5 ಸಾವಿರ ಪಿಸಿ ಭರ್ತಿಗೆ ಅಧಿಸೂಚನೆ; ಚಂದ್ರಶೇಖರ ಗುರೂಜಿ ಹಂತಕರ ಕ್ಷಿಪ್ರ ಬಂಧನ; ಗೃಹ ಸಚಿವ ಅರಗ ಜ್ಞಾನೇಂದ್ರ ಶ್ಲಾಘನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಾಸ್ತು ತಜ್ಞ ಚಂದ್ರಶೇಖರ ಗುರೂಜಿಯವರನ್ನು ಹುಬ್ಬಳ್ಳಿಯಲ್ಲಿ ಹತ್ಯೆ ಮಾಡಿದ ಆರೋಪಿಗಳನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಚಾಣಾಕ್ಷತನದಿಂದ ಬಂಧಿಸಿದ ರಾಮದುರ್ಗ ಪೊಲೀಸರ ಕಾರ್ಯವನ್ನು ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಅವರು ಬೆಳಗಾವಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪೊಲೀಸರಿಂದ ಲೋಪಗಳಾದರೆ ಅದನ್ನು ದೊಡ್ಡದಾಗಿ ಬಿಂಬಿಸಲಾಗುತ್ತದೆ. ಕೆಲವೊಮ್ಮೆ ಪೊಲೀಸರು ಜೀವದ ಹಂಗು ತೊರೆದು ಕೆಲಸ ಮಾಡಬೇಕಾಗುತ್ತದೆ. ಕಾರಣ ಅಪರಾಧಿಗಳ ಕೈಯ್ಯಲ್ಲಿ ಯಾವ ಶಸ್ತ್ರಾಸ್ತ್ರಗಳು ಇರುತ್ತವೆಂಬುದನ್ನು ಹೇಳಲಾಗದು. ಆದರೆ ರಾಮದುರ್ಗ ಡಿವೈಎಸ್ ಪಿ ಹಾಗೂ ಸಿಬ್ಬಂದಿ ಘಟನೆ ನಡೆದ ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿಗಳ ಬಂಧನ ಪ್ರಕ್ರಿಯೆ ನಿರ್ವಹಿಸಿದ ರೀತಿ ಅಭಿನಂದನೀಯ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಐದು ವರ್ಷಗಳ ಹಿಂದೆ ಒಂದು ಲಕ್ಷ ಪೊಲೀಸ್ ಹುದ್ದೆಗಳಲ್ಲಿ 35 ಸಾವಿರ ಹುದ್ದೆಗಳು ಖಾಲಿಯಿದ್ದವು. ಈಗ ಬರಿ 12 ಸಾವಿರ ಹುದ್ದೆಗಳು ಖಾಲಿ ಇವೆ. ಸಬ್ ಇನ್ಸ್ಪೆಕ್ಟರ್ ಹುದ್ದೆ ಭರ್ತಿಗೆ ಸಂಬಂಧಿಸಿದ ಹಗರಣ ಆಗದಿದ್ದಲ್ಲಿ ಇಂದಿಗೆ ಎಲ್ಲ ಸಬ್ ಇನ್ಸ್ಪೆಕ್ಟರ್ ಹುದ್ದೆಗಳೂ ಭರ್ತಿಯಾಗಿರುತ್ತಿದ್ದವು. ಇನ್ನೊಂದು ವಾರದಲ್ಲಿ 5 ಸಾವಿರ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುತ್ತಿದೆ ಎಂದರು.
ಅಗ್ನಿಶಾಮಕ ದಳದಲ್ಲೂ 2 ಸಾವಿರ ಸಿಬ್ಬಂದಿಗಳನ್ನು ಶೀಘ್ರವೇ ಆಯ್ಕೆ ಮಾಡಲಾಗುವುದು. ಸೀನ್ ಆಫ್ ಕ್ರೈಂ ಅಧಿಕಾರಿಗಳನ್ನೂ ಸದ್ಯವೇ ಭರ್ತಿ ಮಾಡಿಕೊಳ್ಳಲಾಗುವುದು. ಕಾರಣ ಅಪರಾಧ ಘಟನೆಗಳು ನಡೆದ ಸ್ಥಳಗಳಲ್ಲಿ ಕೇಸನ್ನು ಇನ್ನಷ್ಟು ಬಲಪಡಿಸಲು ಸಾಧ್ಯವಾಗುತ್ತದೆ. ಯಡಿಯೂರಪ್ಪ ಹಾಗೂ ಬೊಮ್ಮಾಯಿ ನೇತೃತ್ವದ ಸರಕಾರಗಳು ಪೊಲೀಸ್ ಇಲಾಖೆಗೆ ನೀಡಿದಷ್ಟು ಅನುದಾನವನ್ನು ಯಾವುದೇ ಸರಕಾರಗಳೂ ನೀಡಿಲ್ಲ. ಎಲ್ಲ ಕಡೆ ಎಫ್ಎಸ್ಎಲ್ ಲ್ಯಾಬ್ ಗನ್ನು ತೆರೆಯಲಾಗುತ್ತದೆ. ಗುಜರಾತ್ ಮಾದರಿಯಲ್ಲಿ ಎಫ್ ಎಸ್ಎಲ್ ಯುನಿವರ್ಸಿಟಿ ಪ್ರಾರಂಭಿಸಲು ಯೋಜಿಸಿದ್ದು ಕೇಂದ್ರ ಗೃಹ ಸಚಿವರು ಅನುದಾನ ನೀಡಿದ್ದಾರೆ. ಜಮೀನು ಇತ್ಯಾದಿಗಳನ್ನು ನೀಡುವ ಪ್ರಕ್ರಿಯೆ ನಡೆಸಲಾಗುವುದು. ಒಟ್ಟಾರೆ ಪೊಲೀಸ್ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಎಲ್ಲ ಕಾರ್ಯಗಳು ನಡೆದಿವೆ ಎಂದರು.
ಸಿದ್ದರಾಮಯ್ಯ, ಡಿಕೆಶಿ ಏನಾಗಬೇಕೆಂದು ಸ್ಪಷ್ಟಪಡಿಸಲಿ:
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಅವರು ಕೇವಲ ಮಾತನಾಡುತ್ತಿದ್ದಾರೆ. ಅವರು ಏನಾಗಬೇಕೆಂಬುದನ್ನು ಸ್ಪಷ್ಟವಾಗಿ ಹೇಳಲಿ. ಅವರ ಅಧಿಕಾರಾವಧಿಯಲ್ಲಿ ಸಾಕಷ್ಟು ಹಗರಣಗಳಾಗಿವೆ. 2015ರಲ್ಲಿ ಪಿಎಸ್ ಐ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದರು. ಇದರಲ್ಲಿ ಐಪಿಎಸ್ ಅಧಿಕಾರಿ ವಿರುದ್ಧ ಎಫ್ಐಆರ್ ಆಗಿತ್ತು. ಅದನ್ನು ಸಿದ್ದರಾಮಯ್ಯ ಸರಕಾರ ಮುಚ್ಚಿ ಹಾಕಿತು. ಅವರ ಕಾಲದಲ್ಲಿ ಪಿಯುಸಿ ಪ್ರಶ್ನೆಪತ್ರಿಕೆ ನಾಲ್ಕು ಬಾರಿ ಲೀಕ್ ಆಗಿತ್ತು. ತುಮಕೂರಿನ ಶಿವಕುಮಾರ ಎಂಬುವವರನ್ನು ಬಂಧಿಸಿದ್ದು ಬಿಟ್ಟರೆ ಇದರಲ್ಲಿ ಶಾಮೀಲಾಗಿದ್ದ ಯಾವ ಅಧಿಕಾರಿಯನ್ನೂ ಬಂಧಿಸಲಿಲ್ಲ. ಪ್ರಕರಣವನ್ನೇ ಮುಚ್ಚಿ ಹಾಕಿದರು.
2014-15ರಲ್ಲಿ ಎಪಿಪಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಮೌಲ್ಯಮಾಪನದ ನಂತರ ಉತ್ತರ ಪತ್ರಿಕೆಗಳನ್ನೇ ತಿದ್ದುವ ಮೂಲಕ 61 ಜನರನ್ನು ಪಾಸು ಮಾಡಿದ ಪ್ರಕರಣದಲ್ಲಿ ಒಬ್ಬರನ್ನೂ ಬಂಧಿಸಿಲ್ಲ. ಈ ಜನ ಮೊನ್ನೆಯವರೆಗೂ ಸೇವೆಯಲ್ಲಿದ್ದು ನಮ್ಮ ಸರಕಾರ ಬಂದ ನಂತರ ಕ್ರಮ ವಹಿಸಲಾಗಿದೆ.
ರಾಜ್ಯದಲ್ಲಿ ಈಗಾಗಲೇ ಶೇ.49 ರಷ್ಟು ಪೊಲೀಸರಿಗೆ ವಸತಿಗೃಹಗಳನ್ನು ಹಸ್ತಾಂತರ ಮಾಡಿದ್ದು ಗೃಹ 20:25 ಯೋಜನೆಯಡಿ ಇನ್ನೂ 11 ಸಾವಿರ ಗೃಹಗಳನ್ನು ಹಸ್ತಾಂತರಿಸಲಾಗುವುದು.
2ಸಾವಿರ ಕೋಟಿ ರೂ. ವೆಚ್ಚದಲ್ಲಿ ರಾಜ್ಯಾದ್ಯಂತ ಡಬಲ್ ಬೆಡ್ರೂಂ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಸಿದ್ದರಾಮಯ್ಯ ಅವರ ಸರಕಾರದಲ್ಲಿ ವರ್ಷಕ್ಕೆ 4-5 ಪೊಲೀಸ್ ಠಾಣೆ ಕಟ್ಟಡ ನಿರ್ಮಿಸಲಾಗುತ್ತಿತ್ತು. ನಮ್ಹೊಮ ಸರಕಾರ ಈ ವರ್ಷದಲ್ಲಿ ಹೊಸ 100 ಪೊಲೀಸ್ ಠಾಣೆ ಕಟ್ಟಡಗಳನ್ನು ನಿರ್ಮಿಸಿಕೊಡುತ್ತಿದೆ ಎಂದರು. ಸೈಬರ್ ಕ್ರೈಂ ಪೊಲೀಸ್ ಠಾಣೆ ಜಿಲ್ಲೆಗೊಂದಿದ್ದು ಅವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರು.
ಇದೇ ವೇಳೆ ಬೆಳಗಾವಿಯಲ್ಲಿ ನಿರ್ಮಿಸಿದ ಪೊಲೀಸ್ ಇತಿಹಾಸ ಬಿಂಬಿಸುವ ಪ್ರದರ್ಶನಾಲಯದ ಬಗ್ಗೆ ಗೃಹ ಸಚಿವರು ಶ್ಲಾಘನೆ ವ್ಯಕ್ತಪಡಿಸಿದರು.
ಪೊಲೀಸ್ ಕಮೀಷನರ್ ಡಾ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಉತ್ತರ ವಲಯದ ಐಜಿಪಿ ಸತೀಶಕುಮಾರ, ಡಿಸಿಪಿ ರವೀಂದ್ರ ಗಡಾದಿ, ನಗರದ ಕ್ರೈಂ ವಿಭಾಗದ ಡಿಸಿಪಿ ಪಿ.ವಿ. ಸ್ನೇಹಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಗಾಂವಿ ಹಾಗೂ ನಗರದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕೆಎಲ್ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಗೆ ಮಲೇಶಿಯಾದ ಗಣ್ಯರ ಭೇಟಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ