
ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸ್ಥಿತಿ ದಿನೇ ದಿನೇ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಆಸ್ಪತ್ರೆಗೆ ತೆರಳಲು ಆಂಬುಲೆನ್ಸ್ ಗಳು ಸಿಗದೇ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಬರದ ಹಿನ್ನಲೆಯಲ್ಲಿ ಕೊರೊನಾ ಸೋಂಕಿತ ಪೊಲೀಸರು ರಾತ್ರಿಯಿಡಿ ಟೆರೇಸ್ ಮೇಲೆ ಪರದಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಆವರಣದಲ್ಲಿರುವ ಉಡಾನ್ ಅಂತ್ಯೋದಯ ಕಲ್ಯಾಣ ಕೇಂದ್ರದಲ್ಲಿ ಉಳಿದುಕೊಂಡಿದ್ದ ರೈಲ್ವೆ ಪೊಲೀಸರಿಗೆ ಸೋಂಕು ತಗುಲಿದೆ. ಇಬ್ಬರು ಎಎಸ್‍ಐ, ಓರ್ವ ಪಿಸಿಗೆ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಬರದಿರುವುದರಿಂದ ರೈಲ್ವೆ ಪೊಲೀಸರು ರೈಲ್ವೆ ಕಟ್ಟಡದ ಟೆರೆಸ್ ಮೇಲೆ ಉಳಿದುಕೊಂಡಿದ್ದರು.
ಮೂವರು ರೈಲ್ವೆ ಪೊಲೀಸರಲ್ಲಿ ಸೋಂಕು ಪತ್ತೆಯಾಗಿ ಎರಡು ದಿನ ಕಳೆದರೂ ಅಂಬುಲೆನ್ಸ್ ಬಂದಿಲ್ಲ. ಅಲ್ಲದೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದರೂ ಕರೆದುಕೊಂಡು ಹೋಗಿರಲಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಆರೋಗ್ಯ ಇಲಾಖೆ ಸ್ಥಳಕ್ಕೆ ಬಂದು ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿದೆ.
ಇಲ್ಲಿನ ಉಡಾನ್ ಅಂತ್ಯೋದಯ ಕಲ್ಯಾಣ ಕೇಂದ್ರದಲ್ಲಿ 30-40 ಸಿಬ್ಬಂದಿಗಳಿದ್ದು, ಮೂವರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಉಳಿದ ಸಿಬ್ಬಂದಿಯಲ್ಲಿ ಆತಂಕ ಹೆಚ್ಚಿದೆ.