ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭ್ರಷ್ಟ ಬಿಜೆಪಿ ಸರಕಾರದ ಧೋರಣೆಯನ್ನು ಜನರ ಮುಂದೆ ಇಡುವ ಉದ್ದೇಶದಿಂದ ಮಾ.9 ರಂದು ರಾಜ್ಯಾದ್ಯಂತ ಎರಡೂ ಗಂಟೆಗಳ ಕಾಲ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾ.9 ರಂದು ಎರಡು ಗಂಟೆಗಳ ಕಾಲ ರಾಜ್ಯದಲ್ಲಿ ನಡೆಯುತ್ತಿರುವ ಸರಕಾರದ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದರು.
ರಾಜ್ಯದ ಜನ ನಮಗೆ ನೆಮ್ಮದಿ ಸಿಗಬೇಕೆಂದು ಕಾಯುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀರಾವರಿ, ಲೋಕೋಪಯೋಗಿ ಮಧ್ಯಂತರ ಟೆಂಡರ್ ಕೊಡುತ್ತಿದ್ದಾರೆ. ಅಷ್ಟೆ ಅಲ್ಲ ಕೆಲಸದ ಸೂಚನೆಯನ್ನು ನೀಡುತ್ತಿದ್ದಾರೆ. ಚುನಾವಣೆಯಲ್ಲಿ ಹಣ ಮಾಡಲು ಇದೊಂದು ತಂತ್ರ. ಮೊದಲೇ ಕಾಮಗಾರಿಯ ಹಣ ಬಿಡುಗಡೆ ಮಾಡುತ್ತಿದ್ದಾರೆ. ಆದರೆ ನಾವು ಪ್ರತಿಯೊಂದು ಇಲಾಖೆಯನ್ನು ಟ್ರ್ಯಾಕ್ ಮಾಡುತ್ತಿದ್ದೇವೆ ಎಂದರು.
ಇಂಧನ ಇಲಾಖೆಯಲ್ಲಿ ಟೆಂಡರ್ ಕರೆಯದೆ ಕೆಲಸ ಕೊಡುತ್ತಿದ್ದಾರೆ. ಇನ್ನೊಂದು ಇಪ್ಪತ್ತು ದಿನದಲ್ಲಿ ನೀತಿ ಸಂಹಿತೆ ಬಂದ ಮೇಲೆ ಹಣ ಮಾಡಲು ಆಗುವುದಿಲ್ಲ ಎಂದು ಲೋಕಾಯುಕ್ತ ಸಂಸ್ಥೆಗೆ ಕಾಂಗ್ರೆಸ್, ಜೆಡಿಎಸ್ ನಾಯಕರ ಮೇಲೆ ದಾಳಿ ಮಾಡಿ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಸರಕಾರದ ಸಚಿವರ ಬಳಿ ಇರುವುದಕ್ಕಿಂತ ಹೆಚ್ಚು ಅಧಿಕಾರಿಗಳ ಬಳಿ ಹಣ ಇಟ್ಟಿದ್ದಾರೆ. ನಮ್ಮ ಬಳಿ ಮಾಹಿತಿ ಇದೆ. ಈ ಸರಕಾರ ಮನೆಗೆ ಹೋಗುತ್ತದೆ. ಅಧಿಕಾರಿಗಳು, ಗುತ್ತಿಗೆದಾರರು ಇರುತ್ತಾರೆ. ಕಳಂಕಿತ ಸರಕಾರವನ್ನು ಜನರೇ ಕಿತ್ತು ಹಾಕಬೇಕೆಂದು ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಪ್ರತಿಯೊಬ್ಬರ ಬದುಕು ಬದಲಾವಣೆಯಾಗಬೇಕು. ಪ್ರತಿಯೊಂದು ವಿಚಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಇದಕ್ಕೆ ಉದಾರಣೆ ಬೆಳಗಾವಿಯಲ್ಲಿ ನೀರಾವರಿ ಇಲಾಖೆಯಲ್ಲಿ ಕೋಟ್ಯಂತರ ರೂ. ಹಣ ಕೊಡಲು ಯೋಜನೆ ರೂಪಿಸುತ್ತಿದ್ದಾರೆ. 300 ಕೋಟಿ ರೂ.ಯೋಜನೆಗೆ 900 ಕೋಟಿ ರೂ. ಮಂಜೂರು ಮಾಡಿದ್ದಾರೆ. ಅದನ್ನೆ ಕಾಯುತ್ತಿದ್ದೇವೆ ಕೊಡಲಿ ನೋಡೋಣ ಎಂದರು.
ರಮೇಶ ಜಾರಕಿಹೊಳಿ ಕುರಿತು ಪ್ರಶ್ನಿಸಿದಾಗ, ಅವನೊಬ್ಬ ಮೆಂಟಲ್, ಮೆಂಟಲ್ ಗಿರಾಕಿಗಳಿಗೆಲ್ಲ ನಾನು ಉತ್ತರಿಸುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಡಿ.ಕೆ.ಶಿವಕುಮಾರ ಗರಂ ಆದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಶಾಸಕ ಫಿರೋಜ್ ಸೇಠ್, ರಾಜು ಸೇಠ್, ಮಹಾಂತೇಶ ಮತ್ತಿಕೊಪ್ಪ ಮೊದಲಾದವರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ