
ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಪ್ರಕರಣ ಸುದ್ದಿಯಾಗುತ್ತಿರುವ ಸಂದರ್ಭದಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಉದ್ಯಮಿಯೊಬ್ಬರಿಗೆ ಶಿಕ್ಷಕಿಯೊಬ್ಬರು ಹನಿಟ್ರ್ಯಾಪ್ ಮಾಡಿದ್ದು, ಒಂದು ಮುತ್ತಿಗೆ 50 ಸಾವಿರೂ ರೂಪಾಯಿಯಂತೆ ಲಕ್ಷ ಲಕ್ಷ ದೋಚಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಲ್ಲಿ ನಡೆದಿದೆ.
ಶಿಕ್ಷಕಿಯೊಬ್ಬಳು ಪ್ರೀ ಸ್ಕೂಲ್ ಗೆ ಬರುತ್ತಿದ್ದ ಮಕ್ಕಳ ಪೋಷಕರನ್ನೇ ಟಾರ್ಗೆಟ್ ಮಾಡಿಕೊಂಡು ಸುಲಿಗೆಗೆ ಇಳಿದಿದ್ದಳು. ಶಿಕ್ಷಕಿ ಹಾಗೂ ಗ್ಯಾಂಗ್ ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ.
ಶ್ರೀದೇವಿ ರುಡಿಗಿ ಎಂಬ ಯುವತಿ ಪ್ರೀಸ್ಕೂಲ್ ನಡೆಸುತ್ತಿದಳು. 2023ರಲ್ಲಿ ರಾಕೇಶ್ ಎಂಬ ಪೋಷಕ ತನ್ನ ಮಗುವನ್ನು ಸ್ಕೂಲ್ ಗೆ ಸೇರಿಸುವ ನಿಟ್ಟಿನಲ್ಲಿ ಪರಿಚಯನಾಗಿದ್ದಾನೆ. ಹೀಗೆ ಆರಂಭವಾದ ಇಬ್ಬರ ಪರಿಚಯ ಸ್ನೇಹಕ್ಕೆ ತಿರುಗಿದೆ. ರಾಕೇಶ್ ನಿಂದ ಶಾಲೆ ನಿರ್ವಹಣೆ, ತಂದೆಗೆ ಚಿಕಿತ್ಸೆ ಎಂದು ೪ ಲಕ್ಷ ರೂಪಾಯಿ ಸಾಲವೆಂದು ಶ್ರೀದೇವಿ ಪಡೆದಿದ್ದಳು. ಹಣ ವಾಪಾಸ್ ಕೇಳಿದಾಗ ಕೊಟ್ಟಿಲ್ಲ. ತುಂಬಾ ಕಷ್ಟ ಎಂದು ಡ್ರಾಮಾ ಮಾಡಿ ನೀವು ಶಾಲೆಯ ಪಾರ್ಟನರ್ ಆಗಿ ಎಂದು ಹೇಳಿದ್ದಳು. ಅದಕ್ಕೆ ಆತ ಒಪ್ಪಿದ್ದಾರೆ. ಇಬ್ಬರ ನಡುವೆ ಸಲುಗೆ, ಸುತ್ತಾಟ ಆರಂಭವಾಗಿದ್ದು, ಶ್ರೀದೇವಿಗಾಗಿ ರಾಕೇಶ್ ಹೊಸ ಸಿಮ್ ಖರೀದಿಸಿದ್ದಾನೆ. ಲಕ್ಷ ಲಕ್ಷ ಹಣ ಖರ್ಚಾಗುತ್ತಿದ್ದಂತೆ ರಾಕೇಶ್ ಶ್ರೀದೇವಿಗೆ ಹಣ ವಾಪಸ್ ಕೇಳಿದ್ದಾನೆ. ಅದಕ್ಕೆ ಆಕೆ ನಿನ್ನ ಜೊತೆ ರಿಲೇಶನ್ ಶಿಪ್ ನಲ್ಲಿ ಇರುತ್ತೇನೆ ಎಂದು ಹೇಳಿ ೧೫ ಲಕ್ಷ ರೂಪಾಯಿ ಕೇಳಿದ್ದಾಳೆ ಇದಕ್ಕೆ ರಾಕೇಶ್ ಒಪ್ಪಿಲ್ಲ.
ಬಳಿಕ ಮಾತನಾಡಲೆಂದು ರಾಕೇಶ್ ಮನೆಗೆ ಬಂದಿದ್ದ ಶ್ರೀದೇವಿ ಆತನಿಗೆ ಮುತ್ತಿಟ್ಟು ಇಬ್ಬರ ನಡುವೆ ಸಂಬಂಧವಿದೆ ಎಂದು ಹೇಳುವುದಾಗಿ ಬ್ಲ್ಯಾಕ್ ಮೇಲ್ ಮಾಡಿ ೫೦ ಸಾವಿರ ಹಣ ಪಡೆದಿದ್ದಾಳೆ. ಪದೇ ಪದೇ ಹೀಗೆ ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದಂತೆ ಆಕೆಗಾಗಿ ಖರೀದಿಸಿದ್ದ ಸಿಮ್ ನ್ನು ರಾಕೆಶ್ ಮುರಿದು ಬಿಸಾಕಿದ್ದ. ಮಾ.12 ರಂದು ರಾಕೇಶ್ ಪತ್ನಿಗೆ ಕರೆ ಮಾಡಿದ್ದ ಶ್ರೀದೇವಿ ಮಕ್ಕಳ ಸ್ಕೂಲ್ ಟಿಸಿ ಕಳುಹಿಸಿಕೊಡುತ್ತೇನೆ ನಿಮ್ಮ ಪತಿಯನ್ನು ಸ್ಕೂಲಿಗೆ ಕಳುಹಿಸಿ ಎಂದಿದ್ದಾಳೆ. ಅದರಂತೆ ರಾಕೇಶ್ ಸ್ಕೂಲ್ ಗೆ ತೆರಳಿದ್ದ ವೇಳೆ ಶ್ರೀದೇವಿ ಹಾಗೂ ಆಕೆಯ ಗ್ಯಾಂಗ್ ಅಲ್ಲಿದ್ದರು. ಸಾಗರ್ ಹಾಗೂ ಗಣೇಶ್ ಎಂಬುವವರು ರಾಕೇಶ್ ಗೆ ಬೆದರಿಕೆ ಹಾಕಿದ್ದಾರೆ. ಸಾಗರ್ ಜೊತೆ ಶ್ರೀದೇವಿ ನಿಶ್ಚಿತಾರ್ಥವಾಗಿದೆ. ಆದರೆ ನೀನು ಆಕೆಯೊಂದಿಗೆ ಮಜಾ ಮಾಡುತ್ತಿದ್ದೀಯಾ ಎಂದು ಆವಾಜ್ ಹಾಕಿದ್ದಾರೆ. ವಿಷಯ ಯಾರಿಗೂ ಗೊತ್ತಗಬಾರದೆಂದರೆ 1 ಕೋಟಿ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಅಷ್ಟು ಹಣವಿಲ್ಲ ಎಂದಾಗ 20 ಲಕ್ಷ ನೀಡಬೇಕು ಎಂದಿದ್ದಾರೆ. 1.90 ಲಕ್ಷ ಹಣ ಪಡೆದು ರಾಕೇಶ್ ನನ್ನು ಕಳುಹಿಸಿದ್ದ ಆರೋಪಿಗಳು ಮತ್ತೆ ಉಳಿದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸತ್ತ ರಾಕೇಶ್ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಟೀಚರ್ ಶ್ರೀದೇವಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.