ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಒಂದೆಡೆ ಕೋವಿಡ್ -19 ರೋಗದ ಭೀತಿ, ಮತ್ತೊಂದೆಡೆ ಲಾಕ್ ಡೌನ್ ಘೋಷಣೆ, ಇವುಗಳ ಜೊತೆಯಲ್ಲೇ ಉದರಪೋಷಣೆಗೆ ಅಗತ್ಯ ವಸ್ತುಗಳ ಖರೀದಿಗಾಗಿ ಹಣದ ಕೊರತೆ. ಇವೆಲ್ಲವುದರ ಕಾರಣ ಆತಂಕಗೊಂಡಿದ್ದ ಗೋವಾ ರಾಜ್ಯದ ವಿವಿಧೆಡೆ ಕೂಲಿ ಕೆಲಸ ಮಾಡುತ್ತಿದ್ದ ಬಾಗಲಕೋಟೆ, ವಿಜಯಪುರ, ಯಾದಗಿರಿ ಮತ್ತು ಬೆಳಗಾವಿ ಜಿಲ್ಲೆಗಳ 300ಕ್ಕೂ ಹೆಚ್ಚು ಕನ್ನಡಿಗರ ಸಮಸ್ಯೆಗೆ ಬೆಳಗಾವಿ ಜಿಲ್ಲಾಡಳಿತ ಶನಿವಾರ ಸ್ಪಂದಿಸಿದೆ.
ಶುಕ್ರವಾರ ತಮ್ಮ ಕುಟುಂಬದೊಂದಿಗೆ ಗೋವಾ ತೊರೆದು ಕಾಲ್ನಡಿಗೆಯ ಮೂಲಕ ರಾಜ್ಯದ ಗಡಿ
ಪ್ರವೇಶಿಸಲು ಯತ್ನಿಸುತ್ತಿದ್ದ ರಾಜ್ಯದ ಕನ್ನಡಿಗರ ನೆರವಿಗೆ ಬೆಳಗಾವಿ ಜಿಲ್ಲಾಡಳಿತ
ಶನಿವಾರ ಧಾವಿಸಿದೆ.
ಶುಕ್ರವಾರ ರಾತ್ರಿ ಕರ್ನಾಟಕ -ಗೋವಾ ಗಡಿಯ ಸೂರಲ್ ಚೆಕ್ ಪೋಸ್ಟ್
ತಲುಪಿದ್ದ ಎಲ್ಲ ಕನ್ನಡಿಗರಿಗೂ ಜಿಲ್ಲೆಯ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು
ವೈದ್ಯಕೀಯ ಸೌಲಭ್ಯ, ಊಟೋಪಚಾರ ಮತ್ತು ಆಶ್ರಯ ನೀಡಿ ಮಾನವೀಯತೆ ಮೆರೆದಿದ್ದಾರೆ.
ಕರ್ನಾಟಕ -ಗೋವಾ ಗಡಿಯ ಕಣಕುಂಬಿ ಚೆಕ್ ಪೋಸ್ಟ್ ನಲ್ಲಿ ಶುಕ್ರವಾರ ರಾತ್ರಿ ಗೋವಾದಿಂದ
ಹಿಂಡುಗಟ್ಟಲೇ ಜನರು ರಾಜ್ಯದತ್ತ ಆಗಮಿಸುತ್ತಿದ್ದುದನ್ನು ಗಮನಿಸಿದ ಚೆಕ್ ಪೋಸ್ಟ್
ಸಿಬ್ಬಂದಿ ಅವರನ್ನು ಚೆಕ್ ಪೋಸ್ಟ್ ಬಳಿಯಲ್ಲೇ ತಡೆದು ಈ ವಿಷಯವನ್ನು ಅಧಿಕಾರಿಗಳ
ಗಮನಕ್ಕೆ ತಂದಿದ್ದರು.
ಬಳಿಕ ಸ್ಥಳಕ್ಕೆ ತೆರಳಿದ ಖಾನಾಪುರ ತಹಸೀಲ್ದಾರ್ ರೇಷ್ಮಾ ತಾಳಿಕೋಟಿ, ತಾ.ಪಂ ಇ.ಒ ಬಿ.ವಿ ಅಡವಿಮಠ, ಸಿ.ಪಿ.ಐ ಸುರೇಶ ಶಿಂಗಿ, ಪಿ.ಎಸ್.ಐ ಬಸನಗೌಡ ಪಾಟೀಲ, ಕಣಕುಂಬಿ ಗ್ರಾ.ಪಂ ಪಿ.ಡಿ.ಒ ಸುನೀಲ ಅಂಬಾರಿ ಹಾಗೂ ಇತರರು ಗೋವಾದಿಂದ ಆಗಮಿಸಿದ್ದವರ ಸಂಕಷ್ಟಗಳನ್ನು ಆಲಿಸಿದ್ದಾರೆ.
ಆಗ ಗೋವಾದಿಂದ ಆಗಮಿಸಿದ್ದ ಕನ್ನಡಿಗರು ಶುಕ್ರವಾರ ಮುಂಜಾನೆ ತಾವು ತಮ್ಮ ಕುಟುಂಬದೊಂದಿಗೆ ಗೋವಾದಿಂದ ಹೊರಟಿದ್ದು, ಕಳೆದ ಎರಡು ವಾರಗಳಿಂದ ಉದ್ಯೋಗ ಹಾಗೂ ಕೂಲಿ ಇಲ್ಲದ್ದರಿಂದ ಹಸಿವಿನಿಂದ ಬಳಲುತ್ತಿರುವುದಾಗಿ ಮತ್ತು ತಮ್ಮ ಈ ಆತಂಕದ ಸ್ಥಿತಿಯ ಕಾರಣ ಗೋವಾ ತೊರೆದು ತಮ್ಮ ಸ್ವಗ್ರಾಮಗಳತ್ತ ತೆರಳುತ್ತಿರುವುದಾಗಿ ತಿಳಿಸಿದ್ದರು.
ಗೋವಾದಿಂದ ಆಗಮಿಸಿದ ಕನ್ನಡಿಗರ ಪರಿಸ್ಥಿತಿ ಅರಿತ ಅಧಿಕಾರಿಗಳು ಅವರಿಗೆ ಚೆಕ್ ಪೋಸ್ಟ್
ಬಳಿಯಲ್ಲೇ ಉಳಿಯಲು ಅನುವು ಮಾಡಿಕೊಟ್ಟು ಎಲ್ಲರಿಗೂ ರಾತ್ರಿಯ ಊಟದ ವ್ಯವಸ್ಥೆ
ಕಲ್ಪಿಸಿದ್ದರು.
ಈ ವಿಷಯವನ್ನು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದ ಬಳಿಕ ಶನಿವಾರ ಮುಂಜಾನೆ ಸ್ಥಳಕ್ಕೆ ತೆರಳಿದ ಕಂದಾಯ, ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಗೋವಾದಿಂದ ಬಂದಿದ್ದ ಎಲ್ಲ ಕನ್ನಡಿಗರ ಆರೋಗ್ಯ ತಪಾಸಣೆ ಕೈಗೊಂಡು ಅವರ ವಿವರಗಳನ್ನು ಸಂಗ್ರಹಿಸಿದ್ದಾರೆ.
ಗೋವಾ ರಾಜ್ಯದ ಅಧಿಕಾರಿಗಳಿಗೆ ಈ ವಿಷಯವನ್ನು ತಿಳಿಸಿದ ಬೆಳಗಾವಿ ಜಿಲ್ಲಾಡಳಿತದ
ಅದಿಕಾರಿಗಳು ಗೋವಾದ ಅಧಿಕಾರಿಗಳನ್ನೂ ಶನಿವಾರ ಕರ್ನಾಟಕ -ಗೋವಾ ಗಡಿ ಪ್ರದೇಶಕ್ಕೆ
ಕರೆಸಿಕೊಂಡು ಅವರ ಜೊತೆ ಚರ್ಚಿಸಿದರು.
ಸುದೀರ್ಘ ಚರ್ಚೆಯ ಬಳಿಕ ಎಲ್ಲರೂ ಸೇರಿ ಗೋವಾದಿಂದ ಬಂದ ಎಲ್ಲ ಕನ್ನಡಿಗರಿಗೆ ಏ.14ರವರೆಗೆ ಗೋವಾ ರಾಜ್ಯದ ಕೇರಿ ಪಟ್ಟಣದಲ್ಲಿ ವಾಸ್ತವ್ಯ, ಊಟೋಪಚಾರ ಮತ್ತು ವೈದ್ಯಕೀಯ ಸೌಲಭ್ಯ ಕಲ್ಪಿಸಲು ತೀರ್ಮಾನಿಸುವ ನಿರ್ಧಾರಕ್ಕೆ ಬರಲಾಯಿತು. ಬಳಿಕ ಗೋವಾದಿಂದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಸ್ಥಳಕ್ಕೆ ತರಿಸಿ ಅವುಗಳಲ್ಲಿ ಎಲ್ಲ ಕನ್ನಡಿಗರನ್ನೂ ಹತ್ತಿಸಿ ಕೇರಿ ಪಟ್ಟಣಕ್ಕೆ
ಸಾಗಿಸಲಾಯಿತು.
ಈ ಸಂದರ್ಭದಲ್ಲಿ ಉಭಯ ರಾಜ್ಯಗಳ ಕಂದಾಯ, ಪೊಲೀಸ್, ಆರೋಗ್ಯ ಹಾಗೂ ಇತರೆ ಇಲಾಖೆಗಳ
ಅಧಿಕಾರಿಗಳು, ಸಿಬ್ಬಂದಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ