Kannada NewsLatest

*ಹುಬ್ಬಳ್ಳಿ-ಧಾರವಾಡ ಸಂಚಾರ ದಟ್ಟಣೆ ನಿರ್ವಹಣೆ: ಅವಳಿ ನಗರದ 5 ಪ್ರಮುಖ ವೃತ್ತಗಳ ಅಭಿವೃದ್ಧಿಗೆ ಕ್ರಮ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಂಗಳೂರಿನ ತರುವಾಯ ರಾಜ್ಯದ ಎರಡನೇ ದೊಡ್ಡ ನಗರವಾಗಿರುವ ಹುಬ್ಬಳ್ಳಿ-ಧಾರವಾಡ ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡುವ ನಿಟ್ಟಿನಲ್ಲಿ ಅವಳಿ ನಗರದ ಐದು ಪ್ರಮುಖ ವೃತ್ತಗಳ ಅಭಿವೃದ್ಧಿಗೆ ಕ್ರಮ ವಹಿಸುವುದಾಗಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಎಸ್ ಹೊರಟ್ಟಿ ಹೇಳಿದರು.

ಈ ಕುರಿತು ಬೆಳಗಾವಿ ಸುವರ್ಣಸೌಧದ ಪರಿಷತ್ತಿನ ಸಮಿತಿ ಸಭಾಂಗಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆಲಪ್ಪ ಆಚಾರ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಪೊಲೀಸ್ ಆಯುಕ್ತರ ಸಭೆ ಜರುಗಿಸಿ ಮಾತನಾಡಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಒಟ್ಟು ೭ ಲಕ್ಷಕ್ಕೂ ಅಧಿಕ ವಾಹನಗಳು ನೊಂದಣಿಯಾಗಿವೆ. ಇದರ ಜೊತೆ ಅವಳಿ ನಗರಕ್ಕೆ ಆಗಮಿಸುವ ಇತರೆ ವಾಹನಗಳಿಂದಾಗಿ ಸಂಚಾರದಲ್ಲಿ ದಟ್ಟಣೆ ಉಂಟಾಗಿದೆ. ಮುಂದೆ ಬೆಂಗಳೂರು ರೀತಿಯಲ್ಲಿ ಸಂಚಾರಿ ತೊಂದರೆಯಾಗದAತೆ ತಡೆಯಲು ಯೋಜನೆ ರೂಪಿಸಲಾಗುವುದು. ಈ ಕುರಿತು ಜನವರಿ ಮಾಹೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಪೊಲೀಸ್ ಆಯುಕ್ತರ ಸಭೆ ನಡೆಸಲಾಗುವುದು ಎಂದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಜನರು ಜನರು ಬವಣೆ ಪಡುವಂತಾಗಿದೆ. ಪೊಲೀಸ್ ಆಯುಕ್ತರು ಈಗಾಗಲೇ ನಗರ ಸಂಚಾರಿ ದಟ್ಟಣೆ ಕುರಿತು ತಜ್ಞರ ವರದಿ ಪಡೆದುಕೊಂಡಿದ್ದಾರೆ. ವರದಿಯನ್ನು ಅನುಷ್ಠಾನಗೊಳಿಸಲು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ವ್ಯಾಪಾರಸ್ಥರ ಮನಒಲಿಸಿ ಕಾರ್ಯರೂಪಕ್ಕೆ ತರಲಾಗುವುದು. ನಗರ ಮಧ್ಯಭಾಗದಲ್ಲಿ ವ್ಯಾಪರಸ್ಥರ ಸಗಟು ಮಾರಾಟ ಅಂಗಡಿಗಳಿವೆ. ಮಾಲು ತುಂಬಿದ ಲಾರಿಗಳು ನಗರದಲ್ಲಿ ಪ್ರವೇಶಿಸುತ್ತವೆ. ಇದರಿಂದ ಸಂಚಾರಿ ತೊಂದರೆ ಉಂಟಾಗುತ್ತದೆ. ಸಗಟು ವ್ಯಾಪರಿಗಳು ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರವಾಗಬೇಕು. ನಗರದ ಪ್ರಮುಖ ವೃತ್ತಗಳು, ಪುಟ್‌ಪಾತ್, ಪಾರ್ಕಿಂಗ್‌ಗಳನ್ನು ಸರಿಪಡಿಸಬೇಕಿದೆ ಎಂದರು.

ಹುಬ್ಬಳ್ಳಿ ಧಾರವಾಡ ನಗರದ ಪೊಲೀಸ್ ಆಯುಕ್ತ ಲಾಭುರಾಮ್ ಮಾತನಾಡಿ, ಅವಳಿನಗರದಲ್ಲಿ ಅಭಿವೃದ್ಧಿ ಪಡಿಸಬೇಕಾದ ೧೭ ಸಂಚಾರಿ ವೃತ್ತಗಳಿವೆ. ಇವುಗಳ ಜೊತೆಗೆ ಮಹಾನಗರ ಪಾಲಿಕೆ ಪಾವತಿ ಪಾರ್ಕಿಂಗ್‌ಗಳನ್ನು ಆರಂಭಿಸಬೇಕು. ನಗರದಲ್ಲಿರುವ ಟ್ರಾನ್ಸ್ಪೋರ್ಟ್ ಕಚೇರಿಗಳನ್ನು ಹೊರ ವಲಯಕ್ಕೆ ಸ್ಥಳಾಂತರಿಸಬೇಕು. ನಗರದ ಆಟೋ ರಿಕ್ಷಾ ನಿಲ್ದಾಣಗಳನ್ನು ನಿಯಂತ್ರಿಸಬೇಕು. ಪುಟ್ ಪಾತ್ ವ್ಯಾಪಾರಿಗಳಿಗೆ ಪ್ರತ್ಯೇಕ ಮಾರುಕಟ್ಟೆ ನಿರ್ಮಿಸಬೇಕು. ರಸ್ತೆಗಳ ಮಧ್ಯ ರಸ್ತೆ ವಿಭಾಜಕಗಳ ಅಳವಡಿಸಬೇಕು. ಧಾರವಾಡದ ನ್ಯಾಯಾಲಯದ ಬಿ.ಆರ್.ಟಿ.ಎಸ್ ಬಸ್ ನಿಲ್ದಾಣ ತೆರವುಗೊಳಸಬೇಕು. ನಗರದಲ್ಲಿನ ಗೌಳಿಗರು ಹಾಗೂ ಜಾನವಾರಗಳನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದರು.

ಈಗಾಗಲೇ ನಗರದಲ್ಲಿ ಬೆಳಗ್ಗೆ ೮ ರಿಂದ ಮಧ್ಯಾಹ್ನ ೧೨ ಗಂಟೆವರೆಗೆ ಹಾಗೂ ಸಂಜೆ ೪ ರಿಂದ ೮ ಗಂಟೆಗೆ ವರೆಗೆ ಭಾರಿ ವಾಹನಗಳ ಓಡಾಟವನ್ನು ನಿಷೇಧ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಅವಳಿ ನಗರದ ಸಮಸ್ಯಾತ್ಮಕ ವೃತ್ತಗಳಿವು : ಹುಬ್ಬಳ್ಳಿಯ ಶಾರದ ಭವನ, ಇಂಡಿ ಪಂಪ್, ಬಂಕಾಪುರ, ಅಕ್ಷಯ್ ಪಾರ್ಕ್, ಶಿರೂರು ಪಾರ್ಕ್, ಎಂ.ಟಿ.ಮಿಲ್, ವಾಣಿವಿಲಾಸ, ಹೊಸೂರು, ಸರ್ವೋದಯ, ಗಣೇಶ ವಿಲಾಸ್ ಹಾಗೂ ಕಮರಿಪೇಟೆ ಪೊಲೀಸ್ ಠಾಣೆ ವೃತ್ತಗಳು ಸಮಸ್ಯಾತ್ಮಕ ವೃತ್ತಗಳಾಗಿವೆ. ಇದೇ ರೀತಿ ಧಾರವಾಡದ ಸಪ್ತಾಪುರ ಬಾವಿ, ಶ್ರೀನಗರ, ದಾಸನಕೊಪ್ಪ, ಕೋರ್ಟ್, ಕಲಘಟಗಿ ರಸ್ತೆಯ ಟೋಲ್ ನಾಕ, ಓಲ್ಡ್ ಎಸ್.ಪಿ ಆಫೀಸ್ ವೃತ್ತಗಳು ಸಂಚಾರಿ ದಟ್ಟಣೆಗೆ ಕಾರಣವಾಗಿವೆ. ಈ ವೃತ್ತಗಳಲ್ಲಿ ಹುಬ್ಬಳ್ಳಿಯ ಶಾರದ , ಬಂಕಾಪುರ, ಅಕ್ಷಯ ಪಾರ್ಕ್, ಧಾರವಾಡದ ದಾಸನಕೊಪ್ಪ ಹಾಗೂ ಕೋರ್ಟ್ ವೃತ್ತಗಳನ್ನು ಅಭಿವೃದ್ಧಿ ಪಡಿಸಲು ಸಭೆಯಲ್ಲಿ ಸಮ್ಮತಿ ನೀಡಲಾಯಿತು. ಶಾಸಕರಾದ ಅಬ್ಬಯ್ಯ ಪ್ರಸಾದ್, ವಿ.ಎಸ್.ಸಂಕನೂರು, ಪ್ರದೀಪ್ ಶೆಟ್ಟರ್, ಗೃಹ ಇಲಾಖೆ ಸರ್ಕಾರದ ಕಾರ್ಯದರ್ಶಿ ಡಾ.ರಜನೀಶ್ ಗೋಯಲ್, ಹುಬ್ಬಳ್ಳಿ ಧಾರವಾಡ ಉಪ ಪೊಲೀಸ್ ಆಯುಕ್ತ ಗೋಪಾಲಸ್ವಾಮಿ ಎಂ ಬ್ಯಾಕೋಡ್ ಉಪಸ್ಥಿತರಿದ್ದರು.

*ಅಭಿವೃದ್ಧಿಗೊಂಡ ತಿಂಗಳೊಳಗೆ ಹಾಳಾದ ಜಾಂಬೋಟಿ-ಜತ್ತ ರಾಜ್ಯ ಹೆದ್ದಾರಿ….!*

https://pragati.taskdun.com/jamboti-jatta-highwaypoor-workpwdpublic-problems/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button