ, ಉಪಾಧ್ಯಕ್ಷರಾದ ಪುಷ್ಪ ನಾಯ್ಕರ್ ಹಾಗೂ ಸರ್ವಸದಸ್ಯರು ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ