ನಾನು ಜ್ಯೋತಿಷಿಯ ಮೊಮ್ಮಗ ಎಂದ ಜಾವಗಲ್ ಶ್ರೀನಾಥ್
ಪ್ರಗತಿವಾಹಿನಿ ಸುದ್ದಿ – ಮೈಸೂರು : ಕರ್ನಾಟಕ ರಾಜ್ಯ ಪುರೋಹಿತರ ಹಾಗೂ ಜ್ಯೋತಿಷಿಗಳ ಕ್ರಿಕೆಟ್ ಪಂದ್ಯಾವಳಿ ಇದೇ ಜುಲೈ 27, 28, 29 ರಂದು ಮೈಸೂರಿನ ರೈಲ್ವೆ ವರ್ಕ್ಷಾಪ್ ಆಟದ ಮೈದಾನದಲ್ಲಿ ಆರಂಭಗೊಳ್ಳುತ್ತಿದ್ದು, ಕಾರ್ಯಕ್ರಮವನ್ನು ಉದ್ಘಾಟಿಸಿರುವ ಭಾರತೀಯ ಹಿರಿಯ ಕ್ರಿಕೆಟ್ ಆಟಗಾರ ಜಾವಗಲ್ ಶ್ರೀನಾಥ್ ಅವರು ಮಾತನಾಡಿದರು.
ಇಂದು ಕರ್ನಾಟಕ ರಾಜ್ಯ ಪುರೋಹಿತರ ಹಾಗೂ ಜ್ಯೋತಿಷಿಗಳ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟನೆ ಮಾಡುತ್ತಿರುವುದು ನನಗೆ ಅತೀವ ಸಂತೋಷ ತಂದಿದೆ. ಆಟದಿಂದ ಆರೋಗ್ಯವನ್ನು ಪಡೆದುಕೊಳ್ಳಬಹುದು. ನಾನು ಒಬ್ಬ ಜ್ಯೋತಿಷಿ ಮೊಮ್ಮಗ. ನಮ್ಮ ತಾತ ಖ್ಯಾತ ಜ್ಯೋತಿಷಿ. ಇವತ್ತು ಪುರೋಹಿತರು, ಜ್ಯೋತಿಷಿಗಳು ಕ್ರಿಕೇಟ್ ಆಡುವುದರ ಮುಖಾಂತರ ಬದಲಾವಣೆಯನ್ನು ನಿರ್ಮಾಣ ಮಾಡುತ್ತಿರುವುದು ಅಭಿಮಾನದ ಸಂಗತಿ ಎಂದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡ ಬೇಬಿಗ್ರಾಮದ ಹಾಗೂ ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ಶ್ರೀ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮಿಗಳು ಮಾತನಾಡಿ, ಪುರೋಹಿತರು ನಿತ್ಯ ಪಂಚಾಂಗ, ವೇದ, ಪಠಿಸುವುದರಲ್ಲಿಯೇ ತಲ್ಲಿನರಾಗಿರುತ್ತಾರೆ.
ಅವರಿಗೂ ಕೂಡ ಒಂದು ಬದಲಾವಣೆ ಬೇಕಾಗಿರುತ್ತದೆ. ಅಂಥ ಬದಲಾವಣೆಯನ್ನು ಇವತ್ತು ತಾವೇ ನಿರ್ಮಿಸಿ ಕೊಂಡಿರುವುದು ಅಭಿಮಾನದ ಸಂಗತಿ ಎಂದರು.
ಬೆಳಗಾವಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಎಲ್ಲರೂ ಆಟವನ್ನು ಪ್ರೀತಿಯಿಂದ ಆಡುತ್ತಾ ಆಟದ ಜೊತೆಜೊತೆಗೆ ದೇಶದ ಪಾಠವನ್ನು ಕಲಿಯುವುದು ಅವಶ್ಯಕತೆ ಇದೆ ಎಂದರು. ಕುಪ್ಪುರು ಗದ್ದಿಗೆ ಮಠದ ಡಾ. ಯತೀಶ್ವರ ಶಿವಾಚಾರ್ಯ ಸ್ವಾಮಿಗಳು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಖ್ಯಾತ ಸುತ್ತೂರು ಪಂಚಾಗದ ಕರ್ತೃಗಳಾದ ಡಾ. ಪುಟ್ಟಹೊಣ್ಣಯ್ಯ ಸೇರಿದಂತೆ ಇನ್ನೂ ಅನೇಕ ಮಹನೀಯರು ಉಪಸ್ಥಿತರಿದ್ದರು.
ಕ್ರಿಕೇಟ್ ಸಂಘದ ಅಧ್ಯಕ್ಷರಾದ ಡಾ. ಮೂಗೂರು ಮಧುದೀಕ್ಷಿತ್ ಅವರು ಎಲ್ಲರನ್ನು ಸ್ವಾಗತಿಸಿದರು. ಕರ್ನಾಟಕದಾದ್ಯಂತ ಸುಮಾರು 25ರಿಂದ 30 ತಂಡಗಳು ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ