ಜನಾಭಿಪ್ರಾಯದಂತೆ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ – ಲಕ್ಷ್ಮೀ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾನು ಕ್ಷೇತ್ರದಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಮೊದಲಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಕ್ಕೆ ಕೆಲವರು ಟೀಕಿಸುತ್ತಿದ್ದಾರೆ. ಮೂಲಭೂತ ಸೌಲಭ್ಯಗಳಿಲ್ಲದಿದ್ದರೆ ಜನರು ಬದುಕುವುದು ಎಷ್ಟು ಕಷ್ಟ ಎನ್ನುವುದು ನನಗೆ ಗೊತ್ತು. ಹಾಗಾಗಿ ಪ್ರತಿಯೊಂದು ಕೆಲಸ ಮಾಡುವಾಗಲೂ ಆಯಾ ಪ್ರದೇಶದ ಜನರ ಅಭಿಪ್ರಾಯ ಪಡೆದೇ ಮಾಡಿದ್ದೇನೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ದೇಸೂರ್ ಮತ್ತು ನಾಗೇನಟ್ಟಿಯಲ್ಲಿ ಶಾಸಕಿ, ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ್ ಶುಕ್ರವಾರ ಪ್ರಚಾರ ನಡೆಸಿ ಮಾತನಾಡುತ್ತಿದ್ದರು. ಯಾವುದೇ ಪ್ರದೇಶದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಬೇಕಾಗುತ್ತದೆ. ಅಭಿವೃದ್ಧಿಯ ಕಲ್ಪನೆ ನನಗೂ ಇದೆ, ನನ್ನ ಕ್ಷೇತ್ರದ ಜನರಿಗೂ ಇದೆ. ಹಾಗಾಗಿ ಜನರು ಅವರಿಗೆ ಯಾವುದು ಅಗತ್ಯವೋ ಅದನ್ನು ಕೇಳುತ್ತಾರೆ, ಅವರು ಏನನ್ನು ಕೇಳುತ್ತಾರೋ ಅದನ್ನು ನಾನು ಮಾಡಿಕೊಡುತ್ತೇನೆ. ನನ್ನ ಕ್ಷೇತ್ರದ ಜನರ ಸ್ವಾಭಿಮಾನ ಕೆಣಕುವ ಕೆಲಸವನ್ನು ಯಾರೂ ಮಾಡಬಾರದು ಎಂದು ಹೆಬ್ಬಾಳಕರ್ ಎಚ್ಚರಿಸಿದರು.
ಹತ್ತಾರು ವರ್ಷಗಳಿಂದ ಮೂಲಭೂತ ಸೌಲಭ್ಯಗಳೇ ಇಲ್ಲದೆ ಜನರು ಕಷ್ಟಪಡುತ್ತಿದ್ದರು. ನಾನು ಮೊದಲ ಅವಧಿಯಲ್ಲಿ ಅದಕ್ಕೆ ಆದ್ಯತೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ದೊಡ್ಡ ದೊಡ್ಡ ಯೋಜನೆಗಳನ್ನು ತರಲಿದ್ದೇನೆ. ಯುವ ಜನರಿಗೆ ಉದ್ಯೋಗ ಕಲ್ಪಿಸುವ ಕೆಲಸ ಮಾಡಲಿದ್ದೇನೆ. ಏನಿದ್ದರೂ ನಿಮ್ಮೊಂದಿಗೆ ಚರ್ಚಿಸಿಯೇ ಮುಂದಡಿ ಇಡುತ್ತೇನೆ. ನಿಮ್ಮ ಆದೇಶದಂತೆ ನಡೆಯುತ್ತೇನೆಯೇ ವಿನಃ ಬೇರೆಯವರದಲ್ಲ ಎಂದು ಅವರು ತಿಳಿಸಿದರು.
ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ 4ನೇ ನಂಬರ್ ನಲ್ಲಿರುವ ನನ್ನ ಹೆಸರಿನ ಮುಂದೆ ಇರುವ ಬಟನ್ ಒತ್ತುವ ಮೂಲಕ ಹಸ್ತದ ಗುರುತಿಗೆ ಮತ ನೀಡಿ. ನಾವೆಲ್ಲರೂ ಒಟ್ಟಿಗೇ ಮುಂದೆ ಸಾಗೋಣ. ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯೋಣ ಎಂದು ಹೆಬ್ಬಾಳಕರ್ ವಿನಂತಿಸಿದರು.
ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಹಾಗೂ ಸ್ಥಳೀಯ ಮುಖಂಡರಾದ ನಾಮದೇವ ಅಂಕಲೇಕರ್, ಓಮಣ್ಣ ಕರ್ಲೇಕರ್, ಯಲ್ಲೇಶಿ ಹಾಗೇದಾಳ, ಬಸು ಹಂಪಣ್ಣವರ್, ಪುನ್ನಪ್ಪ ಪಾಟೀಲ, ದೇವೇಂದ್ರ ಪಾಟೀಲ, ನಾಗಪ್ಪ ಬೇಕಿನಕೇರಿ, ದೇವೇಂದ್ರ ಪಾಟೀಲ, ಪರಶುರಾಮ ಕೋಲ್ಕಾರ, ವೆಂಕಟ್ ಪಾಟೀಲ, ಬರಮಾನಿ ಪಾಟೀಲ, ಸಾತೇರಿ ಕಾಶೇಕರ್, ಗಣಪತ್ ಪಾಟೀಲ, ಜ್ಯೋತಿಬಾ ಕಾಶೇಕರ್, ಮನೋಜ್ ಸಾವಂತ್, ಅನಿಲ್ ಪಾಟೀಲ, ಶಾಂತಾರಾನ ಲಕ್ಕೇಬೈಲಕರ್, ನಾರಾಯಣ ಕಾಶೇಕರ್, ಗಜಾನನ ವಶೂಲಕರ್, ನಾಮದೇವ ಅವಚಾರಿ, ಬುಜಂಗ್ ಗುರವ್, ದೌಲತ್ ಕೋಲ್ಕಾರ, ಶ್ಯಾಮ್ ಗಾವ್ಕರ್, ಬಾಪು ಪಾಟೀಲ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ