*ಕಬ್ಬು ಬೆಳೆಗಾರರ ಹೋರಾಟ ದೆಹಲಿ ಅಂಗಳಕ್ಕೆ*; *ಇಂದು ಕೇಂದ್ರ ಸಚಿವರ ನೇತೃತ್ವದಲ್ಲಿ ಸಭೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ನಡೆಯುತ್ತಿರುವ ಹೋರಾಟ ಇದೀಗ ರಾಷ್ಟ್ರ ರಾಜಧಾನಿ ದೆಹಲಿ ತಲುಪಿದೆ. ರೈತರ ಸಮಸ್ಯೆಗಳು ಹಾಗೂ ಪ್ರಮುಖ ಬೇಡಿಕೆಗಳ ಕುರಿತು ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
ಸಭೆಯಲ್ಲಿ ಪಾಲ್ಗೊಳ್ಳಲು ಬೆಳಗಾವಿಯಿಂದ 35 ರೈತರ ನಿಯೋಗ ಇಂದು ಬೆಳಗ್ಗೆ 9 ಗಂಟೆಗೆ ಸಾಂಬ್ರಾ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಲಿದೆ.
ಸಕ್ಕರೆಗೆ ಪ್ರತಿ ಕೆ.ಜಿಗೆ ₹60 ಎಂಎಸ್ಪಿ ನಿಗದಿ ಮಾಡಬೇಕು, ಉತ್ಪಾದನೆಯಾಗುವ ಎಥೆನಾಲ್ ಅನ್ನು ಸಂಪೂರ್ಣವಾಗಿ ಖರೀದಿಸಬೇಕು, ಕಮರ್ಷಿಯಲ್ ಸಕ್ಕರೆ ದರವನ್ನು ₹100ಕ್ಕೆ ಹೆಚ್ಚಿಸಬೇಕು ಹಾಗೂ ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆಗಳಾಗಿವೆ.
ಕಳೆದ 9 ವರ್ಷಗಳಿಂದ ಸಕ್ಕರೆಯ ಎಂಎಸ್ಪಿ ದರದಲ್ಲಿ ಯಾವುದೇ ಹೆಚ್ಚಳವಾಗಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಪ್ರತಿ ಕೆ.ಜಿ. ಸಕ್ಕರೆಗೆ ₹31 ಎಂಎಸ್ಪಿ ಇದೆ ಎಂದು ರೈತರು ಹೇಳಿದ್ದು, ಬೆಲೆ ಪರಿಷ್ಕರಣೆ ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಿದ್ದಾರೆ.
ಬೇಡಿಕೆಗಳಿಗೆ ಸ್ಪಂದನೆ ದೊರೆಯದಿದ್ದರೆ ಅಕ್ಟೋಬರ್ 13ರಿಂದ ರಾಜ್ಯದ 10 ಕಡೆ ರಾಷ್ಟ್ರೀಯ ಹೆದ್ದಾರಿ ಬಂದ್ ನಡೆಸುವುದಾಗಿ ರೈತರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ದೆಹಲಿ ಸಭೆ ಮಹತ್ವ ಪಡೆದುಕೊಂಡಿದ್ದು, ರೈತರ ಬೇಡಿಕೆಗಳಿಗೆ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಏನಿರಲಿದೆ ಎಂಬುದು ಕುತೂಹಲ ಮೂಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




