ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿಯ ಪ್ರತಿಷ್ಠಿತ ಬಿವಿಬಿ ಕಾಲೇಜಿನಲ್ಲಿ ಕಾರ್ಪೊರೇಟರ್ ಮಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಯನ್ನು ವಿದ್ಯಾನಗರ ಠಾಣೆ ಪೊಲಿಸರು ಬಂಧಿಸಿದ್ದಾರೆ.
ಹುಬ್ಬಳ್ಳಿ-ಧರವಾಡ ಮಹಾನಗರ ಪಾಲಿಕೆ ಕಾರ್ಪೊರೇಟರ್ ನಿರಂಜನ ಹಿರೇಮಠ ಅವರ ಮಗಳು ನೇಹಾ ಹಿರೇಮಠ ಎಂಬುವವರನ್ನು ಇಂದು ಮಧ್ಯಾಹ್ನ ಕಾಲೇಜಿನ ಆವರಣದಲ್ಲಿಯೇ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಕೃತ್ಯದ ಬಳಿಕ ಆರೋಪಿ ಘಟನಾ ಸ್ಥಳದಲ್ಲೇ ಚಾಕು ಬಿಟ್ಟು ಪರಾರಿಯಾಗುತ್ತಿದ್ದ. ಈ ವೇಳೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಬೆಳಗಾವಿ ಜಿಲ್ಲೆಯ ಸವದತ್ತಿ ನಿವಾಸಿ ಫಯಾಜ್ ಎಂದು ತಿಳಿದುಬಂದಿದೆ. ಈತ ಕೂಡ ಬಿವಿಬಿ ಕಾಲೇಜಿನಲ್ಲಿಯೇ ಓದುತ್ತಿದ್ದ. ಮೃತ ನೇಹಾ ಬಿವಿಬಿ ಕಾಲೇಜಿನಲ್ಲಿ ಎಂಬಿಎ ಓದುತ್ತಿದ್ದಳು. ಹಲವು ದಿನಗಳಿಂದ ಫಯಾಜ್ ತನ್ನನ್ನು ಪ್ರೀತಿಸುವಂತೆ ನೇಹಾಳ ಬೆನ್ನುಬಿದ್ದಿದ್ದ. ನೇಹಾ ಪೋಷಕರು ಕೂಡ ಫಯಾಜ್ ಗೆ ಎಚ್ಚರಿಕೆ ನೀಡಿದ್ದರು. ನೇಹಾ ಪ್ರೀತಿಸಲು ನಿರಾಕರಿಸಿದ್ದಕ್ಕೆ ಇಂದು ಎಂಬಿಎ ಎಕ್ಸಾಂ ಮುಗಿಸಿ ಕಾಲೇಜಿನಿಂದ ನೇಹಾ ಹೊರ ಬರುತ್ತಿದ್ದಂತೆ ಚಾಕುವಿನಿಂದ ಆಕೆಯ ಕತ್ತಿನ ಎರಡು ಕಡೆ ಇರಿದಿದ್ದಾನೆ.
ರಕ್ತದ ಮಡುವಲ್ಲಿ ಬಿದ್ದಿದ್ದ ನೇಹಾಳನ್ನು ತಕ್ಷಣ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ನೇಹಾ ಮೃತಪಟ್ಟಿದ್ದಾಳೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ