ಹುಬ್ಬಳ್ಳಿ-ಧಾರವಾಡದಲ್ಲಿ ತಾತ್ಕಾಲಿಕ ಮಾರುಕಟ್ಟೆ ಬಂದ್

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ದೇಶಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿ ಮುಂಜಾಗೃತಾ ಕ್ರಮವಾಗಿ ಸೋಂಕು ತಡೆಗಟ್ಟುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ತಾತ್ಕಾಲಿಕ ಮಾರುಕಟ್ಟೆಯನ್ನು ರದ್ದು ಮಾಡಿದೆ.

ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಗತ್ಯ ದಿನಸಿ ಸಾಮಗ್ರಿಗಳನ್ನು ಹಾಗೂ ತರಕಾರಿಗಳನ್ನು ದೊರೆಯುವಂತೆ ಮಾಡಲು ನಿರ್ಧಿಷ್ಟ ಸಾಮಾಜಿಕ ಅಂತರ ಗುರುತಿಸಿ ಸರಿಯಾಗಿ ನಿಂತು ಪಡೆಯಲು ಅವಳಿ ನಗರಗಳ ವ್ಯಾಪ್ತಿಯಲ್ಲಿ ಕೆಲವು ಮಾರುಕಟ್ಟೆ ತೆರೆಯಲಾಗಿತ್ತು. ನೆಹರು ಮೈದಾನ, ಬಸ್ ನಿಲ್ದಾಣ, ಇದ್ಗಾ ಮೈದಾನ, ಹಾಗೂ ಧಾರವಾಡದ ಕೆಲ ಸ್ಥಳಗಳಲ್ಲಿ ಮಾರುಕಟ್ಟೆ ಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಸಾರ್ವಜನಿಕರು ಜಿಲ್ಲಾಡಳಿತ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಕಟ್ಟುನಿಟ್ಟಿನ ನಿರ್ದೇಶನ ಪಾಲಿಸದ ಹಿನ್ನೆಲೆಯಲ್ಲಿ ಎಲ್ಲಾ ತಾತ್ಕಾಲಿಕ ಮಾರುಕಟ್ಟೆಗಳನ್ನು ರದ್ದು ಮಾಡಲಾಗಿದೆ.

ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ವಾರ್ಡ್ ಹಂತದಲ್ಲಿಯೇ ಬೀದಿಬದಿ ವ್ಯಾಪಾರಸ್ತರಿಗೆ ಹಾಗೂ ಚಿಲ್ಲರೆ /ಸಗಟು ಮಾರಾಟಗಾರರು ಸಂಚರಿಸಿ ವ್ಯಾಪಾರ ನಡೆಸಲು ಅವಕಾಶ ಮಾಡಲಾಗಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಅನವಶ್ಯಕವಾಗಿ ಮನೆ ಹೊರಗೆ ಬರದೆ ಸರಕಾರದ ನಿಯಮಾವಳಿಗಳನ್ನು ಎಲ್ಲರೂ ಪಾಲಿಸಬೇಕೆಂದು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button