*ಸುಳ್ಳುಗಳಿಂದ ನನ್ನನ್ನು ಒಡೆಯಲಾಗದು ಎಂದ ಜಿಲ್ಲಾಧಿಕಾರಿ*: *ಹೆಚ್‌ಡಿಕೆ ಡಿಸಿ ಲತಾಕುಮಾರಿ ತಿರುಗೇಟು*

ಪ್ರಗತಿವಾಹಿನಿ ಸುದ್ದಿ: ರಾಜಕೀಯ ನಾಯಕರು ಮತ್ತು ಹಿರಿಯ ಅಧಿಕಾರಿಗಳ ನಡುವಿನ ಮಾತಿನ ಸಮರ ಈಗ ಮತ್ತೊಂದು ಹಂತಕ್ಕೆ ತಲುಪಿದೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹಾಸನ ಜಿಲ್ಲಾಧಿಕಾರಿ ವಿರುದ್ಧ ಗಂಭೀರ ಆರೋಪ ಮಾಡಿ ವಾಗ್ದಾಳಿ ನಡೆಸಿದ ಬೆನ್ನಲ್ಲೇ, ಜಿಲ್ಲಾಧಿಕಾರಿ ಲತಾಕುಮಾರಿ ಅವರು ಸಾಮಾಜಿಕ ಜಾಲತಾಣದಲ್ಲಿ ಮಾರ್ಮಿಕ ಸಂದೇಶ ಹಂಚಿಕೊಂಡಿದ್ದಾರೆ. ಈ ಬೆಳವಣಿಗೆ ಹಾಸನದ ರಾಜಕೀಯ ಮತ್ತು ಆಡಳಿತ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಹಾಸನ ಜಿಲ್ಲಾಡಳಿತದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ, ಜಿಲ್ಲಾಧಿಕಾರಿಯನ್ನೇ ನೇರವಾಗಿ ಗುರಿಯಾಗಿಸಿಕೊಂಡು ಟೀಕಿಸಿದ್ದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅಮಾನತಾಗಬೇಕಿದ್ದ ಅಧಿಕಾರಿಯನ್ನು ಹಾಸನ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ ಎಂದು ಅವರು ಆರೋಪಿಸಿದ್ದರು.
“ಇವರ ಬಂಡವಾಳವನ್ನು ನಾನೀಗ ಬಿಚ್ಚಿಡಬೇಕಾ? ಸರ್ಕಾರ ಯಾರನ್ನು ರಕ್ಷಣೆ ಮಾಡುತ್ತಿದೆ?” ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದರು. ಕೇಂದ್ರ ಸಚಿವರ ಈ ಹೇಳಿಕೆ ಹಾಸನ ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು.
ಕುಮಾರಸ್ವಾಮಿ ಅವರ ವಾಗ್ದಾಳಿಯ ಬೆನ್ನಲ್ಲೇ ಜಿಲ್ಲಾಧಿಕಾರಿ ಲತಾಕುಮಾರಿ ಅವರು ತಮ್ಮ ವಾಟ್ಸ್‌ಆಯಪ್ ಸ್ಟೇಟಸ್‌ನಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. “ನೀವು ನನ್ನ ಮೇಲೆ ಸುಳ್ಳುಗಳಿಂದ ದಾಳಿ ಮಾಡಬಹುದು. ಆದರೆ, ಸುಳ್ಳುಗಳಿಂದ ನನ್ನನ್ನು ಒಡೆಯಲಾಗದು. ಸುಳ್ಳು ದಾಳಿ ಮಾಡುತ್ತವೆ, ಸತ್ಯ ರಕ್ಷಿಸುತ್ತದೆ” ಎಂಬ ಅರ್ಥದ ಸಂದೇಶದ ಮೂಲಕ ಅವರು ಪ್ರತಿಕ್ರಿಯಿಸಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಅಧಿಕಾರಿಗಳು ಮತ್ತು ಜೆಡಿಎಸ್ ನಾಯಕರ ನಡುವಿನ ಭಿನ್ನಾಭಿಪ್ರಾಯಗಳು ಈ ಹಿಂದೆಯೂ ಚರ್ಚೆಗೆ ಬಂದಿದ್ದವು. ಅಧಿಕಾರಿಗಳ ವರ್ಗಾವಣೆ ಹಾಗೂ ಆಡಳಿತಾತ್ಮಕ ಕಾರ್ಯವೈಖರಿ ಕುರಿತು ಕುಮಾರಸ್ವಾಮಿ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಜಿಲ್ಲಾಧಿಕಾರಿ ವಿರುದ್ಧದ ಆರೋಪ ಮತ್ತು ಅವರ ಸಾಮಾಜಿಕ ಜಾಲತಾಣದ ಸಂದೇಶ ಮತ್ತಷ್ಟು ಕುತೂಹಲ ಮೂಡಿಸಿದೆ. ಆದರೆ, ಜಿಲ್ಲಾಧಿಕಾರಿ ಹಂಚಿಕೊಂಡಿರುವ ಸಂದೇಶವು ಕುಮಾರಸ್ವಾಮಿ ಅವರ ಹೇಳಿಕೆಗೆ ನೇರ ಪ್ರತಿಕ್ರಿಯೆಯೇ ಎಂಬುದನ್ನು ಅವರು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಈ ಬೆಳವಣಿಗೆಯಿಂದ ಹಾಸನದಲ್ಲಿ ರಾಜಕೀಯ ನಾಯಕರು ಮತ್ತು ಆಡಳಿತಾಧಿಕಾರಿಗಳ ನಡುವಿನ ಸಂಬಂಧದ ಕುರಿತು ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




