
ಪ್ರಗತಿವಾಹಿನಿ ಸುದ್ದಿ: ವ್ಯಕ್ತಿಯೊಬ್ಬ ತನ್ನ ತಾಯಿ ಹಾಗೂ ಪತ್ನಿಯನ್ನು ಕೊಂದು ಬಳಿಕ ಮೃತದೇಹಗಳ ಮಾಂಸವನ್ನೇ ತಿಂದಂತಹ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಅಹಿರೌಲಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಪಾರ್ಸಾ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಭೀಕರ ದೃಶ್ಯವನ್ನು ಕಣ್ಣಾರೆ ಕಂಡ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ನಿವಾಸಿಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದ ಕೂಡಲೇ ಆರೋಪಿಯನ್ನು ಸ್ಥಳದಲ್ಲೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯ ಮೇಲ್ಟಾವಣಿಯಿಂದ ಜೋರಾಗಿ ಕಿರುಚಾಟದ ಶಬ್ದ ಕೇಳಿ ಬಂದಿತ್ತು. ಇದರಿಂದ ಗಾಬರಿಗೊಂಡ ಗ್ರಾಮಸ್ಥರು ಏನಾಗುತ್ತಿದೆ ಎಂದು ನೋಡಲು ಮನೆಯ ಕಡೆಗೆ ಧಾವಿಸಿದ್ದಾರೆ. ಆರೋಪಿ ಸಿಕಂದರ್ ಗುಪ್ತಾ ಮನೆಯ ಛಾವಣಿ ಮೇಲೆ ತನ್ನ ಹೆಂಡತಿ ಮತ್ತು ತಾಯಿಯ ಮೇಲೆ ಹಲ್ಲೆ ಮಾಡುತ್ತಿರುವುದು ಕಂಡು ಬಂದಿದೆ.
ಸಿಕಂದರ್ ಮೊದಲು ತನ್ನ ಪತ್ನಿ ಪ್ರಿಯಾಂಕಾ (28) ಮತ್ತು ತಾಯಿ ರೂನಾ ದೇವಿ (60) ಮೇಲೆ ಕೋಲುಗಳಿಂದ ಹಲ್ಲೆ ಮಾಡಿದ. ನಂತರ ಸಿಮೆಂಟ್ ಇಟ್ಟಿಗೆಯನ್ನು ಎತ್ತಿಕೊಂಡು ಅವರ ತಲೆಗೆ ಪದೇ ಪದೇ ಹೊಡೆದಿದ್ದಾನೆ. ಇದರಿಂದಾಗಿ ಇಬ್ಬರು ಕೂಡಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಆಗ ಆತ ಮೃತದೇಹವನ್ನು ಕಚ್ಚಿ ಜಗಿದು, ಅದನ್ನು ಸ್ಥಳೀಯರ ಮೇಲೆ ಉಗಿದಿದ್ದಾನೆ. ಇದನ್ನೆಲ್ಲಾ ಕಂಡು ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಜೋಡಿ ಹತ್ಯೆಯ ಆರೋಪದ ಮೇಲೆ ಸಿಕಂದರ್ ಗುಪ್ತಾನನ್ನು ಬಂಧಿಸಿದ್ದಾರೆ.




