Karnataka NewsLatest

ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ನಾನು …. ಆಗಲಿಕ್ಕೂ ಸಿದ್ದ – ಸತೀಶ್ ಜಾರಕಿಹೊಳಿ ಘೋಷಣೆ

ಗುಜನಾಳ ಮತಗಟ್ಟೆಗೆ ನಾನೇ ಬೂತ್ ಮಟ್ಟದ ಏಜೆಂಟ್ – ಸತೀಶ್ ಜಾರಕಿಹೊಳಿ

ಮಕ್ಕಳಿಬ್ಬರನ್ನೂ ಮತಗಟ್ಟೆ ಏಜಂಟ್ ಆಗಿ ನೇಮಕ ಮಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ

 

ಪ್ರಗತಿವಾಹಿನಿ ಸುದ್ದಿ, ಗೋಕಾಕ್ : ಗೋಕಾಕ ತಾಲ್ಲೂಕಿನ ಗುಜನಾಳ ಮತಗಟ್ಟೆಗೆ ನಾನೇ ಬೂತ್ ಮಟ್ಟದ ಏಜೆಂಟರಾಗಿ ಕಾರ್ಯ ನಿರ್ವಹಿಸುತ್ತೇನೆಂದು ಸ್ವತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಘೋಷಿಸಿದ್ದಾರೆ.
ವಿಧಾನಪರಿಷತ್ ಚುನಾವಣೆ ಹಿನ್ನೆಲೆ ಗೋಕಾಕ ಹಿಲ್ ಗಾರ್ಡನ್ ಕಚೇರಿಯಲ್ಲಿ ಶನಿವಾರ ಬೂತ್ ಮಟ್ಟದ ಏಜೆಂಟರುಗಳ ಆಯ್ಕೆ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಗ್ಗೆ ತಿಳಿಸಿದ್ದಾರೆ.
ಗುಜನಾಳ ಮತಗಟ್ಟೆಯಲ್ಲಿ ಪ್ರತಿ ಬಾರಿಯೂ ರಮೇಶ್ ಜಾರಕಿಹೊಳಿ ಬೆಂಬಲಿಗರ ಪ್ರಭಾವ ಹೆಚ್ಚಾಗಿರುತ್ತದೆ. ಈ ಕಾರಣದಿಂದ ಸತೀಶ್ ಅವರು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಆಪ್ತ ಮೂಲಗಳಿಂದ ತಿಳಿದು ಬಂದಿದೆ . ಇದುವರೆಗೂ ಯಾವ ಶಾಸಕರು ಏಜೆಂಟರುಗಳಾಗಿ ಕಾರ್ಯನಿರ್ವಹಿಸಿದ ಉದಾಹರಣೆಗಳಿಲ್ಲ. ಸತೀಶ್ ಅವರು ಚುನಾವಣೆ ಏಜೆಂಟ್ ಆಗಿ ಘೋಷಿಸಿರುವುದು ರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿದೆ.
ವಿಧಾನಪರಿಷತ್ ಚುನಾವಣೆ ಗೆಲುವಿಗಾಗಿ ಒಂದು ಹೊಸ ಪ್ರಯೋಗವನ್ನು ಮಾಡಲಾಗಿದೆ. ನಾವು ಗೆಲ್ಲಬೇಕಾಗಿದೆ. ಆದ್ದರಿಂದ ಗೆಲ್ಲಲಿಕ್ಕೆ ಏಜೆಂಟ್ ಆಗಲಿದ್ದೇನೆ, ಕ್ಲರ್ಕ್ ಕೂಡಾ ಆಗಲಿಕ್ಕೆ ಸಿದ್ದವಿದ್ದೇನೆ ಎಂದಿದ್ದಾರೆ.
ಗೋಕಾಕ ಹಾಗೂ ಅರಬಾವಿ ಮತಕ್ಷೇತ್ರದಲ್ಲಿ ತಲಾ 30% ಮತಗಳು ಬರಲಿವೆ. ಈಗಾಗಲೇ ಗ್ರಾಮ ಪಂಚಾಯ್ತಿಗಳಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಇದ್ದಾರೆ. ಅವರಿಗೆ ತಿಳುವಳಿಕೆ ಹೇಳಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಪರ ಮತ ಹಾಕಲಿಕ್ಕೆ ಮನವಿ ಮಾಡುವುದೊಂದೆ ಕೆಲಸವಾಗಿದೆ. ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.
ಮತಗಟ್ಟೆಗೆ ಏಂಜೆಟರುಗಳ ನೇಮಕ :
ಗೋಕಾಕ ಹಿಲ್ ಗಾರ್ಡನ್ ನಲ್ಲಿ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ, ಗೋಕಾಕ ಮತ್ತು ಅರಬಾವಿ ಮತಕ್ಷೇತ್ರ ವ್ಯಾಪ್ತಿಯ ಬೂತ್ ಮಟ್ಟದ ಏಜೆಂಟರುಗಳ ನೇಮಕ ಮಾಡಿದರು.
ಯುವ ನಾಯಕ ರಾಹುಲ್ ಜಾರಕಿಹೊಳಿ, ಮುಖಂಡರಾದ ಶಂಕರ್ ಗಿಡ್ಡನ್ನವರ , ಅರವಿಂದ್ ದಳವಾಯಿ, ಸಿದ್ಲಿಂಗ್ ದಳವಾಯಿ, ಪ್ರಕಾಶ್ ಕೋಲಾರ, ಮಂಜುಳಾ ರಮಾಗಾಣಹಟ್ಟಿ, ರಮೇಶ ಉಟಗಿ, ಪ್ರಕಾಶ್ ಡಾಂಗೆ ಲಗಮಣ್ಣಾ ಕಳಸನ್ನವರ, ಎಂ.ಆರ್. ದೇಸಾಯಿ, ವಿವೇಕ ಜತ್ತಿ, ಪಾಂಡು ಮನ್ನಿಕೇರಿ ಸೇರಿದಂತೆ ನೂರಾರು ಮುಖಂಡರು ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.
ಗುಜನಾಳ ಗ್ರಾಮದ ಬೂತ್ ಗೆ ಶಾಸಕ ಸತೀಶ್ ಜಾರಕಿಹೊಳಿ, ಕೊಣ್ಣೂರ ಗ್ರಾಮಕ್ಕೆ ರಾಹುಲ್ ಜಾರಕಿಹೊಳಿ, ಸಿಂದಿಕುರಭೇಟ ಪ್ರಿಯಾಂಕಾ ಜಾರಕಿಹೊಳಿ, ಮಮದಾಪುರ ಅಶೋಕ ಪುಜಾರಿ, ಕೌಜಲಗಿ ಅರವಿಂದ ದಳವಾಯಿ, ಅವರಾದಿ ಗ್ರಾಮಕ್ಕೆ ರಮೇಶ್ ಉಟಗಿ ಸೇರಿ ಎರಡು ವಿಧಾನಸಭಾ ಕ್ಷೇತ್ರಗಳ ಬೂತ್ ಮಟ್ಟದ ಎಜೆಂಟರ್ ಗಳನ್ನು ನೇಮಕ ಮಾಡಲಾಯಿತು.
ಈಗಾಗಲೇ ಖಾನಾಪುರ, ಸವದತ್ತಿ, ಅಥಣಿ, ಬೈಲಹೊಂಗಲ, ಗೋಕಾಕ ಮತಕ್ಷೇತ್ರದಲ್ಲಿ ಗ್ರಾಮ ಪಂಚಾಯ್ತಿ ಚುನಾಯಿತ ಜನಪ್ರತಿನಿಧಿಗಳ ಸಭೆಯನ್ನು ಮಾಡಲಾಗಿದೆ. ಚಿಕ್ಕೋಡಿ, ಯಮಕನಮರಡಿಗಳಲ್ಲಿ ಪಕ್ಷದ ಅಭ್ಯರ್ಥಿ ಪರ ಗ್ರಾಮ ಪಂಚಾಯ್ತಿ ಸದಸ್ಯರ ಸಭೆ ನಡೆಸಲಾಗುತ್ತದೆ ಎಂದರು.
ವಿಧಾನಪರಿಷತ್ ಚುನಾವಣೆ ನಮಗೆ ಪ್ರತಿಷ್ಠೆಯ ಕಣವಾಗಿದೆ. ಬೂತ್ ಮಟ್ಟಕ್ಕೆ ಆಯ್ಕೆಯಾದ ಏಜೆಂಟರುಗಳು ಪಕ್ಷ ನಿಷ್ಠೆ, ಪ್ರಾಮಾಣಿಕ ಪ್ರಯತ್ನದಿಂದ ಅಭ್ಯರ್ಥಿಯ ಗೆಲುವಿಗೆ ಕೆಲಸ ಮಾಡಬೇಕು. ಕಾರ್ಯಕರ್ತರು ಚನ್ನರಾಜ್ ಹಟ್ಟಿಹೊಳಿ ಗೆಲುವಿಗೆ  ಶ್ರಮಿಸಬೇಕೆಂದು ಸಭೆಯಲ್ಲಿ ಸತೀಶ್ ಸೂಚನೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button