*ಬಿಜೆಪಿಯವರು ಜಗದೀಶ್ ಶೆಟ್ಟರ್ ಗೆ ಯಾವ ಮಾನದಂಡದ ಮೇಲೆ ಟಿಕೆಟ್ ಕೊಟ್ಟರೋ ಗೊತ್ತಿಲ್ಲ – ಲಕ್ಷ್ಮೀ ಹೆಬ್ಬಾಳಕರ್* ; *ಕಾಂಗ್ರೆಸ್ ಅಭ್ಯರ್ಥಿಗೆ ಅಭೂತಪೂರ್ವ ಬೆಂಬಲ*
ಪ್ರಗತಿವಾಹಿನಿ ಸುದ್ದಿ, *ಕಲ್ಲೋಳಿ:* ಕಲ್ಲೋಳಿ ಪಟ್ಟಣದಲ್ಲಿ ಸೇರಿರುವ ಜನರನ್ನು ನೋಡಿದರೆ ಕಾಂಗ್ರೆಸ್ ಪಕ್ಷದ ವಿಜಯೋತ್ಸವದ ಸಮಾರಂಭ ಎನಿಸುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಎರಡು ದಿನಗಳಿಂದ ಅರಭಾವಿ ಕ್ಷೇತ್ರ ವ್ಯಾಪ್ತಿಯಲ್ಲಿ 11 ಕಡೆ ಸಭೆ ನಡೆಸಿರುವೆ, ಹೋದಲೆಲ್ಲಾ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ ಎಂದರು.
ಕಲ್ಲೋಳಿಯ ಗಾಂಧಿ ಮೈದಾನದಲ್ಲಿ ಶನಿವಾರ ಸಂಜೆ ನಡೆದ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ಪಕ್ಷ ಅಂದರೆ ಬದ್ಧತೆ, ಎಲ್ಲರನ್ನೂ ಸಮಾನತೆಯಿಂದ ನೋಡುವ ಪಕ್ಷ ಕಾಂಗ್ರೆಸ್. ಚುನಾವಣಾ ಪೂರ್ವ ಐದು ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ವಿ. ಇದೀಗ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಈ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಹೇಳಿದರು.
ಏಳು ಕೋಟಿ ಜನ ಸಂಖ್ಯೆಯ ಕರ್ನಾಟಕದಲ್ಲಿ ಒಬ್ಬಳೇ ಮಹಿಳಾ ಮಂತ್ರಿಯಾಗಿರುವೆ. ಮನೆ ಮನೆಗೆ ಗೃಹಲಕ್ಷ್ಮಿ ಯೋಜನೆಯನ್ನು ತಲುಪಿಸುವಂಥ ಪುಣ್ಯದ ಕೆಲಸ ನನಗೆ ಸಿಕ್ಕಿದೆ ಎಂದು ಹೇಳಿದರು. ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸಬೇಕು ಎಂದ ತೆರದಾಳ ಶಾಸಕ ಸಿದ್ದು ಸವದಿ ಜೊತೆ ವಿಧಾನಸಭೆಯಲ್ಲಿ ವಾಗ್ವಾದ ನಡೆಸಿದ್ದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರೆ ಗ್ಯಾರಂಟಿ ಯೋಜನೆಗಳಿಗೆ ಮತ ಹಾಕಿದಂತೆ. ನಮ್ಮ ಸರ್ಕಾರ ವಿಶ್ವ ಗುರು ಬಸವಣ್ಣನವರನ್ನು ಸಾಂಸ್ಕೃತಿಕ ರಾಯಭಾರಿ ಎಂದು ಘೋಷಿಸಿದೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯ ಸ್ವಾಭಿಮಾನದ ಪ್ರಶ್ನೆ. ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡುವಾಗಲೂ ನೂರು ಬಾರಿ ಯೋಚನೆ ಮಾಡುತ್ತೇವೆ. ಆದರೆ ಬಿಜೆಪಿಯವರು ಯಾವ ಮಾನದಂಡದ ಮೇಲೆ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಕೊಟ್ಟರು ಅಂತ ಗೊತ್ತಿಲ್ಲ. ಶೆಟ್ಟರ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಬೆಳಗಾವಿ ಅಭಿವೃದ್ಧಿಗೆ ಶ್ರಮಿಸಲಿಲ್ಲ. ಕರೊನಾ ವೇಳೆ ಜಿಲ್ಲೆಯಿಂದ ಆಕ್ಸಿಜನ್ ಸಿಲಿಂಡರ್ ಗಳನ್ನು ಹುಬ್ಬಳ್ಳಿ ಗೆ ಸ್ಥಳಾಂತರಿಸಿದರು. ಹಲವು ಕಚೇರಿಗಳು, ಯೋಜನಗಳು ಬೆಳಗಾವಿಗೆ ಬರದಂತೆ ತಡೆದರು. ಇಂಥ ವ್ಯಕ್ತಿ ಇಂದು ಬೆಳಗಾವಿ ನಮ್ಮ ಕರ್ಮ ಭೂಮಿ ಅಂತ ಹೇಳ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಬಂದು ಬಿಜೆಪಿ ನಾಯಕರನ್ನು ಹಿಗ್ಗಾಮುಗ್ಗಾ ಬೈದ್ರು, ರಾಹುಲ್ ಗಾಂಧಿ ಪ್ರಧಾನಿ ಆಗಬೇಕು ಅಂದರು. ಏಕಾಏಕಿ ಬಿಜೆಪಿಗೆ ಹೋಗಿ ಇದೀಗ ಬೆಳಗಾವಿಗೆ ಬಂದು ಚುನಾವಣೆಗೆ ನಿಲ್ತಾರೆ. ಶೆಟ್ಟರ್ ಅವರೇ ನಿಮ್ಮ ನೈತಿಕತೆ ಎಲ್ಲಿ ಹೋಯಿತು ಎಂದು ಕಿಡಿ ಕಾಡಿದರು.
18 ವಯಸ್ಸಿಗೆ ದೇಶದ ಗಡಿ ಕಾಯಲು ಯುವಕರನ್ನು ಕಳುಹಿಸುತ್ತೇವೆ. 18ನೇ ವಯಸ್ಸಿಗೆ ಮತದಾನದ ಹಕ್ಕು ನೀಡಲಾಗಿದೆ. ಶೆಟ್ಟರ್ ಯುವಕರಿದ್ದಾಗ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದಕ್ಕೆ ಅವರು ಸಿಎಂ ಆಗಿದ್ದು. ಇದೀಗ ನನ್ನ ಮಗ ಯುವಕ ಅವನಿಗೆ ಚುನಾವಣೆ ಬೇಕಿತ್ತೇ ಎಂದು ಪ್ರಶ್ನಿಸಲಾಗ್ತಿದೆ ಎಂದು ಹೇಳಿದರು
ಬೆಳಗಾವಿಯಲ್ಲಿ ಅಭಿವೃದ್ಧಿ ಪರ್ವ ಶುರುವಾಗಲಿದೆ. ರಾಮ ರಾಜ್ಯದ ಪರಿಕಲ್ಪನೆ ಹೊಂದಿರುವ ಪಕ್ಷ ಎಂದರೆ ಕಾಂಗ್ರೆಸ್ ಪಕ್ಷ. ಸಮಾಜದಲ್ಲಿ ಎಲ್ಲರೂ ಸಮಾನರು ಎಂದು ಕಾಂಗ್ರೆಸ್ ಸಾರುತ್ತಿದೆ. ನನ್ನ ಮಗ ಕೂಡ ನನ್ನ ಹಾಗೆ ಸಾಮಾಜಿಕ ಬದ್ಧತೆ ಹೊಂದಿದ್ದಾನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಕ್ಷೇತ್ರದಲ್ಲಿ 25 ವರ್ಷ ಬಿಜೆಪಿಗೆ ಅಧಿಕಾರ ಕೊಟ್ಟಿದ್ದೀರಿ, ಇನ್ನು ಐದು ವರ್ಷ ನಮಗೆ ಕೊಡಿ. ಅಭಿವೃದ್ಧಿ ಅಂದರೆ ಏನು ಅಂತ ಮಾಡಿ ತೋರಿಸುತ್ತೇವೆ ಎಂದರು. ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನಗೊಳ್ಳುತ್ತೆ ಅಂತ ಬಿಜೆಪಿಯವರು ಹಗಲು ಕನಸು ಕಾಣ್ತಾ ಇದ್ದಾರೆ. ಸರ್ಕಾರಕ್ಕೆ ಏನೂ ಆಗಲ್ಲ. ಇದು ಜನಾಶೀರ್ವಾದ ಇರುವ ಸರ್ಕಾರ ಎಂದು ಹೇಳಿದರು.
ಸಮಾವೇಶದಲ್ಲಿ ಬಾಳಪ್ಪ ಬೆಳಕೊಡಿ, ರಾಸಬ್, ಡಾ.ಮಹಾಂತೇಶ್ ಕಡಾಡಿ, ಭೀಮಪ್ಪ ಹಂದಿಗುಂದ್, ರಮೇಶ್ ಉಟಗಿ, ಅನಿಲ್ ಕುಮಾರ್ ದಳವಾಯಿ, ಲಗಮನ್ನ ಕಳಸನ್ನವರ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ