ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯ ಬೈಲಹೊಂಗಲದ ಯುವತಿ ತಬಸ್ಸುಮ್ ಸವದತ್ತಿ ಸಾವಿನ ಪ್ರಕರಣ ಮತ್ತಷ್ಟು ತಿರುವು ಪಡೆದಿದೆ.
ತಬಸ್ಸುಮ್ ಈ ಮೊದಲು ಬೆಂಗಳೂರಿನಿಂದ ಬೆಳಗಾವಿಗೆ ಬಂದು ಆಸ್ಪತ್ರೆಗೆ ದಾಖಲಾಗಿದ್ದಳು, ಮತ್ತು ಅಪರಿಚಿತ ಯುವಕನೊಬ್ಬ ಆಕೆಯನ್ನು ಬೆಳಗಾವಿಯ ಆಸ್ಪತ್ರೆಗೆ ದಾಖಲಿಸಿದ್ದ ಎಂದು ತಿಳಿಯಲಾಗಿತ್ತು. ಆದರೆ ತಬಸ್ಸುಮ್ ಳನ್ನು ಬೆಂಗಳೂರಿನಿಂದ ಕರೆ ತಂದ ಯುವಕ ಆಕೆಯ ಸ್ನೇಹಿತ ಎಂಬುದು ತನಿಖೆಯ ವೇಳೆ ಪತ್ತೆಯಾಗಿದೆ.
ತಬಸ್ಸುಮ್ ಗಗನ ಸಖಿಯಾಗುವ ಕನಸು ಹೊತ್ತಿದ್ದು, ಒಂದು ತಿಂಗಳ ಹಿಂದಷ್ಟೇ ಬೆಂಗಳೂರಿನ ಕಾಲ್ ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಆ ಕೆಲಸಕ್ಕೆ ಹೊಂದಿಕೊಳ್ಳಲಾಗದಕ್ಕೆ ಅದನ್ನು ಬಿಟ್ಟು ಗೋವಾದಲ್ಲಿದ್ದ ಸ್ನೇಹಿತನನ್ನು ಭೇಟಿಯಾಗಲು ಅ. 7 ರಂದು ಗೋವಾಕ್ಕೆ ಬಂದಿದ್ದಳು. ಈ ವೇಳೆ ಅನಾರೋಗ್ಯಕ್ಕೀಡಾಗಿದ್ದಳು. ತಬಸ್ಸುಮ್ ಳನ್ನು ವಾಪಸ್ ಬೆಂಗಳೂರಿಗೆ ಕಳಿಸುವ ಸಲುವಾಗಿ ಗೋವಾ ಬಸ್ ನಿಲ್ದಾಣಕ್ಕೆ ಕರೆ ತಂದಾಗ ಅಸ್ವಸ್ಥಗೊಂಡಿದ್ದ ಆಕೆ ಗೋವಾ ಬಸ್ ನಿಲ್ದಾಣದಲ್ಲಿ ಬಿದ್ದು, ತಲೆಗೆ ಏಟಾಗಿತ್ತು. ಬಳಿಕ ಆಕೆಗೆ ಪಣಜಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬೆಂಗಳೂರಿಗೆ ಕರೆದೊಯ್ಯಲಾಗಿತ್ತು.
ಬೆಂಗಳೂರಿನ ಪಿಎಚ್ ಸಿ ಒಂದರಲ್ಲಿ ಮತ್ತೆ ಚಿಕಿತ್ಸೆ ನೀಡಿ ಅ. 11 ರಂದು ಅಲ್ಲಿಂದ ಹೊರಟು ಸ್ನೇಹಿತ ಆಕೆಯನ್ನು ಬೆಳಗಾವಿಗೆ ಕರೆತಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದ. ಆದರೆ ಜಿಲ್ಲಾಸ್ಪತ್ರೆಯಲ್ಲಿ ಪೊಲೀಸ್ ಪ್ರಕರಣವಾಗುತ್ತದೆ ಎಂದು ಹೇಳಿದಾಗ ಹೆದರಿ ಅಲ್ಲಿಂದ ಕಾಲ್ಕಿತ್ತಿದ್ದ ಎನ್ನಲಾಗಿದೆ.
ಪೊಲೀಸರು ಎಲ್ಲ ದಿಕ್ಕಿನಿಂದಲೂ ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಪ್ರಕರಣ ಹೊಸ ಹೊಸ ತಿರುವು ಪಡೆಯುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ