ಪ್ರಗತಿವಾಹಿನಿ ಸುದ್ದಿ: ಆಸ್ತಿ ವಿವಾದಕ್ಕೆ ಸ್ವಂತ ತಮ್ಮನನ್ನೇ ಅಣ್ಣ ಸುಪಾರಿ ಕೊಟ್ಟು ಮರ್ಡರ್ ಮಾಡಿಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಗೋಪನಾಳ್ ಗ್ರಾಮದ ಸಿದ್ದಲಿಂಗಪ್ಪ ಎಂಬವರು ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ.
ಸಿದ್ದಲಿಂಗಪ್ಪ ಬೋರ್ ಪಾಯಿಂಟ್ ಮಾಡಲು ತೆರಳಿದ್ದವರು ವಾಪಸ್ ಮನೆಗೆ ಬಂದಿರಲಿಲ್ಲ. ಅವರ ಮೃತದೇಹ ನಲ್ಲೂರು ಸಮೀಪದ ಭದ್ರಾ ಉಪ ನಾಲೆಯಲ್ಲಿ ಅ.22 ರಂದು ಪತ್ತೆಯಾಗಿತ್ತು. ಈ ಬಗ್ಗೆ ಅನುಮಾನಗೊಂಡ ಸಿದ್ದಲಿಂಗಪ್ಪ ಅವರ ಸೊಸೆ ದೊಡ್ಡಮ್ಮ ಇದು ಕೊಲೆ ಎಂದು ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ತನಿಖೆ ನಡೆಸಿದ್ದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಸತೀಶ್, ಪ್ರಭು, ಪ್ರಶಾಂತ್ ನಾಯ್ಕ ಸುಜಾತ ಹಾಗೂ ಶಿವಮೂರ್ತಪ್ಪ ಎಂಬವವರನ್ನು ಬಂಧಿಸಿದ್ದರು. ಆರೋಪಿಗಳ ವಿಚಾರಣೆ ವೇಳೆ ಹತ್ಯೆಗೆ ಸುಪಾರಿ ನೀಡಿರುವ ವಿಚಾರ ಬೆಳಕಿಗೆ ಬಂದಿದೆ.
ಸಿದ್ದಲಿಂಗಪ್ಪ ಅವರಿಗೆ ಪರಮೇಶ್ವರಪ್ಪ ಹಾಗೂ ಶಿವಮೂರ್ತಪ್ಪ ಎಂಬ ಇಬ್ಬರು ಸಹೋದರರಿದ್ದರು. ಆಸ್ತಿ ವಿಚಾರವಾಗಿ ಸಿದ್ದಲಿಂಗಪ್ಪ ಹಾಗೂ ಶಿವಮೂರ್ತಪ್ಪ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಈ ಬಗ್ಗೆ ಕೋರ್ಟ್‌ನಲ್ಲಿ ವಿಚಾರಣೆ ಕೂಡ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಶಿವಮೂರ್ತಪ್ಪ ತನ್ನ ಪುತ್ರ ಸತೀಶ್‌ಗೆ ಚಿಕ್ಕಪ್ಪ ಸಿದ್ದಲಿಂಗಪ್ಪನನ್ನ ಹೇಗಾದರೂ ಮಾಡಿ ಮುಗಿಸು ಎಂದು ಹೇಳಿದ್ದ. ಅದರಂತೆ ಸತೀಶ್ ಸಂಚೊಂದನ್ನ ರೂಪಿಸಿ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ