Belagavi NewsBelgaum NewsCrimeKannada NewsKarnataka NewsNational

*ಬೆಳಗಾವಿಯಲ್ಲಿ ಫ್ರಿಡ್ಜ್ ಶಾರ್ಟ್ ಸರ್ಕ್ಯೂಟ್‌ಗೆ ಮನೆ ಬೆಂಕಿಗಾಹುತಿ*: *ಸಮಯಪ್ರಜ್ಞೆಯಿಂದ ಮಕ್ಕಳಿಬ್ಬರ ರಕ್ಷಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಫ್ರಿಡ್ಜ್‌ನಲ್ಲಿ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ಹೊತ್ತಿಕೊಂಡು, ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾದ ಘಟನೆ ಬೆಳಗಾವಿಯ ಸಹ್ಯಾದ್ರಿ ನಗರದಲ್ಲಿ ನಡೆದಿದೆ.

ಅದೃಷ್ಟವಶಾತ್ ಮನೆಯೊಳಗೆ ಸಿಲುಕಿದ್ದ ಇಬ್ಬರು ಮಕ್ಕಳು ಸುರಕ್ಷಿತವಾಗಿ ಪಾರಾಗಿದ್ದು, ಮನೆ ಮಾಲೀಕರ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ.

ಸಹ್ಯಾದ್ರಿ ನಗರದ ಶ್ರೀದೇವಿ ಜೋಶಿ ಅವರಿಗೆ ಸೇರಿದ ಮೊದಲ ಮಹಡಿಯ ಮನೆಯಲ್ಲಿ ರೂಪಾ ನಾಶಿಪುಡಿ ಅವರು ಇಬ್ಬರು ಮಕ್ಕಳೊಂದಿಗೆ ಬಾಡಿಗೆಗೆ ವಾಸವಾಗಿದ್ದರು. ಅಮಾವಾಸ್ಯೆ ಹಿನ್ನೆಲೆಯಲ್ಲಿ ರೂಪಾ ಅವರು ಮನೆಗೆ ಬೀಗ ಹಾಕಿಕೊಂಡು ದೇವಸ್ಥಾನಕ್ಕೆ ತೆರಳಿದ್ದರು ಎನ್ನಲಾಗಿದೆ.

ಈ ವೇಳೆ ಮನೆಯಲ್ಲಿದ್ದ ಫ್ರಿಡ್ಜ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ದಟ್ಟ ಹೊಗೆ ಆವರಿಸಿದೆ. ಫ್ರಿಡ್ಜ್ ಸ್ಫೋಟಗೊಂಡ ಪರಿಣಾಮ ಬೆಂಕಿ ಮತ್ತಷ್ಟು ವ್ಯಾಪಿಸಿದೆ ಎನ್ನಲಾಗಿದೆ.

ಮನೆಯೊಳಗಿದ್ದ ಮಕ್ಕಳ ಚೀರಾಟ ಕೇಳಿದ ಮನೆ ಮಾಲಕಿ ಶ್ರೀದೇವಿ ಜೋಶಿ ಅವರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ದಟ್ಟ ಹೊಗೆಯ ನಡುವೆಯೇ ಮನೆಯೊಳಗೆ ಪ್ರವೇಶಿಸಿ ಮಕ್ಕಳಿಬ್ಬರನ್ನು ಸುರಕ್ಷಿತವಾಗಿ ಹೊರಗೆ ಕರೆತಂದು ರಕ್ಷಿಸಿದ್ದಾರೆ.

ಶ್ರೀದೇವಿ ಅವರ ಸಮಯಪ್ರಜ್ಞೆಯಿಂದ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಮನೆಯಲ್ಲಿದ್ದ ಹಲವು ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ ಎನ್ನಲಾಗಿದೆ. ಈ ಘಟನೆ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button