ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಕೊರೋನಾದಿಂದಾಗಿ ಕೇವಲ ಮನುಷ್ಯರು ಮಾತ್ರ ಸಂಕಷ್ಟಕ್ಕೀಡಾಗಿಲ್ಲ. ಪ್ರಾಣಿ ಪಕ್ಷಿಗಳೂ ಸಾಕಷ್ಟು ನೋವುಣ್ಣುತ್ತಿವೆ. ಅವುಗಳಿಗೂ ನೀರು, ಆಹಾರ ಸರಿಯಾಗಿ ದೊರೆಯುತ್ತಿಲ್ಲ. ಆದರೆ ಅವುಗಳ ನೋವನ್ನು ಅರ್ಥೈಸುವ ಶಕ್ತಿ ನಮಗಿಲ್ಲ.
ಶನಿವಾರ ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ ದಾನವಾಡ ರಸ್ತೆಯ ಮೂಲಕ ತಮ್ಮ ವಾಹನದಲ್ಲಿ ಪ್ರಯಾಣಿಸುತ್ತಿರುವಾಗ ದೂಧಗಂಗಾ ನದಿಯ ದಡದಲ್ಲಿ ಕುರಿಗಳ ಹಿಂಡನ್ನು ಗಮನಿಸಿದರು.
ಆದರೆ ಅವುಗಳಿಗೆ ಮೇವಿಲ್ಲದೆ ತೀವ್ರ ಸಂಕಷ್ಟದಲ್ಲಿರುವುದು ಅವುಗಳನ್ನು ನೋಡಿದರೇ ತಿಳಿಯುವಂತಿತ್ತು. ತಕ್ಷಣ ಕಾರನ್ನು ನಿಲ್ಲಿಸಿದ ಗಣೇಶ ಹುಕ್ಕೇರಿ, ಕಾರಿನಲ್ಲಿ ಜನರಿಗೆ ವಿತರಿಸಲೆಂದು ಒಯ್ಯುತ್ತಿದ್ದ ಕಾಳು, ಕಡಿಗಳನ್ನು ಕುರಿಗಳಿಗೆ ಹಾಕಿದರು. ಹಸಿದ ಕುರಿಗಳು ಅವುಗಳನ್ನು ತಿಂದು ಹೊಟ್ಟೆ ತುಂಬಿಕೊಂಡವು.
ಜೊತೆಗೆ, ಕುರಿಗಾರನಿಗೆ ಕೂಡ ಆಹಾರ ಸಾಮಗ್ರಿಗಳನ್ನು ನೀಡಿ ,ಲಾಕ್ ಡೌನ್ ನಿಂದ ಕುರಿಗಾರರಿಗೆ ಆದ ಸಮಸ್ಯೆಗಳ ಕುರಿತು ವಿಚಾರಿಸಿದರು. ನೋಡುವ ಕಣ್ಣಿದ್ದರೆ ಮಾನವೀಯ ಸೇವೆಗೆ ಬೇಕಾದಷ್ಟು ದಾರಿಗಳಿವೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ