ಭಾರತದ ಇತಿಹಾಸ ಬಾಬರ್, ಔರಂಗಜೇಬನದ್ದಲ್ಲ, ಶಿವಾಜಿಯದ್ದು – ಹಿಮಂತ್ ಬಿಸ್ವಾಸ್ ಶರ್ಮಾ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರತದ ಇತಿಹಾಸ ಬಾಬರ್, ಔರಂಗಜೇಬನದ್ದಲ್ಲ, ಶಿವಾಜಿಯದ್ದು ಎಂದು ಆಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಶರ್ಮಾ ಪ್ರತಿಪಾದಿಸಿದ್ದಾರೆ.
ಗುರುವಾರ ಸಂಜೆ ಶಹಾಪುರದ ಶಿವಾಜಿ ಉದ್ಯಾನ ಬಳಿ ನಿರ್ಮಿಸಿರುವ ‘ಶಿವಚರಿತ್ರೆ ವಸ್ತು ಪ್ರದರ್ಶನ ತಾಣ’ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇಡೀ ದೇಶ ಔರಂಗಜೇಬನ ಕೈಯಲ್ಲಿದೆ ಎಂದು ಇತಿಹಾಸಕಾರರು ಬರೆದಿದ್ದಾರೆ. ಆದರೆ, ಶಿವಾಜಿ ಔರಂಗಜೇಬನಿಗಿಂತ ನೂರು ಪಟ್ಟು ಪರಾಕ್ರಮಿಯಾಗಿದ್ದರು. ವಿರೋಧ ಪಕ್ಷದವರು ಈ ದೇಶದ ಇತಿಹಾಸ ಬಾಬರ್, ಔರಂಗಜೇಬನದ್ದು ಎಂದು ದಾರಿ ತಪ್ಪಿಸಿದ್ದಾರೆ. ಆದರೆ, ಭಾರತದ ಇತಿಹಾಸ ನಿಜವಾಗಿ ಶಿವಾಜಿಯದ್ದಾಗಿದೆ, ರಾಣಿ ಚನ್ನಮ್ಮ, ಬಸವಣ್ಣ, ಗುರುಗೋವಿಂದ್ ಸಿಂಗ್ ಅವರದ್ದಾಗಿದೆ ಎಂದು ಅವರು ಹೇಳಿದರು.
ಮೊಘಲರು ದೇಶ ಹಾಳು ಮಾಡಲು ಪ್ರಯತ್ನಿಸಿದ್ದರು. ಈಗ ಕಾಂಗ್ರೆಸ್ಸಿನವರು ಆ ದಾರಿಯಲ್ಲಿ ಸಾಗುತ್ತಿದ್ದಾರೆ. ಕಾಂಗ್ರೆಸ್‌ನವರು ಕೇವಲ ಬಾಬರಿ ಮಸೀದಿ ಬಗ್ಗೆ ಮಾತನಾಡುತ್ತಾರೆ. ರಾಮಂಮಂದಿರದ ಬಗ್ಗೆ ಮಾತನಾಡುವುದಿಲ್ಲ. ಜನರು ಅವರಿಗೆ ತಕ್ಕ ಪಾಠ ಕಲಿಸಬೇಕಿದೆ. ಕಾಂಗ್ರೆಸ್ಸಿಗರು ಮೊಘಲರಿಗೆ ಸಮಾನ. ಅವರನ್ನು ಬೇರು ಸಮೇತ ಕಿತ್ತು ಹಾಕಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲ ತುಂಬಬೇಕು ಎಂದು ಅವರು ಕರೆ ನೀಡಿದರು.
ನಮಗೆ ಶಾಲೆ, ಕಾಲೇಜುಗಳ ಅಗತ್ಯವಿದೆಯೇ ವಿನಃ ಮದರಸಾಗಳಲ್ಲ. ಆಸ್ಸಾಂ ನಲ್ಲಿ ಈಗಾಗಲೆ ಇರುವ ಮದರಸಾಗಳನ್ನೆಲ್ಲ ಮುಚ್ಚಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಮುಚ್ಚಲಾಗುವುದು ಎಂದು ಅವರು ತಿಳಿಸಿದರು.
ಕಳೆದ 6 ವರ್ಷಗಳ ಸತತ ಪ್ರಯತ್ನದಿಂದಾಗಿ ಇಷ್ಟೊಂದು ಸುಂದರ ಶಿವಚರಿತ್ರ ಮಾಡಲು ಶಾಸಕ ಅಭಯ ಪಾಟೀಲ ಯಶಸ್ವಿಯಾಗಿದ್ದಾರೆ ಎಂದು ಹಿಮಂತ್ ಬಿಸ್ವಾಸ್ ಶರ್ಮಾ ಪ್ರಶಂಸಿಸಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಹಿಂದುಗಳೆಲ್ಲ ಒಂದಾಗಬೇಕಿದೆ. ನಮ್ಮ ನಮ್ಮಲ್ಲೇ ಒಡಕು ಉಂಟು ಮಾಡುವ ಯತ್ನ ನಡೆಯುತ್ತಿದೆ. ಈ ಬಗ್ಗೆ ಎಚ್ಚರರಾಗಬೇಕು ಎಂದರು.
ಮುಂದೆ ಬಿಜೆಪಿ ಸರಕಾರ ಬಂದರೆ ಮದರಸಾಗಳನ್ನೆಲ್ಲ ಮುಚ್ಚಲಾಗುವುದು. ಆಸ್ಮಾಂ ನಲ್ಲಿ ಈಗಾಗಲೆ ಇಂತಹ ದಿಟ್ಟ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಿಂದೂ ವಿರೋಧಿ ಟಿಪ್ಪುವನ್ನು ಹಿರೋ ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಆತ ಸಾವಿರಾರು ಹಿಂದೂ ಸ್ತ್ರೀಯರ ಮೇಲೆ ದೌರ್ಜನ್ಯ ಎಸಗಿದ್ದಾನೆ. ನಮಗೆ ನಿಜವಾಗಿ ಶಿವಾಜಿಯಂತವರು ಹಿರೋ ಎಂದು ಅವರು ಹೇಳಿದರು.
ಶಾಸಕ ಅಭಯ ಪಾಟೀಲ ಮಾತನಾಡಿ, ಶಿವಾಜಿ ಮಹಾರಾಜರ ಜೀವನದಲ್ಲಿ ನಡೆದ ಹಲವು ಘಟನೆಗಳನ್ನು ಯುವಪೀಳಿಗೆಗೆ ಪರಿಚಯಿಸಲು ಶಿವಚರಿತ್ರೆ ನಿರ್ಮಿಸಲಾಗಿದೆ. ಧ್ವನಿ ಮತ್ತು ಬೆಳಕು ಪ್ರದರ್ಶನದ ಮೂಲಕ ನೀರಿನ ಮೇಲೆ ಶಿವಚರಿತ್ರೆ ಪ್ರದರ್ಶನಗೊಳ್ಳುತ್ತಿರುವುದು ದೇಶದಲ್ಲೇ ಮೊದಲು. ಎಂದರು.
ಮೇಯರ್ ಶೋಭಾ ಸೋಮನ್ನಾಚೆ, ಉಪಮೇಯರ್ ರೇಷ್ಮಾ ಪಾಟೀಲ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ನಿರ್ಮಲಕುಮಾರ ಸುರಾನಾ, ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ಮುಳೆ, ಸಾಹಿತಿ ಡಾ. ಸರಜೂ ಕಾಟ್ಕರ್, ಎಂ.ಬಿ.ಝಿರಲಿ, ಶಾಸಕ ಅನಿಲ ಬೆನಕೆ ಮೊದಲಾದವರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ