
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ನೂತನ ಸಚಿವರ ಪ್ರಮಾಣ ವಚನವನ್ನು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಮಾಡಬೇಕು ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಿಎಂ ಯಡಿಯೂರಪ್ಪನವರಿಗೆ ಮನವಿ ಮಾಡಿಕೊಂಡರು.
ಭಾನುವಾರ ಬೆಂಗಳೂರಿನ ಸಿಎಂ ಯಡಿಯೂರಪ್ಪ ನಿವಾಸದಲ್ಲಿ ನಾಲ್ಕನೇ ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಅವರನ್ನು ಸನ್ಮಾನಿಸಿ ವಿನಂತಿಸಿಕೊಂಡರು.
ಉತ್ತರ ಕರ್ನಾಟಕದ ಬಗ್ಗೆ ಅಪಾರ ಕಾಳಜಿ ಇರುವ ಯಡಿಯೂರಪ್ಪನವರು ನಾಲ್ಕನೇ ಬಾರಿ ರಾಜ್ಯದ ಸಿಎಂ ಆಗಿದ್ದಾರೆ. ಆದ್ದರಿಂದ ಉತ್ತರ ಕರ್ನಾಟದ ಶಕ್ತಿ ಸೌಧದಲ್ಲಿ ನೂತನ ಸಚಿವರಿಗೆ ಪ್ರಮಾಣ ವಚನ ಸ್ವೀಕರಿಸುವಂತೆ ಮಾಡಿಕೊಡಬೇಕೆಂದರು.
ಅಖಂಡ ಕರ್ನಾಟಕದ ಚಿಂತನೆಗಾಗಿ ಬೆಳಗಾವಿ ಸುವರ್ಣ ವಿಧಾನ ಸೌಧ ಕಟ್ಟುವಲ್ಲಿ ವಿಶೇಷ ಆಸಕ್ತಿ ವಹಿಸಿ ಕಾರ್ಯನಿರ್ವಹಿಸಿದ್ದಾರೆ.
ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿ ಈ ತಾರತಮ್ಯ ಹೋಗಲಾಡಿಸುವಂತೆ ನೂರಾರು ವಿವಿಧ ಮಠಾಧೀಶರು ಸೌಧದ ಎದುರು ಧರಣಿ ಕುಳಿತಾಗ ಸ್ಪಂದಿಸಿದ್ದರು. ವಿಶೇಷವಾಗಿ ಕರ್ನಾಟಕದ ಅಭಿವೃದ್ಧಿ ಮಾಡುವಲ್ಲಿ ಮಂಚೂಣಿಯಲ್ಲಿ ನಿಂತಿದ್ದರು ಎಂದು ಸ್ವಾಮಿಗಳು ಹೇಳಿದರು.
ಜಾತಿ, ಮತ, ಪಥ, ಪಂಗಡ ಎನ್ನದೆ ಸರ್ವ ಧರ್ಮದ ಮಠಗಳಿಗೆ ಸಮಾನವಾಗಿ ಅನುದಾನ ನೀಡಿದ ಶ್ರೇಯ ಅವರಿಗೆ ಸಲ್ಲುತ್ತದೆ. ರೈತರಿಗಾಗಿ ವಿಶೇಷ ಯೋಜನೆ ತಂದಕೊಟ್ಟ ಯಡಿಯೂರಪ್ಪನವರು ಸಿಎಂ ಆಗಿರುವುದು ಅಭಿಮಾನದ ಸಂಗತಿ. ಇನ್ನಷ್ಟು ರಾಜ್ಯದ ಅಭಿವೃದ್ಧಿಯನ್ನು ಮಾಡಬೇಕೆಂದು ಹಾರೈಸಿದರು.
ಯಡಿಯೂರಪ್ಪ ಮಾತನಾಡಿ, ಅಖಂಡ ಕರ್ನಾಟಕದ ಎಲ್ಲ ಮಠಾಧೀಶರು ನನಗೆ ಹಾರೈಸಿದ್ದಾರೆ. ಉತ್ತರ ಕರ್ನಾಟಕದ ಮಠಾಧೀಶರು ಕೂಡ ನನಗೆ ಮನತುಂಬಿ ಹಾರೈಸಿದ್ದಾರೆ. ಎಲ್ಲ ಮಠಾಧೀಶರಿಗೆ ಹಾಗೂ ಹುಕ್ಕೇರಿ ಹಿರೇಮಠಕ್ಕೆ ಚಿರ ಋಣಿಯಾಗಿರುತ್ತೇನೆ ಎಂದರು.
ವೀರಶೈವ ಲಿಂಗಾಯತ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ ಕಂಕನವಾಡಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ