
ಪ್ರಗತಿವಾಹಿನಿ ಸುದ್ದಿ: ಅಡ್ಯಾರು ಬಳಿಯ ಐಸ್ ಕ್ರೀಂ ಘಟಕದಲ್ಲಿ ಎಳನೀರು ಸೇವಿಸಿದ್ದ 10ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳೂರು ಹೊರವಲಯದಲ್ಲಿ ನಡೆದಿದೆ.
ಅಡ್ಯಾರ್, ಕಣ್ಣೂರು ಮತ್ತು ತುಂಬೆ ನಿವಾಸಿಗಳು ಅಡ್ಯಾರು ಐಸ್ ಕ್ರೀಂ ಘಟಕದ ಬಳಿ ಎಳ್ ನೀರು ಖರಿದಿಸಿ ಸೇವಿಸಿದ್ದರು. ಮರುದಿನ ಎಲ್ಲರೂ ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎಳನೀರು ಕುಡಿದ ಬಳಿಕ ವಾಂತಿ-ಭೇದಿ ಆರಂಭವಾಗಿದೆ. ಐಸ್ ಕ್ರೀಂ ಘಟಕದಲ್ಲಿ ಪ್ರತಿ ಲೀಟರ್ ಗೆ 40 ರೂನಂತೆ ಎಳನೀರು ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಅಡ್ಯಾರು ಸುತ್ತಮುತ್ತಲಿನ ಹಲವರು ಎಳನೀರು ಖರೀದಿಸಿದ್ದಾರೆ. ಅಸ್ವಸ್ಥರಲ್ಲಿ ಹಲವರನ್ನು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕೆಲವರನ್ನು ತುಂಬೆ ಫಾದರ್ ಮುಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಬೆನ್ನಲ್ಲೇ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಹಾಗೂ ಆಹಾರ ಭದ್ರತಾ ಅಧಿಕಾರಿಗಳು ಐಸ್ ಕ್ರೀಂ ಘಟಕಕ್ಕೆ ಭೇಟಿ ನೀಡಿದ್ದು, ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿಗಾಗಿ ಕಾಯಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ