ಹುಬ್ಬಳ್ಳಿಯಲ್ಲಿ ಫುಟ್ ವೇರ್ ವ್ಯಾಪಾರಿಗೆ ಕೊರೊನಾ ಸೋಂಕು

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ನಿಟ್ಟಿನಲ್ಲಿ ಸೋಂಕಿತ ವಾಸವಿದ್ದ ಮನೆಯ ಮೂರು ಕೀ.ಮೀ ವ್ಯಾಪ್ತಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಹುಬ್ಬಳ್ಳಿಯ ಮುಲ್ಲಾ ಓಣಿಯ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ದೃಢವಾಗಿದ್ದರಿಂದ ವಾಣಿಜ್ಯ ನಗರಿಯಲ್ಲಿ ಆತಂಕ ಆವರಿಸಿದೆ. ಲಾಕ್ ಡೌನ್ ಇದ್ದರೂ ಜನರು ಅಷ್ಟಾಗಿ ಗಂಭೀರವಾಗಿ ಪರಿಗಣಿಸದೇ ರಸ್ತೆಗಳಲ್ಲಿ ಓಡಾಟ ನಡೆಸಿದ್ದರು. ಇದೀಗ ಜಿಲ್ಲೆಯ 2ನೇ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಶೇ.80ರಷ್ಟು ಹುಬ್ಬಳ್ಳಿಯೇ ಡೇಂಜರ್ ಝೋನ್ ಆಗಿದೆ.

2 ವಾರಗಳ ಹಿಂದೆ ಹೊಸ ಯಲ್ಲಾಪುರದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿತ್ತು. 3 ದಿನಗಳ ಹಿಂದೆಯಷ್ಟೇ ಆತ ಗುಣಮುಖನಾಗಿದ್ದ. ಇದೀಗ ಹುಬ್ಬಳ್ಳಿಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವದು ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.

ಸೋಂಕಿತ ವ್ಯಕ್ತಿ ದೆಹಲಿ ನಂಟು ಇದ್ದು, ಆತನ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 16 ಜನರಿಗೆ ಕ್ವಾರಂಟೈನ್ ಗೆ ಕಳುಹಿಸಲಾಗಿದೆ. ಸೋಂಕಿತ ವ್ಯಕ್ತಿ ಹಾಗೂ ಆತನ ಸಹೋದರ ಇಬ್ಬರೂ ಫುಟ್ ವೇರ್ ಬಿಸಿನೆಸ್ ಟೂರ್ ಮೇಲೆ ದೆಹಲಿ, ಆಗ್ರಾ, ಮುಂಬೈ ಸುತ್ತಾಡಿದ್ದಾರೆ. ಹಲವು ಕಡೆ ಸುತ್ತಾಡಿರುವದು ಸಾಕಷ್ಟು ಆತಂಕವನ್ನುಂಟು ಮಾಡಿದೆ.

ಸೋಂಕಿತ ಪ್ರದೇಶ ಮುಲ್ಲಾ ಓಣಿಯಿಂದ 3 ಕಿ.ಮೀ. ಸುತ್ತಳತೆಯ ಪ್ರದೇಶಗಳು ಕಂಟೈನ್ಮೆಂಟ್ ನಿರ್ಮಾಣ ಮಾಡಲಾಗಿದೆ. ಒಟ್ಟಾರೆ ಹು-ಧಾ ಮಹಾನಗರ ಪಾಲಿಕೆಯ 7 ವಲಯ ಕಚೇರಿಗಳು ಹಾಗೂ 36 ವಾರ್ಡ್ ಸೇರಿ 500ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button