
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದಲ್ಲಿ ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾರರಿಗೆ ಆಮಿಷವೊಡ್ಡಲು ಕೆಲ ಅಭ್ಯರ್ಥಿಗಳು ಅಕ್ರಮದ ಹಾದಿ ಹಿಡಿದಿದ್ದರೆ ಇತ್ತ ಜಿಲ್ಲೆಯ ಪೊಲೀಸ್ ವ್ಯವಸ್ಥೆ ಕೂಡ ಚುರುಕಾಗಿದ್ದು ಇದಕ್ಕೆ ಬ್ರೇಕ್ ಹಾಕುವ ಕಾರ್ಯದಲ್ಲಿ ತೊಡಗಿದೆ.

ಜಿಲ್ಲೆಯಲ್ಲಿ ಬುಧವಾರ ಲಕ್ಷಾಂತರ ರೂ. ಅಕ್ರಮ ಹಣವನ್ನು ಚೆಕ್ ಪೋಸ್ಟ್ ಕರ್ತವ್ಯದಲ್ಲಿರುವ ಪೊಲೀಸರು ಜಪ್ತಿ ಮಾಡಿದ್ದಾರೆ. ಹಾರೂಗೇರಿ ಕ್ರಾಸ್ ನಲ್ಲಿರುವ ಚೆಕ್ ಪೋಸ್ಟ್ ನಲ್ಲಿ ವಾಹನದಲ್ಲಿ ಯಾವುದೇ ದಾಖಲೆಗಳಿಲ್ಲದೆ ಸಾಗಾಟವಾಗುತ್ತಿದ್ದ 2,30,410 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ ಕಾಗವಾಡ ಚೆಕ್ ಪೋಸ್ಟ್ ನಲ್ಲಿ 70 ಲಕ್ಷ ರೂ. ಜಪ್ತಿ ಮಾಡಲಾಗಿದೆ.

ಸವದತ್ತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೋದಾಮು ಒಂದರ ಮೇಲೆ ದಾಳಿ ನಡೆಸಿರುವ ಪೊಲೀಸರು ಮತದಾರರಿಗೆ ವಿತರಿಸಲು ದಾಸ್ತಾನು ಮಾಡಿದ್ದ 3.5 ಲಕ್ಷ ರೂ. ಮೌಲ್ಯದ ಹೊಲಿಗೆ ಯಂತ್ರಗಳು, ಕೂಲರ್ ಗಳು, ಕುಕ್ಕರ್ ಮತ್ತಿತರ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ.
ಏತನ್ಮಧ್ಯೆ ಬುಧವಾರ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಎಚ್ಚೆತ್ತ ಚಿಕ್ಕೋಡಿ ಪೊಲೀಸರು ಗೋಡೆಗಳಿಗೆ ಪರವಾನಗಿ ಇಲ್ಲದೆ ಹಚ್ಚಿದ ಪೋಸ್ಟರ್ ಗಳು, ಬ್ಯಾನರ್ ಗಳು, ಗೋಡೆ ಬರಹ ಇತ್ಯಾದಿಗಳನ್ನು ತೆರವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ.

ಅಕ್ರಮ ಮದ್ಯಕ್ಕಂತೂ ಮಿತಿಯೇ ಇಲ್ಲ!: ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಅಬಕಾರಿ ದಾಳಿ ನಡೆಸಿ 8290 ರೂ ಮೌಲ್ಯದ 21.2 ಲೀಟರ್ ಅಕ್ರಮ ಮದ್ಯವನ್ನು ವಶಪಡಿಸಿಕೊಂಳ್ಳಲಾಗಿದೆ. 90 ಎಂಎಲ್‌ನ 236 ಟೆಟ್ರಾ ಪ್ಯಾಕ್‌ಗಳು. ಹಾಗೂ ಒಂದು ಮೋಟಾರ್ ಬೈಕ್ ವಶಪಡಿಸಿಕೊಂಡಿದ್ದು ಈ ಸಂಬಂಧ ಮೋಳೆಯ ಆರೋಪಿ ಮಧುಕರ ಕಾಂಬಳೆಯನ್ನು ಬಂಧಿಸಲಾಗಿದೆ.
ಅಥಣಿ ತಾಲೂಕಿನ ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯ ಖೋತನಟ್ಟಿ ಗ್ರಾಮದಲ್ಲಿ ದಾಳಿ ನಡೆಸಿ 86.5 ಲೀಟರ್ ಐಎಂಎಲ್ ವಶಪಡಿಸಿಕೊಳ್ಳಲಾಗಿದೆ. ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಥಣಿ ಸಿಪಿಐ ಸ್ಕ್ವಾಡ್ ನಿಂದ ತೀರ್ಥ ಗ್ರಾಮದಲ್ಲಿ ದಾಳಿ ನಡೆಸಿ 12 ಸಾವಿರ ರೂ. ಮೌಲ್ಯದ 35 ಲೀಟರ್ ಐಎಂಎ ವಶಪಡಿಸಿಕೊಳ್ಳಲಾಗಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಥಣಿ ಪಟ್ಟಣದಲ್ಲಿ ಪೊಲೀಸರು ದಾಳಿ ನಡೆಸಿ ಸುಮಾರು 6500 ರೂ. ಮೌಲ್ಯದ 25 ಲೀಟರ್ ಕಳ್ಳಭಟ್ಟಿ ವಶಪಡಿಸಿಕೊಂಡಿದ್ದಾರೆ
ಅಥಣಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬಾವನಸೌಂದತ್ತಿ ಗ್ರಾಮದಲ್ಲಿ ಅಬಕಾರಿ ಇಲಾಖೆ ತಂಡ ದಾಳಿ ನಡೆಸಿ 8.640 ಲೀ. ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಬಾವನಸೌಂದತ್ತಿಯ ರಾಜು ಕೃಷ್ಣಪ್ಪ ಮರಿನಾಯಕ್ ಎಂಬಾತನನ್ನು ಬಂಧಿಸಿ ಅಬಕಾರಿ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ