ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ತಾಲೂಕಿನಲ್ಲಿ ಸ್ತವನಿಧಿ ಗ್ರಾಮವೊಂದು ಬಿಟ್ಟರೆ ಎಲ್ಲಿಯೂ ನೀರಿನ ತೊಂದರೆ ಇಲ್ಲ. ಸ್ತವನಿಧಿ ಗ್ರಾಮದಲ್ಲಿ ಶನಿವಾರದಿಂದ ಟ್ಯಾಂಕರ್ ಮೂಲಕ ನೀರಿನ ಸರಬರಾಜು ಮಾಡಲು ಸೂಚಿಸಲಾಗಿದೆ. ತಾಲೂಕಿನಲ್ಲಿ ಪ್ರವಾಹ, ಮಳೆಯಿಂದ ಹಾನಿಯಾದಲ್ಲಿ ಜಾಗೃತಿ ವಹಿಸಲು ತಾಲೂಕಾಡಳಿತಕ್ಕೆ ಸೂಚಿಸಲಾಗಿದೆ. ಒಪ್ಪಂದದ ಪ್ರಕಾರ ಮಹಾರಾಷ್ಟ್ರದಿಂದ ಇನ್ನೂ ನೀರು ಬರಬೇಕಾಗಿದ್ದು ಅದನ್ನು ಶೀಘ್ರದಲ್ಲೆ ಬಿಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ’ ಎಂದು ಶಾಸಕಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಶುಕ್ರವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ’ಬೇಸಿಗೆಕಾಲದಲ್ಲಿ ೪೦ ಡಿಗ್ರಿ ಸೆಲ್ಸಿಯಸ್‌ಕ್ಕಿಂತಲೂ ಅಧಿಕ ತಾಪಮಾನ ತಲುಪಿದ್ದು ಸಾರ್ವಜನಿಕರಿಗೆ ನೀರಿನ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿಶೇಷವಾಗಿ ಹೆಸ್ಕಾಂ ಅಧಿಕಾರಿಗಳಿಗೆ ವಿದ್ಯುತ್ ಕಡಿತದಿಂದ ನೀರಿನ ಸಮಸ್ಯೆ ಅಥವಾ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆ ಉಂಟಾಗಬಾರದೆಂದು ಎಚ್ಚರಿಕೆ ನೀಡಲಾಗಿದೆ’ ಎಂದರು.
’ಸ್ಥಳೀಯರಿಗೆ ಕುಡಿಯುವ ನೀರು ಪೂರೈಸುವ ಜವಾಹರ ಜಲಾಶಯದಲ್ಲಿ ಸುಮಾರು ಶೇ.೨೮ರಷ್ಟು ಹೂಳು ಇದೆ. ಆಧುನಿಕ ತಾಂತ್ರಿಕತೆಯ ವ್ಯವಸ್ಥೆಯಡಿ ಹೂಳೆತ್ತಲು ಪ್ರಯತ್ನಿಸಲಾಗುವುದು. ಮುಂದಿನ ೨೦ ರಿಂದ ೨೫ ವರ್ಷಗಳವರೆಗೆ ಸ್ಥಳೀಯರಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ತಜ್ಞರಿಂದ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಲು ಚಿಂತನೆ ನಡೆಸಲಾಗಿದೆ’ ಎಂದರು.
’ಬೂಧಿಹಾಳ ಗ್ರಾಮ ವ್ಯಾಪ್ತಿಯಲ್ಲಿ ವೇದಗಂಗಾ ನದಿಯ ಬ್ಯಾರಿಕೇಡ್ ತೆಗೆದು ಎರಡು ದಿನಗಳಲ್ಲಿ ನೀರು ಬರಲಿದ್ದು ನಗರದಲ್ಲಿ ಸಮರ್ಪಕವಾಗಿ ನೀರು ಸರಬರಾಜು ಆಗಲಿದೆ. ಜಾಕ್‌ವೆಲ್, ಓಎಚ್‌ಡಿ, ಡಬ್ಲ್ಯೂಪಿಗಳಿಗೆ ವಿದ್ಯುತ್ ಸಂಪರ್ಕದ ಸಮಸ್ಯೆ ಇದ್ದು ಎಕ್ಸಪ್ರೆಸ್ ಫೀಡರ್ ಅಳವಡಿಸಲು ಪ್ರಯತ್ನಿಸಲಾಗುತ್ತಿದೆ. ಅಲ್ಲಿ ಎರಡು ಟಾವರ್‌ಗಳನ್ನು ಅಳವಡಿಸಲಬೇಕಾಗಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅನುಮತಿ ಕೇಳಲಾಗಿದೆ. ಮುಂದಿನ ದಿನಗಳಲ್ಲಿ ನೀರಿನ ತೊಂದರೆಯಾದಲ್ಲಿ ನಗರದ ಪ್ರತಿ ವಾರ್ಡ್‌ಗಳಲ್ಲಿ ಟ್ಯಾಮಕರ್ ಮೂಲಕ ಸರಬರಾಜು ಮಾಡಲು ತಿಳಿಸಲಾಗಿದೆ’ ಎಂದರು.
’ಪ್ರತಿ ವರ್ಷ ಜೂನ್ ಹಾಗು ಜುಲೈ ತಿಂಗಳಲ್ಲಿ ಪ್ರವಾಹ ಉಂಟಾಗುವುದು ಸಾಮಾನ್ಯ ಸಂಗತಿಯಾಗಿದೆ. ಅದರ ಮುಂಜಾಗ್ರತಾ ಕ್ರಮಕ್ಕಾಗಿ ತಹಶೀಲ್ದಾರ ಮತ್ತು ತಾಲೂಕಾ ಪಂಚಾಯಿತಿ ಇಓ ಅವರಿಗೆ ಸೂಚಿಸಲಾಗಿದೆ. ಅತಿಮಳೆಯಿಂದ ಹಾನಿಯಾದಲ್ಲಿ ಜಾಗೃತಿ ವಹಿಸಲು ಹೇಳಲಾಗಿದೆ’ ಎಂದರು.
’ಮಲೇರಿಯಾ, ಚಿಕುನ್‌ಗುನ್ಯಾ ರೋಗಿಗಳು ತಾಲೂಕಿನಲ್ಲಿ ಕಂಡು ಬಂದಿಲ್ಲ, ಆದರೆ ಡೆಂಗ್ಯೂ ರೋಗಿಯೊಬ್ಬರು ತಾಲೂಕಿನ ಮಾಣಕಾಪೂರದಲ್ಲಿ ಬಲಿಯಾಗಿದ್ದು ಇಡಿ ತಾಲೂಕಿನಾದ್ಯಂತ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ’ ಎಂದ ಅವರು ನಗರದಲ್ಲಿ ನಿರಂತರ ಕುಡಿಯುವ ನೀರಿನ ಯೋಜನೆ ೨೦೧೦-೧೧ರಲ್ಲಿ ಆರಂಬಿಸಲಾಗಿತ್ತು. ಅಲ್ಲಿಂದ ಸತತ ಪ್ರಯತ್ನಗಳಿಂದ ಒಂದು ವ್ಯವಸ್ಥಿತ ಹಂತಕ್ಕೆ ತರಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಜಯವಂತ ಭಾಟಲೆ, ನೀತಾ ಬಾಗಡೆ, ರಾಜೇಂದ್ರ ಗುಂದೇಶಾ, ಸಂತೋಷ ಸಾಂಗಾವಕರ, ಮತ್ತಿತರರು ಉಪಸ್ಥಿತರಿದ್ದರು.
’ಸಚಿವ ಸಂಪುಟದ ಗದ್ದಲ ಮುಗಿಯಲಿ. ಆಮೇಲೆ ಗ್ಯಾರಂಟಿ ಕಾರ್ಡ್ ಕುರಿತು ನೋಡೋಣ. ಅವರ ಗ್ಯಾರಂಟಿಗಳಿಗೆ ಗ್ಯಾರಂಟಿಯೇ ಇಲ್ಲ. ಎಲ್ಲವೂ ಸುಳ್ಳಿನ ಕಂತೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುಮೋದನೆಗೊಂಡಿದ್ದ ಕಾಮಗಾರಿಗಳನ್ನು ತಡೆಹಿಡಿಯುವುದು ಸೂಕ್ತವಲ್ಲ. ಅದನ್ನು ಖಂಡಿಸುತ್ತೇನೆ’ ಎಂದರು.
https://pragati.taskdun.com/https-pragativahini-com-cabinet-complete-tomorrow-24-mlas-take-oath/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ