Kannada NewsNationalPolitics

*ಮಮತಾ ಬ್ಯಾನರ್ಜಿ, ಕೇಜ್ರಿವಾಲ್ ಪೊಲೀಸ್ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ: ದೆಹಲಿಯ ಜಂತರ್ ಮಂತರ್ ಬಳಿ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ಮುಂದಾದ ವಿರೋಧ ಪಕ್ಷಗಳ ಹಲವು ಪ್ರಮುಖ ನಾಯಕರನ್ನು ದೆಹಲಿ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.

‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನೆಗೆ ಬೆಂಬಲ ಸೂಚಿಸಿ ತೆರಳುತ್ತಿದ್ದ ವೇಳೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಮತಾ ಬ್ಯಾನರ್ಜಿ ಅವರು ಬಾಯಿ ಮೇಲೆ ಬ್ಯಾಂಡೇಜ್ ಹಾಕಿಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸೌತ್ ಅವೆನ್ಯೂ ಸಮೀಪದ ಬಸ್ ನಿಲ್ದಾಣದಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ಸಂಸದರಾದ ಡೆರೆಕ್ ಒ’ಬ್ರೇನ್, ಡೋಲಾ ಸೇನ್ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಬಸ್‌ನಲ್ಲಿ ಕರೆದೊಯ್ದರು.

ಈ ವೇಳೆ ಪೊಲೀಸ್ ಬಸ್‌ನಿಂದಲೇ ವಿಡಿಯೋ ಸಂದೇಶ ನೀಡಿದ ಮಮತಾ ಬ್ಯಾನರ್ಜಿ, ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಜನರ ಧ್ವನಿಯನ್ನು ಗಟ್ಟಿಗೊಳಿಸಲು ಇಂಡಿಯಾ ಮೈತ್ರಿಕೂಟದ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಇನ್ನು ಬೆಳಗ್ಗೆಯಿಂದಲೇ ದೆಹಲಿ ಪೊಲೀಸರ ನಿಗಾದಲ್ಲಿದ್ದ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರು ಮನೆಯಿಂದ ಹೊರಬಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದು ವಶಕ್ಕೆ ಪಡೆದಿದ್ದಾರೆ.

ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಿಪಿಎಂ ಸಂಸದ ಜಾನ್ ಬ್ರಿಟಾಸ್ ಸೇರಿದಂತೆ ಹಲವು ನಾಯಕರನ್ನೂ ಪೊಲೀಸರು ವಶಕ್ಕೆ ಪಡೆದು ಛತ್ರಸಾಲ ಕ್ರೀಡಾಂಗಣದಲ್ಲಿನ ಬಂಧನ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯ ಹಾಗೂ ಚುನಾವಣಾ ಆಯೋಗದ ವಿರುದ್ಧದ ಆರೋಪಗಳನ್ನು ಖಂಡಿಸಿ ಇಂಡಿಯಾ ಮೈತ್ರಿಕೂಟ ಪ್ರತಿಭಟನೆ ನಡೆಸಿದೆ.

ಶುಕ್ರವಾರ ವಿಪಕ್ಷಗಳ ನಿಯೋಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಮನವಿ ಮಾಡಿತ್ತು. ಅಲ್ಲದೆ, ಕಳೆದ ಎರಡು ವರ್ಷಗಳಲ್ಲಿ ನಡೆದ ಎಲ್ಲಾ ವಿಧಾನಸಭಾ ಚುನಾವಣೆಗಳನ್ನು ರದ್ದುಗೊಳಿಸುವಂತೆಯೂ ಒತ್ತಾಯಿಸಿತ್ತು.

ಇದರ ಬೆನ್ನಲ್ಲೇ ಶನಿವಾರ ಜಂತರ್ ಮಂತರ್ ಬಳಿ ವಿಪಕ್ಷಗಳು ಬೃಹತ್ ಪ್ರತಿಭಟನೆ ಆಯೋಜಿಸಿದ್ದವು. ಮುಂದಿನ ಹಂತವಾಗಿ ಸೋಮವಾರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ವಿಪಕ್ಷ ನಾಯಕರು ನಿರ್ಧರಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button