ಅವಕಾಶ ಸಿಕ್ಕಿದರೆ ಕೃಷಿ ಸಚಿವೆಯಾಗುವ ಆಸೆ ಇದೆ : ಲಕ್ಷ್ಮೀ ಹೆಬ್ಬಾಳಕರ್


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನಾನು ರೈತ ಮನೆತನದಲ್ಲಿ ಹುಟ್ಟಿ, ಬೆಳೆದವಳು. ಮೊದಲಿನಿಂದಲೂ ಮಹಿಳೆಯರಿಗೆ ಮತ್ತು ರೈತರಿಗೆ ಏನಾದರೂ ಮಾಡಬೇಕೆನ್ನುವ ಆಸೆ ಇತ್ತು. ಈಗ ಮಹಿಳೆಯರಿಗಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಮುಂದೆ ಅವಕಾಶ ಸಿಕ್ಕಿದರೆ ಕೃಷಿ ಸಚಿವೆಯಾಗಿ ರೈತರಿಗಾಗಿ ಏನಾದರೂ ಮಾಡಬೇಕೆನ್ನುವ ಆಸೆ ಇದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಹಿರೇಬಾಗೇವಾಡಿಯ ಪಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ಸಂಜೆ ಬೆಳಗಾವಿ ಕೃಷಿ ಇಲಾಖೆಯ ವತಿಯಿಂದ ವಿವಿಧ ಬೆಳೆಗಳಿಗೆ ಡ್ರೋನ್ ಮೂಲಕ ಪೋಷಕಾಂಶಗಳ ಸಿಂಪರಣೆಗೆ ಚಾಲನೆ ನೀಡಿ, ಇಲಾಖೆಯ ವಿವಿಧ ಯೋಜನೆಗಳ ಕೃಷಿ ಪರಿಕರಗಳ ವಿತರಣೆ ಮಾಡಿ ಅವರು ಮಾತನಾಡಿದರು.

ನನಗೆ ರೈತರ ಕಷ್ಟ ಗೊತ್ತು. ರೈತರಿಗೆ ಮಳೆಗಾಲ, ಚಳಿಗಾಲ, ಬೇಸಿಗೆ ಕಾಲ ಎಲ್ಲ ಒಂದೇ, ಶನಿವಾರ, ಭಾನುವಾರ ಎಲ್ಲ ಒಂದೇ. ಎತ್ತುಗಳ ಜೊತೆ, ದನಗಳ ಜೊತೆ ಬೆಳೆದವಳು ನಾನು. ರಾಶಿ ಪೂಜೆ ಮಾಡಿ ಊರಿಗೆ ಊಟ ಹಾಕಿಸುತ್ತಿದ್ದೆವು. ಚಕ್ಕಡಿಯಲ್ಲಿ ಇಡೀ ಊರೆಲ್ಲ ಅಡ್ಡಾಡುತ್ತಿದ್ದೆವು. ರೈತರ ಮನೆಯಲ್ಲಿ, ಕೃಷಿ ವಾತಾವರಣದಲ್ಲಿ ಬೆಳೆದವಳು ನಾನು. ಹಾಗಾಗಿ ರೈತರಿಗಾಗಿ ಏನಾದರೂ ಮಾಡಬೇಕು ಎನ್ನುವ ಆಸೆ ಇದೆ. ಅದಕ್ಕಾಗಿ ಮುಂದೆ ಅವಕಾಶವಾದರೆ ಕೃಷಿ ಸಚಿವೆಯಾಗುತ್ತೇನೆ ಎಂದು ಹೇಳಿದರು.

ಹಿರೇ ಬಾಗೇವಾಡಿ ಹಾಗೂ ಉಚಗಾಂವ ಬ್ಲಾಕ್ ಗೆ ಸಂಬಂಧಿಸಿದ ಎಲ್ಲ ಗ್ರಾಮಗಳ ರೈತರಿಗೆ ಕೃಷಿ ಪರಿಕರಗಳನ್ನು ವಿತರಿಸಲಾಗಿದ್ದು, ಕಾರ್ಯಕ್ರಮದಲ್ಲಿ ಸುಮಾರು 1500ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕೃಷಿ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ, ಉಪ ಕೃಷಿ ನಿರ್ದೇಶಕರಾದ ಎಸ್.ಬಿ ಕೊಂಗವಾಡ್, ಕೃಷಿ ಅಧಿಕಾರಿ ಎಂ.ಎಸ್.ಪಟಗುಂದಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸ್ಮಿತಾ ಪಾಟೀಲ, ಉಪಾಧ್ಯಕ್ಷರಾದ ಪುಷ್ಪಾವತಿ ನಾಯ್ಕರ್, ಸಿ.ಎಸ್.ನಾಯಕ, ಸುರೇಶ ಇಟಗಿ, ಸಿ.ಸಿ.ಪಾಟೀಲ, ಸುರೇಶ್ ಕಂಬಿ, ನಾಗಪ್ಪ ಬಾಗೇವಾಡಿ, ಸ್ವಾತಿ ಇಟಗಿ, ಫಕೀರಗೌಡ ಪಾಟೀಲ, ಈರಣ್ಣ ಜಪ್ತಿ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ