Latest

ಜನಾಶೀರ್ವಾದ ಇರುವವರೆಗೆ ಜನಸೇವೆ ಮಾಡುವೆ – ಸಿಎಂ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ, ಹಾವೇರಿ: “ದೇವರ ಆಶೀರ್ವಾದ ಇದ್ದರೆ ಬಿರುಗಾಳಿಯಲ್ಲೂ ದೀಪ ಉರಿಯುತ್ತದೆ. ಅದೇ ರೀತಿ ಬದುಕಿನಲ್ಲಿ ಅಡೆತಡೆ ಹಾಗೂ ಸವಾಲುಗಳು ಇಲ್ಲದಿದ್ದರೆ ಮೇಲೆ ಬರಲು ಸಾಧ್ಯ ಇಲ್ಲ. ಸವಾಲುಗಳನ್ನು ಮೆಟ್ಟಿಲಾಗಿ ಮಾಡಿಕೊಂಡು ಮೇಲೆ ಬರಬಹುದು. ಇದರಲ್ಲಿ ನಾನು ನಂಬಿಕೆ ಇಟ್ಟು ಕೆಲಸ ಮಾಡುತ್ತಿದ್ದೇನೆ. ಹೊಗಳಿಕೆಗೆ ಉಬ್ಬುವುದಿಲ್ಲ, ತೆಗಳಿಕೆಗೆ ಕುಗ್ಗುವುದಿಲ್ಲ” ಎಂದು ಸಿಎಂ ಬೊಮ್ಮಾಯಿ ಹೇಳಿದರು

ಅವರು ಇಂದು ಹಾವೇರಿ ಜಿಲ್ಲಾಡಳಿತ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸಂತೆ ಮೈದಾನದಲ್ಲಿ ಆಯೋಜಿಸಿದ್ದ ಹಲವು ಕಾಮಗಾರಿಗಳ ಉದ್ಘಾಟನೆ, ಅರ್ಹರಿಗೆ ಹಕ್ಕುಪತ್ರ ವಿತರಣೆ, ಕಾಮಗಾರಿ ಶಂಕುಸ್ಥಾಪನೆ ಕಾರ್ಯ ನೆರವೇರಿಸಿ ಮಾತನಾಡಿದರು.

“ಜನಾಶೀರ್ವಾದ ಇರುವವರೆಗೂ ನಾನು ಈ ಕ್ಷೇತ್ರದ ಸೇವೆ ಮಾಡುತ್ತೇನೆ. ನನ್ನ ಕೊನೆ ಉಸಿರು ಇರುವವರೆಗೂ ನಿಮ್ಮ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇಂದು ಹಲವು ಯೋಜನೆಗಳಿಗೆ ಅಡಿಗಲ್ಲು ಹಾಕಿದ್ದೇನೆ. ಪ್ರತಿ ಮನೆಗೆ ಕುಡಿಯುವ ನೀರನ್ನು ಕೊಡುವ ಕಾರ್ಯಕ್ರಮ ಜಾರಿಗೆ ತರುತ್ತಿದ್ದೇವೆ. ನಮ್ಮ ರಾಜ್ಯದಲ್ಲಿ 72 ವರ್ಷದಲ್ಲಿ 25 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಇತ್ತು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಜಲಜೀವನ್ ಮಿಷನ್ ಅಡಿಯಲ್ಲಿ ಮೂರು ವರ್ಷದಲ್ಲಿ 40 ಲಕ್ಷ ಮನೆಗಳಿಗೆ ಕುಡಿಯುವ ನೀರನ್ನು ಕೊಟ್ಟಿದ್ದೇವೆ” ಎಂದು ಸಿಎಂ ಹೇಳಿದರು.

ಆಡಳಿತಕ್ಕೆ ಚುರುಕು ಮುಟ್ಟಿಸುತ್ತಿದ್ದೇವೆ
“ಈಗ ಜನತೆಗೆ ತುಂಗಭದ್ರಾ ನದಿ ನೀರನ್ನು ಕುಡಿಯಲು ತಲುಪಿಸುತ್ತಿದ್ದೇವೆ. ಇಷ್ಟು ದೂರದಿಂದ ಕುಡಿಯುವ ನೀರನ್ನು ತರಬಹುದು ಎಂದೂ ಯಾರೂ ಕಲ್ಪನೆ ಮಾಡಿಕೊಳ್ಳುವುದೂ ಕಷ್ಟ. ಅಸಾಧ್ಯವಾದ ಕೆಲಸವನ್ನು ಡಬಲ್ ಎಂಜಿನ್ ಸರ್ಕಾರ ಮಾಡಿದೆ. ಶಿಗ್ಗಾಂವ್ ನ ಜನರಿಗೆ ಅನುಕೂಲ ಆಗಲು ನಗರದ ಕೇಂದ್ರ ಸ್ಥಳದಲ್ಲಿ ಎಲ್ಲಾ ಇಲಾಖೆಗಳನ್ನು ಒಂದೇ ಕಟ್ಟಡದಲ್ಲಿ ತರಲು ಆಡಳಿತ ಕೇಂದ್ರಕ್ಕೆ ಡಾ. ಬಾಬಾ ಸಾಹೇಬ್ ಅವರ ಹೆಸರಲ್ಲಿ ಕಟ್ಟಡ ಉದ್ಘಾಟನೆ ಮಾಡಿದ್ದೇನೆ. ಜತೆಗೆ ಬಾಬಾ ಸಾಹೇಬ್ ಅವರ ಮೂರ್ತಿಯನ್ನು ಅನಾವರಣ ಮಾಡಿದ್ದೇನೆ” ಎಂದು ಬೊಮ್ಮಾಯಿ ಹೇಳಿದರು.

ಶಿಗ್ಗಾವಿಯಲ್ಲಿ ಕಾರ್ಮಿಕ ಭವನ ನಿರ್ಮಾಣ
ಶಿಗ್ಗಾವಿಯಲ್ಲಿ ಸುಸಜ್ಜಿತ ಆಡಿಟೋರಿಯಂ ಕೊರತೆ ಇತ್ತು. ಈ ಕೊರತೆಯನ್ನು ಸರಿದೂಗಿಸಲು ಸಹಾಯ ಮಾಡಿದ್ದು ಕಾರ್ಮಿಕ ಇಲಾಖೆ. ಅವರು ಕೊಟ್ಟ 5 ಕೋಟಿ ರೂ ಅನುದಾನದಲ್ಲಿ ಕಾರ್ಮಿಕ ಭವನ ಹಾಗೂ ಆಧುನಿಕ ಆಡಿಟೋರಿಯಂ ನಿರ್ಮಾಣ ಆಗಲಿದೆ. ಇದರಲ್ಲಿ ಇಲಾಖೆಯ ಕಾರ್ಯಕ್ರಮಗಳ ಜತೆಗೆ ಸಾರ್ವಜನಿಕರ ಕಾರ್ಯಕ್ರಮಗಳನ್ನೂ ಮಾಡಬಹುದು.

ಅಭಿವೃದ್ಧಿ ಚಕ್ರ ನಿರಂತರವಾಗಿರಬೇಕು
“ಜನರ ಸಂಕಷ್ಟಕ್ಕೆ ಧಾವಿಸುವುದು ಸರ್ಕಾರದ ಜೀವಂತಿಕೆಯ ಲಕ್ಷಣ. ಪ್ರವಾಹ ಬಂದಾಗ ಬೆಳೆ ನಾಶಕ್ಕೆ ಸೂಕ್ತ ಪರಿಹಾರವನ್ನು ದಾಖಲೆ ಸಮಯದಲ್ಲಿ 14 ಲಕ್ಷ ರೈತರಿಗೆ ಕೊಟ್ಟಿದ್ದೀವಿ. ನೆರೆ ಬಂದು ಮನೆ ಬಿದ್ದಾಗಲೂ ವಿಶೇಷ ಅನುದಾನ ಕೊಟ್ಟಿದ್ದೇವೆ. ಸ್ಲಂ ಬೋರ್ಡ್ ನಿಂದ ಶಿಗ್ಗಾಂವ್ ಕ್ಚೇತ್ರದ 32 ಕೊಳಚೆ ಪ್ರದೇಶಗಳಲ್ಲಿನ 4042 ಬಡಕುಟುಂಬಗಳಿಗೆ ಹಕ್ಕುಪತ್ರ ನೀಡುತ್ತಿದ್ದೇವೆ. ಇದರ ಜತೆಗೆ 2 ಸಾವಿರ ಮನೆಗಳಿಗೆ ಮಂಜೂರಾತಿ ನೀಡಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ 6 ಸಾವಿರಕ್ಕೂ ಹೆಚ್ಚು ಮನೆಗಳನ್ನು ಕಟ್ಟುತ್ತಿದ್ದು ಮುಗಿಯುವ ಹಂತಕ್ಕೆ ಬಂದಿದೆ” ಎಂದು ಬೊಮ್ಮಾಯಿ ಹೇಳಿದರು.

ಸರ್ಕಾರ ಸ್ಪಂದನಾಶೀಲವಾಗಿರಬೇಕು
ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ಮನುಷ್ಯನಿಗೆ, ದೀನ ದಲಿತನಿಗೆ, ಹೆಣ್ಣು ಮಕ್ಕಳಿಗೆ, ಹಿಂದುಳಿದ ವರ್ಗದವರಿಗೆ ತಲುಪಬೇಕು. ಪ್ರಜಾಪ್ರಭುತ್ವ ಯಶಸ್ವಿ ಆಗಬೇಕಾದರೆ ಜನರಿಗೆ ಮನ್ನಣೆ ಕೊಡುವ ಬದ್ಧತೆ ಇರುವವರಿಗೆ ನೀವು ಬೆಂಬಲ ಕೊಡಬೇಕು. ಶಿಗ್ಗಾಂವ್, ಸವಣೂರ ನನಗೆ ಅವಳಿ ಮಕ್ಕಳಿದ್ದಂತೆ. ಎರಡೂ ನಗರಗಳಿಗೆ 250 ಬೆಡ್ ಆಸ್ಪತ್ರೆ ಮಂಜೂರು ಮಾಡಿದ್ದೇನೆ. ಪಾಲಿಟೆಕ್ನಿಕ್ ಕಾಲೇಜನ್ನು ಎಂಜಿನಿಯರಿಂಗ್ ಕಾಲೇಜಾಗಿ ಪರಿವರ್ತನೆ ಮಾಡುತ್ತಿದ್ದೇವೆ. ಇಲ್ಲಿನ ಟೆಕ್ಸ್ ಟೈಲ್ ಪಾರ್ಕ್ ನಲ್ಲಿ ಮುಂದಿನ 6 ತಿಂಗಳ ಒಳಗೆ 10 ಸಾವಿರ ಉದ್ಯೊಗ ಸೃಷ್ಟಿ ಆಗಲಿದೆ ಎಂದು ಸಿಎಂ ಹೇಳಿದರು.

ಆರ್ಥಿಕವಾಗಿ ಬದಲಾವಣೆ ಆಗಲಿದೆ
“ಇವೆಲ್ಲ ಅಭಿವೃದ್ಧಿ ಕಾಮಗಾರಿಗಳಿಂದ ಕ್ಷೇತ್ರದಲ್ಲಿ ಆರ್ಥಿಕ ಬದಲಾವಣೆ ಆಗಲಿದೆ. ಇನ್ನಷ್ಟು ದೊಡ್ಡ ಯೋಜನೆಗಳನ್ನು ಕ್ಷೇತ್ರಕ್ಕೆ ತರಲಿದ್ದೇನೆ. ದೊಡ್ಡ ಕೈಗಾರಿಕೆಗಳನ್ನೂ ಇಲ್ಲಿಗೆ ತರುವ ಪ್ರಯತ್ನ ಆಗುತ್ತಿದೆ. ಈ ಕ್ಷೇತ್ರದ ಎಲ್ಲ ಜನರ ಭವಿಷ್ಯ ಉತ್ತಮಗೊಳಿಸುವ ಕೆಲಸವನ್ನು ನಾವು ಮಾಡಲಿದ್ದೇವೆ. ಸಾಮಾಜಿಕ ನ್ಯಾಯ ಭಾಷಣದಿಂದ ಸಿಗುವುದಿಲ್ಲ. ನಾವು ಮಾಡುವ ಕೆಲಸಗಳಿಂದ ಸಾಮಾಜಿನ ನ್ಯಾಯ ಕೊಡುವಂತಾಗಬೇಕು. ಲಂಬಾಣಿ ತಾಂಡಾಗಳಿಗೆ. ಗೊಲ್ಲರ ಹಟ್ಟಿಗಳಿಗೆ ಹಕ್ಕುಪತ್ರ ಕೊಡುವ ಕೆಲಸ ಮಾಡುತ್ತಿದ್ದೇವೆ. ಇದರಿಂದ ಪರಿವರ್ತನೆ ಆಗಲಿದೆ” ಎಂದರು.

ನಿಮ್ಮನ್ನು ಬಾವಿಯಲ್ಲಿಟ್ಟಿದ್ದರು
“ಹಿಂದಿನವರು ಇದೆಲ್ಲಾ ಕೆಲಸವನ್ನು ಮಾಡಿದ್ದರೆ ನಾವು ಮಾಡುವ ಅಗತ್ಯ ಬರುತ್ತಿರಲಿಲ್ಲ. ಹಿಂದಿನ ಸರ್ಕಾರ ನಿಮ್ಮನ್ನು ಬಾವಿಯಲ್ಲಿಟ್ಟಿದ್ದರು. 5 ವರ್ಷಕ್ಕೊಮ್ಮೆ ಮೇಲೆತ್ತಿ ಓಟ್ ಹಾಕಿಸಿಕೊಂಡು ಮತ್ತೆ ಬಾವಿಗೆ ಹಾಕುತ್ತಿದ್ದರು. ಎಸ್ಸಿ ಎಸ್ಟಿಗೆ ಮೀಸಲಾತಿ ವಿಚಾರದಲ್ಲಿ, ಕೃಷ್ಣಾ ಮೇಲ್ದಂಡೆ ವಿಚಾರದಲ್ಲಿಯೂ ಜೈಲಿಗೆ ಹೋಗಬೇಕಾಗುತ್ತೆ ಎಂದು ನನ್ನನ್ನು ಹೆದರಿಸಿದರು. ಆದರೆ ಅದಕ್ಕೆ ನಾನು ಹೆದರಿಕೊಳ್ಳಲಿಲ್ಲ. ಜೈಲಿಗಲ್ಲ, ಗಲ್ಲಿಗೆ ಬೇಕಾದರೂ ಹೋಗುತ್ತೇನೆ ಎಂದು ಕೆಲಸ ಮಾಡಿದ್ದೇನೆ. ನಿಮ್ಮ ಮತಕ್ಕೆ ಗೌರವ ತರುವ ರೀತಿಯಲ್ಲಿ ಕೆಲಸ ಮಾಡಿದ್ದೇನೆ. ಅದಕ್ಕೆ ಎಂದೂ ಚ್ಯುತಿ ಬರದಂತೆ ನೋಡಿಕೊಂಡಿದ್ದೇನೆ” ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

https://pragati.taskdun.com/dk-to-belgaum-tomorrow-all-day-meeting-to-delhi-at-night/
https://pragati.taskdun.com/this-young-mans-stomach-had-56-blades/
https://pragati.taskdun.com/an-unknown-vehicle-killed-the-biker/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button