Latest

ಜಾತಿಯೊಳಗೊಂದು ಕೋತಿ ಕೂಗಿತ್ತು ಕಂಡೆ !

ಸರಸ ಸಂಘರ್ಷ

 

ಪ್ರೊ. ಜಿ. ಎಚ್. ಹನ್ನೆರಡುಮಠ
ಈ ಜಗತ್ತಿನ ಒಬ್ಬ ವ್ಯಕ್ತಿ ಬಸವ ಸಿದ್ಧಾಂತವನ್ನು ಮೆಚ್ಚಿಕೊಂಡು ಲಿಂಗದೀಕ್ಷೆ ಪಡೆದು ಬಂದರೆ, ಆತನನ್ನು ಈ ನಮ್ಮ ಉಪಜಾತಿಗಳ ಯಾವ ಡಬ್ಬಿಗಳೂ ತೆಗೆದುಕೊಳ್ಳಲಾರವು ! ಅವನದೇ ಒಂದು ಬೇರೆ ಡಬ್ಬಿ !
ಈ ರೋಗ ಲಿಂಗಾಯತ ಮಾತ್ರವಲ್ಲ ಸಮಗ್ರ ಭಾರತೀಯ ಧರ್ಮಗಳಿಗೆಲ್ಲ ಒಂದೇ. ನಾವು ನೋಡುವ “ಬ್ರಾಹ್ಮಣ” “ಕ್ಷತ್ರಿಯ” “ಜೈನ” ಇತ್ಯಾದಿ ಪ್ರತ್ಯೇಕ ಧರ್ಮವಾಗಿದ್ದರೂ ಈ ಎಲ್ಲ ಧರ್ಮಗಳಲ್ಲಿ ಎಷ್ಟು ಪ್ರಭೇದಗಳಿಲ್ಲ ? ಇದೊಂದು ಬಿಚ್ಚಿಬಿಡಿಸದ ಬ್ರಹ್ಮಗಂಟು ! ಗಂಟಿನೊಳಗಿನ ಕಗ್ಗಂಟು!!
ಭಾರತದ ಅರ್ಥವೇ ಇದೇ ಏನು ?
ಒಬ್ಬ ಅಮೇರಿಕೆಯವ ಭಗವದ್ಗೀತೆಯನ್ನು ಓದಿ ಮೆಚ್ಚಿಕೊಂಡು ಹಿಂದೂ ಧರ್ಮ ಸ್ವೀಕರಿಸಲು ಬಂದರೆ ಅವನಿಗೆ ಬಹಳವಾದರೆ “ಹಿಂದೂ” ಅಂತ ಕರೆಯಬಹುದೇ ಹೊರತು, ಇದರ ಒಳ ಒಕ್ಕಲಾದ ದ್ವೈತ-ಅದ್ವೈತ- ಶಕ್ತಿವಿಶಿಷ್ಟಾದ್ವೈತ ಪಂಥಗಳ ಯಾವ ಮಠದ ಅಚ್ಚಿನಲ್ಲಿ ಪಡೇಚುಗೊಳಿಸಬಹುದು ?
ಆತ ಅಭಿಮಾನಿ ಭಕ್ತನಾಗಬಹುದು ಆದರೆ ನಮ್ಮ ಮಠಗಳಿಗೆ ಗುರುವಾಗಲಾರ. ದೀಪವಾಗಿ ದೀಪ ನೀಡಲಾರ. ಜಾತಿಯೇ ಗುರುತ್ವ ಆದಾಗ ಜ್ಯೋತಿ ಏನುಮಾಡಬಲ್ಲದು ? ಇವೆಲ್ಲವೂ ಕುಸ್ತೀ ಆಡಿದರೂ ಮೈಗೆ ಮಣ್ಣು ತಗಲಕೂಡದು ಎಂಬ ಜಾಣನಿಯಮ ಉಳ್ಳವು !
ಸಮಗ್ರ ಲಿಂಗಾಯತ ಧರ್ಮವು ಸಂಪೂರ್ಣ ಅಸಂಘಟಿತವಾಗಿದ್ದರೂ ಅದರ ಈ ಒಳಪಂಗಡಗಳು ಮಾತ್ರ ತುಂಬಾತುಂಬಾ ಸುಸಂಘಟಿತವೂ ಬಲಾಢ್ಯವೂ ಆಗಿ , ವಿಭಿನ್ನ ಧೃವಬಿಂದುಗಳಾಗಿ ಹಿಗ್ಗುತ್ತಲೇ ಇವೆ ! ಲಿಂಗಾಯತರ ಸಣ್ಣ-ದೊಡ್ಡ ಉಪಜಾತಿಗಳನ್ನು ಒಳಹೊಕ್ಕು ನೋಡಿದರೆ ಈ ಉಪಜಾತಿಗಳಿಗೂ ಮರಿಜಾತಿಗಳು ಇದ್ದು; ಅವರಲ್ಲಿ ಊಟ-ಉಪಚಾರ- ಕನ್ಯಾ-ವರ ಸಂಬಂಧ ನಡೆಯಲಾರದು. ಇದು ಲಿಂಗಾಯತ ಮಾತ್ರವಲ್ಲ ಬ್ರಾಹ್ಮಣರ ಬಹತೇಕ ಎಲ್ಲ ಪಂಗಡಗಳಲ್ಲಿ ಎದ್ದು ಕಾಣುವ ನಿಘಂಟು. ಈ ಉಪಜಾತಿಗಳು ಗಂಟೆ ಬಾರಿಸಿದಾಗ ಜ್ಞಾನವನ್ನೇ ಆಶ್ರಯಿಸಿದ ಉಪನಿಷತ್ತುಗಳು ಗೀತೆ ಏನು ಮಾಡಬಲ್ಲವು? ಈ ಮಹಾಪ್ರಶ್ನೆಗೆ ಪ್ರಯೋಗ ಸಿದ್ಧವಾದ ಉತ್ತರ ಕಂಡುಕೊಳ್ಳಲು ೧೨ನೆಯ ಶತಮಾನ ಸಿದ್ಧವಾದರೂ ಅದಕ್ಕೆ ಕುತ್ತು- ವಿಪತ್ತು- ಆಪತ್ತುಗಳು ಬಂದು; ಮತ್ತೆ ನಮ್ಮ ಜಂಗಮ ಸಂಸ್ಕೃತಿ ಸ್ಥಾವರವಾಗಿ, ನಿಂತ ನೀರಾಯಿತು; ಕಲಕು- ಮಲಕು ಕಲಗಂಚಾಯಿತು ! ಇಂದು ಗುಪ್ತವಾಗಿ ಒಂದೊಂದು ಮಠಗಳನ್ನು ಪದರು ಬಿಚ್ಚಿ ಒಳಹೊಕ್ಕು ನೋಡಿದರೆ ಅವು ಒಂದು ಕಾಲಕ್ಕೆ ಒಂದು ಜಾತಿಯ ನೆಲೆಗೆ ನಿಷ್ಠೆ ತೋರಿದ್ದು ಸುಳ್ಳಲ್ಲ. ನಾವು ಜಾತಿಜಂಗಮರಲ್ಲಿಯೂ ಪಂಚಪೀಠಗಳ ವಿಭಿನ್ನ ಬಗಿಗಳು ನಿನ್ನೆ ಮೊನ್ನೆಯವರೆಗೆ ನಮ್ಮನ್ನು ಕಾಡಿದ್ದು ಸುಳ್ಳಲ್ಲ. ನಮ್ಮಲ್ಲಿ ಜ್ಯೋತಿಗೂ ಜಾತಿ ಉಂಟು…. ಶೂನ್ಯಕ್ಕೂ ಕಂಪಾರ್ಟಮೆಂಟ್ಸ ಉಂಟು !
ಜೊತೆಜೊತೆಗೆ ಈ ಉಪಪಂಗಡಗಳೊಂದಿಗೆ ಆಯಾ ಪಂಗಡಗಳ ಕೆಲಸ-ಕಾರ್ಯಗಳ ತಂತ್ರಜ್ಞಾನ ಕೌಶಲವೂ ಜಾತಿನಿಷ್ಟ ವಿಶಿಷ್ಟ ತರಬೇತಿಗಳೂ ಸ್ಪರ್ಧಾತ್ಮಕವಾಗಿಯೂ ವ್ಯಾವಹಾರಿಕವಾಗಿಯೂ ಶತಮಾನಗಳಿಂದ ಅಗಾಧವಾಗಿ ಬೆಳೆಯುತ್ತಲೇ ಬಂದಿವೆ. ಉದಾಹರಣೆಗೆ ಇಲಕಲ್ಲ ಕೈಮಗ್ಗದ ಚಿತ್ತಾರ-ಬಿತ್ತಾರ ಸೀರೆಗಳಾದ ಗಚ್ಚಿದಡಿ, ಗೋಮಿದಡಿ, ಗಾಡಿದಡಿ, ತೋಪುತೆನಿ, ಚಿಕ್ಕಿ ಪರಾಸ, ಜರಿ ಪರಾಸ, ಕಡ್ಡಿ, ಪುತಳಿ, ರಾಗಾವಳಿ, ಪಂಚರಂಗಿ, ಕೊಂಡಿಚಿಕ್ಕಿ, ಚಂದ್ರಕಾಳಿ, ಡಫಳಾ, ಚದುರಂಗಚಿಕ್ಕಿ…. ಇತ್ಯಾದಿ ನೇಯ್ಗೆಯ ಈ ಕಲಾಕೃತಿಗಳ ಹಿಂದೆ ಹಲವು ಸಾವಿರ ಕೈಗಳ ಶತಮಾನದ ಸತತ ದುಡಿಮೆ-ನಿಷ್ಠೆ- ಪ್ರಯೋಗಗಳ ಅಲಿಖಿತ ಇತಿಹಾಸವೇ ಇದೆ.
ಸೀರೆ ನೇಯ್ಗೆ ನೇಕಾರನಿಗೆ ಕುಲಾನುಗತವಾಗಿ ಗೊತ್ತು. ಈ ಜೇಡರಲ್ಲೂ ಲೆಕ್ಕವಿಲ್ಲದಷ್ಟು ಒಳಪಂಗಡಗಳುಂಟು. ಇಲಕಲ್ಲು ಇದಕ್ಕೆ ಪ್ರತ್ಯಕ್ಷ ಸಾಕ್ಷಿ. ಅರವತ್ತು ವರ್ಷಗಳ ಹಿಂದೆ ನಾನು ನೀಲಗಾರ ಹುಡಿಗಿಯನ್ನು ಬಣಗಾರ ಹುಡುಗನಿಗೆ ಕೊಡಿಸಲು ಮಾತುಕತೆ ಮಾಡಿ, ನಿಶ್ಚಯಕಾರಣ ಇಡಿಸಿಬಿಟ್ಟೆ. ಇಬ್ಬರೂ ಬಣ್ಣ ಹಾಕುವವರೇ. ನೂರಾರು ಜನರಿಗೆ ಹುಗ್ಗಿ-ಅನ್ನ- ಸಂಬಾರು ಸಿದ್ಧವಾಯಿತು. ಹುಗ್ಗಿ ಕತಕತ ಕುದಿಯುತ್ತಿದ್ದಂತೆ; ಕೇವಲ ಈ ಬಣ್ಣಹಾಕುವವರ ಒಳಪಂಗಡಗಳ ಕಾರಣದಿಂದ ಹಿರಿಯರಿಂದ ಸಂಬಂಧ ಮುರಿದು ಬಿತ್ತು. ಬ್ರಾಹ್ಮಣರು ಸೀರೆ ನೇಯಲು ಕುಂತದ್ದು ನಾನು ಈವರೆಗೂ ಕಂಡಿಲ್ಲ. ಮಚ್ಚೆ ಮಾಡುವ ಸೂಕ್ಷ್ಮತೆ ಚಮ್ಮಾರನಿಗೆ ಗೊತ್ತಿರುವಂತೆ ಜಂಗಮನಿಗೆ ಗೊತ್ತಾಗಲಾರದು. ಕಾಷ್ಟ ಶಿಲ್ಪ, ಮೂರ್ತಿ ಶಿಲ್ಟ, ಪಂಚಲೋಹಗಳ ಕುಸುರು ಕೆತ್ತನೆಗಳ ದುಡಿಮೆಯನ್ನು ಒಬ್ಬ ವೇದವನೋದುವ ವಿಪ್ರ ಮಾಡಲಾರ. ಜಾತಿಗಳು ಸಾವಿರಾರು ಕರಕುಶಲ ಕಾಯಕಗಳ ಕಲೆಗಳ ಪ್ರಯೋಗಾತ್ಮಕ ಗಣಿಗಳಾಗಿ ಬೆಳೆದು ಬಂದು…. ಈಗ ಜೊಂಡುಗಟ್ಟಿದ ಜಿಡ್ಡು ಸ್ಥಾಯಿಸಂಸ್ಥೆಗಳಾಗಿಬಿಟ್ಟಿವೆ. ನಾನು ನೋಡಿದಂತೆ ಶ್ರೀಶೈಲ ಮಲ್ಲಿಕಾರ್ಜುನನ ಕಾಡುಭಕ್ತನಾದ ಒಬ್ಬ “ಸುಡುಗಾಡುಸಿದ್ದ” ಮಾಡುತ್ತಿದ್ದ ಊಹಿಸಲೂ ಸಾಧ್ಯವಿಲ್ಲದ ಕಣ್ಕಟ್ಟು ಪವಾಡಗಳನ್ನು ಯಾವ ಪವಾಡಪುರುಷರೂ ಮಾಡಲಾರರು. ಈಗ ಅವನ ಮಕ್ಕಳು ಸರಕಾರಿ ಸ್ಕಾಲರ್ ಶಿಪ್ ಪಡೆದು ಪಿಯೂಸಿ ಫೇಲಾಗಿ ಕುಂತಿವೆ. ಶತಮಾನಗಳ ಅವನ ಕುಲವಿದ್ಯೆ ಅವನ ಹಿಂದೆಯೇ ಹಳ್ಳ ಹಿಡಿದು ಹಾಳು ಆತು.
ಹಾಂ…. ಇಲಕಲ್ಲದಲ್ಲಿ ಇನ್ನೂ ಒಂದು ಜಾತಿ ಇದೆ. ಅದಕ್ಕೆ ಡಾಕ್ಯೂಮೆಂಟ್ಸ ಇಲ್ಲ. ಏನೆಂದರೆ ಎರಡು ವಿಭಿನ್ನ ಜಾತಿಯವರು ಗಂಡ-ಹೆಂಡಿರು ಆದರೆ ಅವರಿಗೆ ಏನು ಹೆಸರು? ಯಾವ ಜಾತಿ? ಇಂಥವರಿಗೆ “ಕುರುಸಾಲ್ಯಾರು” ಅಂತ ಜನ ಆಡಿಕೊಳ್ಳುತ್ತಾರೆ. ಇಲ್ಲಿ ನಮ್ಮ ಮಹಾನಗರ ಬೆಂಗಳೂರಲ್ಲಿ ಈ ನಿಯಮಬಾಹಿರ ಕುರುಸಾಲ್ಯಾರಿಗೇ ಒಬ್ಬ ಶ್ರೀಗುರು ಬರುವನೋ ಏನೋ !
ಈಕಾರಣದಿಂದಲೋ ಏನೋ ಬಹಳಷ್ಟು ಭಾರತೀಯರು ಅನಿವಾರ್ಯವಾಗಿ ಇಚ್ಚೆ ಇಲ್ಲದಿದ್ದರೂ ಇಸ್ಲಾಂ ಮತ್ತು ಕ್ರಿಸ್ತ ಮತಗಳಿಗೆ ತಳ್ಳಲ್ಪಡುತ್ತಾರೆ. ಇದೇ ಕಾರಣ ಮುಂದೆ ಮಾಡಿ, ಕೆಲವರು ಭಾರತದ ಧರ್ಮ ಬೆಳೆಯುವ ಧರ್ಮ ಅಲ್ಲ, ಸಾಯುವ ಧರ್ಮ ಅಂತ ಟೀಕಿಸುತ್ತಿರುವದು. ಇದಕ್ಕೆ ಒಂದೇ ಒಂದು ಉತ್ತರವೆಂದರೆ; ಜಗತ್ತಿನ ಯಾವದೇ ದೇಶ-ಧರ್ಮದ ಯೋಗಿ-ಯತಿ ಭಾರತದ ಯಾವುದೇ ಧರ್ಮದ ಮಠಪೀಠಕ್ಕೆ ಮಠಾಧಿಪತಿ ಪೀಠಾಧಿಪತಿ ಆಗುವದೊಂದೇ ದಾರಿ ! ಮಾನವ ಧರ್ಮ ಉಪಚಾರಕ್ಕೆ ಹೇಳುವದಕ್ಕಾಗಿ ಅಲ್ಲ…. ಅದನ್ನು ಮಾಡುವದಕ್ಕೆ ! ಜಾತಿ ಸಂಸ್ಥೆಯನ್ನು ಪ್ರಬಲವಾಗಿ ಎದುರಿಸಿ ನಟುವರ ಕುಲದ ಅಲ್ಲಮನನ್ನು ಶೂನ್ಯಪೀಠಾಧಿಪತಿ ಮಾಡಿದ ಸಾಧನೆ ಸಣ್ಣದಲ್ಲ. ಸಕಲ ಜೀವಾತ್ಮರಿಗೆ ಲೇಸನೆ ಬಯಸುವನೇ ಶರಣನಲ್ಲವೇ?
ಈಗೀಗ ಪ್ರತಿಯೊಂದು ಜಾತಿಗೂ ಗುರುಪೀಠ , ಮಠ, ಜಂಗಮತ್ವವನ್ನು ಕರುಣಿಸುತ್ತಿರುವದು ಒಂದು ಆರೋಗ್ಯಪೂರ್ಣ ಸಮರ್ಥ ಬೆಳವಣಿಗೆ. ಮುಂದೆ ಈ ಮಠಗಳೂ ಎಲ್ಲಿ ವ್ಯಾಪಾರೀ ಕೇಂದ್ರಗಳೂ , ಜಾತೀಯ ಪ್ರತಿಷ್ಠಾಪನೆಯ ರಾಜಕೀಯ ಸಂಸ್ಥೆಗಳು, ವ್ಹೋಟ್ ಬ್ಯಾಂಕ್ ಆಗುವವೋ ಎಂಬ ಸಂಶಯ ಇದ್ದೇ ಇದೆ. ಜಾತಿ ಇದ್ದಲ್ಲಿ ಧರ್ಮ ಇಲ್ಲ; ಧರ್ಮ ಇದ್ದಲ್ಲಿ ಜಾತಿ ಇಲ್ಲ ! ಜಾತಿಗಳೇ ಧರ್ಮದ ಸೋಗು ಹಾಕಿದರೆ ಅಲ್ಲಿ ಜ್ಯೋತಿ ಇರಲಾರದು. ನಮ್ಮ ಗುಡಿ-ಮಠ-ಪೀಠಗಳನೇಕ ಪ್ರತಿಷ್ಟಾಪ್ರೀಯತೆ, ವ್ಯಾಪಾರೀಕರಣ ಹಾಗೂ ಶೋಮನ್ ಶಿಪ್ಪುಗಳತ್ತ ಒಲಿಯುತ್ತಿರುವದು ಇತಿಹಾಸ ಕಂಡ ಸತ್ಯ. ಶೋಮನ್ ಶಿಪ್ಪಿನ ಅರ್ಥಾತ್ ದೇಖಣಾಪ್ರಿಯ ಅಲಂಕಾರದಿಂದ ನಾವು ಸತ್ಯವನ್ನು ಎಷ್ಟು ದಿನ ಮುಚ್ಚಿ ಇಡಲು ಸಾಧ್ಯ?
ಇಂದಿನ ಈ ಮಹಾಸಂಕೀರ್ಣ ಯುಗಮಾನದಲ್ಲಿ ನಮ್ಮವರೇ ಆದ ಹುಡುಗ-ಹುಡಿಗಿಯರು ಈ ಒಳಜಾತಿ-ಉಪಜಾತಿ ಅಷ್ಟೇ ಅಲ್ಲ, “ಜಾತಿ” -“ಧರ್ಮ”- “ವಿವಾಹ”-“ಭಾಷೆ”- “ದೇಶ” ಇತ್ಯಾದಿ ಸಂಸ್ಥೆಗಳನ್ನೆಲ್ಲ ಧಿಕ್ಕರಿಸಿ, ….. “ಲಿವಿಂಗ್ ಟುಗೆದರ್” ಸಂಸ್ಕೃತಿಯ “ಅಪಾಯ”ಕ್ಕೆ ಇಲ್ಲವೆ “ಉಪಾಯ”ದ ವೇದಿಕೆಗೆ ಬಂದಿರುವಾಗ, ನಾವಿನ್ನೂ ಆ ಹಳೆ ಕಳ್ಳಿ-ಕಂಟಿಯ ಕೊಂಬು-ಕೊನರುಗಳಿಗೆ ಉರುಲು ಹಾಕಿಕೊಳ್ಳುತ್ತಿರುವದು ಯಾವ ನ್ಯಾಯ ?
ಲಿಂಗ ಧರಿಸಿದ ಅಂಗದಲ್ಲಿ; ಮಂಜು-ನಂಜುಗಳಿವೆ…. ಗುಂಜು-ಗಂಜಳಗಳಿವೆ…. ಆದರೂ ಬಹುಬೇಗ….. ಮಂಜಿನ ಶಿವಾಲಯಕ್ಕೆ ಬಿಸಿಲ ಕಳಸ ಇಡುವ ಕಾಲ ಬರಬಹುದೇ?
ಬೆಳಕಿನ ತೇರು ಎಳೆಯಬಹುದೇ?…. ಏಳುಮೆಟ್ಟಿನ ಎಚ್ಚತ್ತ ಹುಲಿ ಕೂಗಬಹುದೇ?

ಲೇಖಕರ ವಿಳಾಸ – ಪ್ರೊ. ಜಿ. ಎಚ್. ಹನ್ನೆರಡುಮಠ
# ೫ : “ಮಾವು ಮಲ್ಲಿಗೆ” : ಇಂದ್ರಪ್ರಸ್ಥ ಕಾಲನಿ
ಬನ್ನೇರುಘಟ್ಟದ ದಾರಿ : ಗೊಟ್ಟಿಗೆರೆ ಅಂಚೆ :
ಬೆಂಗಳೂರ- ೫೬೦೦೮೩
ದೂರವಾಣಿ- ೯೯೪೫೭ ೦೧೧೦೮

ಆಗ ಡೇಟಿಂಗ್ ಇರಲಿಲ್ಲ ಬರೀ ಮೀಟಿಂಗ್ ಇತ್ತು!

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button