*ಬಿಜೆಪಿ ನಾಯಕತ್ವ ಒಪ್ಪುತ್ತೇನೆ, ವಿಜಯೇಂದ್ರ ನಾಯಕತ್ವ ಒಪ್ಪಲ್ಲ ರಮೇಶ್ ಜಾರಕಿಹೊಳಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರರನ್ನು ತೆಗೆಯಲು ನಾವು ಹೋರಾಡುತ್ತಿರುವುದು ನಿಜ. ಈ ವಿಚಾರದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪನವರ ಬಗ್ಗೆ ಅಪಾರ ಗೌರವವಿದೆ. ಅವರು ರಾಜ್ಯಪ್ರವಾಸಕ್ಕೆ ನಮ್ಮ ಸ್ವಾಗತವಿದೆ. ಆದರೆ, ಮಗನ ಸ್ಥಾನ ಭದ್ರಪಡಿಸಲೋ ಅಥವಾ ಪಕ್ಷ ಭದ್ರಪಡಿಸಲೋ ಎಂಬುದನ್ನು ಸ್ಪಷ್ಟಪಡಿಸಬೇಕು. ಪದೇ ಪದೇ ಹೈಕಮಾಂಡ್ ಬ್ಲಾಕ್ ಮಾಡಬೇಡಿ. ನಿಮಗೆ ವಯಸ್ಸಾಗಿದೆ. ಪಕ್ಷ ನಿಮಗೆ ಎಲ್ಲವನ್ನೂ ಕೊಟ್ಟಿದೆ. ಪಕ್ಷವನ್ನು ಬ್ಲಾಕ್ ಮಾಡಬೇಡಿ. ವಿಜಯೇಂದ್ರನ ಬೆನ್ನು ಹತ್ತಿದರೆ ನೀವು ಹಾಳಾಗುತ್ತಿರಿ. ದಯವಿಟ್ಟು ಮಗ ಅಂತಾ ನೋಡಬೇಡಿ. ಫೇಲ್ ಆಗಿರುವ ಅಧ್ಯಕ್ಷನ ಬಿಟ್ಟು ಹೈಕಮಾಂಡ್ ಗೆ ಮನವರಿಕೆ ಮಾಡಿಕೊಟ್ಟು ಹೊಸ ಅಧ್ಯಕ್ಷರನ್ನು ಮಾಡಲು ನೀವು ಸಹಕಾರ ಕೊಡುವಂತೆ ಕೇಳಿಕೊಂಡರು ಹೇಳಿದರು.
ಹೈಕಮಾಂಡ್ ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ಸ್ವಾಗತಿಸುತ್ತೇವೆ.
ಸಿ.ಟಿ.ರವಿ ಪ್ರಕರಣದಲ್ಲಿ ಅವರು ಬಳಸಿರುವ ಶಬ್ದಕ್ಕೆ ನನ್ನ ತಕರಾರು ಇದೆ. ಅದಕ್ಕೆ ನನ್ನ ಸಹಮತ ಇಲ್ಲ. ಆದರೆ, ಅವರು ನಾನು ಆ ರೀತಿ ಮಾತಾಡಿಲ್ಲ ಎಂದಿದ್ದಾರೆ ಎಂದರು.
ರಾಜ್ಯದಲ್ಲಿ ಸರ್ಕಾರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ರಮೇಶ ಜಾರಕಿಹೊಳಿ, ಪಕ್ಷವನ್ನು ನಾವು ಗಟ್ಟಿ ಮಾಡಿ, ಪೂರ್ಣ ಪ್ರಮಾಣದಲ್ಲಿ 130-140 ಸ್ಥಾನ ಗೆಲ್ಲಲು ಕೆಲಸ ಮಾಡುತ್ತಿದ್ದೇವೆ. 2028ಕ್ಕೆ ಆಗುತ್ತದೆಯೋ ಅಥವಾ ಅದಕ್ಕಿಂತ ಮೊದಲು ಚುನಾವಣೆ ಆಗುತ್ತದೆ ಅಂತಾ ಗೊತ್ತಿಲ್ಲ.
ಬೆಳಗಾವಿಯಿಂದಲೇ ಮತ್ತೆ ಸರ್ಕಾರ ಬೀಳುತ್ತದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಸರ್ಕಾರ ಬೀಳಲು ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದ್ದು ನಿಜ. ನಿನ್ನೆಯಿಂದ ಅದು ಶುರುವಾಗಿದೆ. ನಿನ್ನೆ ಸಿಎಂ ಸಿದ್ದರಾಮಯ್ಯ ಅವರನ್ನು ಸಚಿವರಾದ ಎಂ.ಬಿ.ಪಾಟೀಲ, ಸತೀಶ ಜಾರಕಿಹೊಳಿ ಸೇರಿ ಅನೇಕ ನಾಯಕರು ಭೇಟಿಯಾಗಿ ಈ ಬಗ್ಗೆ ಹೇಳಿದ್ದಾರೆ. ಹಿಂದೆಯೂ ಸಿದ್ದರಾಮಯ್ಯ ಅವರು ಕೇಳಲಿಲ್ಲ. ಹಾಗಾಗಿ, ಸಮ್ಮಿಶ್ರ ಸರ್ಕಾರ ಬಿದ್ದಿತ್ತು. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಆಗುವ ಅನಾಹುತಕ್ಕೆ ಮತ್ತೆ ಅವರೇ ಕಾರಣರಾಗುತ್ತಾರೆ ಎಂದರು.
10 ಡಿ.ಕೆ.ಶಿವಕುಮಾರ್ ಬಂದರೂ ಬೆಳಗಾವಿಗೆ ಬರಲು ಬಿಟ್ಟಿರಲಿಲ್ಲ. ನಾನು ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿದ್ದಾಗ ಡಿ.ಕೆ.ಶಿವಕುಮಾರ್ ಹಸ್ತಕ್ಷೇಪಕ್ಕೆ ಅವಕಾಶ ಕೊಟ್ಟಿರಲಿಲ್ಲ. ಇಲ್ಲಿ ನಾನೇ ಅಧಿಕಾರ ನಡೆಸಿದ್ದೇನೆ. ಆದರೆ, ಬೆಂಗಳೂರು ಮಟ್ಟದಲ್ಲಿ ಡಿ.ಕೆ.ಶಿವಕುಮಾರ್ ಸಲಹೆ, ಸೂಚನೆಗಳನ್ನು ಸ್ವೀಕರಿಸಿದ್ದೇನೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ