ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ : ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನವನ್ನು ಆರಂಭಿಸಿರುವ ಮೊದಲ ಮಠ ಹುಕ್ಕೇರಿಯ ಹಿರೇಮಠ. ಗುಬ್ಬಿ ಗೂಡನ್ನು ಕೊಟ್ಟ ಮೊದಲ ಮಠ ಹುಕ್ಕೇರಿಯ ಹಿರೇಮಠ. ಹೀಗೆ ಅನೇಕ ಸಮಾಜಮುಖಿ ಕಾರ್ಯವನ್ನು ಮಾಡುವುದರೊಂದಿಗೆ ಇವತ್ತು ನರೇಂದ್ರ ಮೋದಿಯವರ ಪ್ಲಾಸ್ಟಿಕ್ ಮುಕ್ತ ಭಾರತದ ಅಭಿಯಾನದ ಕನಸು ಮೊದಲು ಕಂಡವರು ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಎಂದು ತಾಲೂಕಿನ ದಂಡಾಧಿಕಾರಿ ರೇಷ್ಮಾ ತಾಳಿಕೋಟಿ ಅವರು ಹೇಳಿದರು.
ಗಾಂಧಿ ಜಯಂತಿ ಅಂಗವಾಗಿ ಹುಕ್ಕೇರಿಯ ಹಿರೇಮಠದ ವತಿಯಿಂದ ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.
ಇವತ್ತು ಎಲ್ಲರೂ ಕೂಡ ಅರ್ಥಮಾಡಿಕೊಂಡು ಕೇವಲ ಅಭಿಯಾನವನ್ನು ಅಭಿಯಾನವನ್ನಾಗಿಯೇ ಮಾಡಿಕೊಳ್ಳದೆ ನಾವೆಲ್ಲ ಶ್ರೀಗಳ ಕನಸನ್ನು ನನಸು ಮಾಡುವ ಅವಶ್ಯಕತೆ ಇದೆ. ನರೇಂದ್ರ ಮೋದಿಯವರ ಪ್ರಧಾನಿ ಅವರ ಕನಸನ್ನು ನನಸು ಮಾಡುವ ಅವಶ್ಯಕತೆ ಇದೆ. ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ತಾನಾಗಿಯೇ ಬಂದರೆ ಖಂಡಿತವಾಗಿಯೂ ಭಾರತ ಸ್ವಚ್ಛವಾಗುತ್ತದೆ. ಈ ಭಾರತದಿಂದ ಪ್ಲಾಸ್ಟಿಕ್ ಮುಕ್ತ ಮಾಡಬಹುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಇವುಗಳ ಬಗ್ಗೆ ಅರಿವು ಮೂಡಿಸುತ್ತಾರೆ. ಆದರೆ ಆ ಅರಿವನ್ನು ಅಳವಡಿಸಿಕೊಂಡು ನಡೆಯುವುದು ಸಾರ್ವಜನಿಕರ ಕೆಲಸವಾಗಿದೆ. ಗಾಂಧಿ ಇಚ್ಛೆ ಪಟ್ಟಿರುವುದು ಸ್ವಚ್ಛ ಭಾರತ ಮತ್ತು ಸ್ವಚ್ಛಂದ ಮನಸ್ಸುಗಳನ್ನು. ಗಾಂಧೀಜಿಗೆ ಕೃತಜ್ಞತೆ ಸಲ್ಲಿಸಬೇಕಾದರೆ ನಾವು ಆ ನಿಟ್ಟಿನಲ್ಲಿ ನಡೆಯುವ ಅವಶ್ಯಕತೆ ಇದೆ ಎಂದರು.
ಪುರಸಭೆಯ ಮುಖ್ಯಾಧಿಕಾರಿಗಳು ಮಾತನಾಡಿ ಪುರಸಭೆಗಳು, ನಗರಸಭೆಗಳು, ಗ್ರಾಮಪಂಚಾಯಿತಿಗಳು ಮಾಡುವ ಕಾರ್ಯವನ್ನು ಹುಕ್ಕೇರಿ ಶ್ರೀಗಳು ಮಾಡುತ್ತಿದ್ದಾರೆ. ಅವರೊಂದಿಗೆ ನಾವೆಲ್ಲಾ ಕೈಜೋಡಿಸಿದ್ದೇವೆ. ಸಾರ್ವಜನಿಕರು ಕೈಜೋಡಿಸಿ ಪ್ಲಾಸ್ಟಿಕ್ ಮುಕ್ತ ಭಾರತ ನಾವೆಲ್ಲ ಮಾಡೋಣ ಎಂದರು. ಪುರಸಭೆಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು. ಹುಕ್ಕೇರಿ ಶ್ರೀ ಮಠದಿಂದ ಪಾದಯಾತ್ರೆ ಮುಖಾಂತರ ತೆರಳಿ ನಗರದ ಗಟಾರಗಳನ್ನು ಸ್ವತಃ ಶ್ರೀಗಳು ನಿಂತು ಮಾಡಿಸಿ ಜನರಿಗೆ ಅರಿವು ಮೂಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ