ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರಿಗೆ ನಾರಿ ಶಕ್ತಿ ಬಗ್ಗೆ ಗೌರವವಿದ್ದರೆ ಸಂತ್ರಸ್ತೆಯರಿಗೆ ಧೈರ್ಯ ತುಂಬಲಿ: ಡಿಸಿಎಂ ಡಿ.ಕೆ. ಶಿವಕುಮಾರ್
ಪ್ರಗತಿವಾಹಿನಿ ಸುದ್ದಿ, ಯಾದಗಿರಿ : “ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರು ನಾರಿ ಶಕ್ತಿ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ನಿಜಕ್ಕೂ ಮಹಿಳೆಯರ ಮೇಲೆ ಗೌರವವಿದ್ದರೆ ಮೊದಲು ಸಂತ್ರಸ್ತರ ಮನೆಗೆ ಹೋಗಿ ಆ ಮಹಿಳೆಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಯಾದಗಿರಿಯ ದೇವತ್ಕಲ್ ನ ಹೆಲಿಪ್ಯಾಡ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯಿಸಿದರು.
ಪೆನ್ ಡ್ರೈವ್ ಪ್ರಕರಣದ ಹಿಂದೆ ಮಹಾನಾಯಕರ ಕೈವಾಡವಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ ಅವರು ಉತ್ತರಿಸಿದ್ದು ಹೀಗೆ;
“ದೇವರಾಜೇ ಗೌಡ ಈ ಪೆನ್ ಡ್ರೈವ್ ವಿಚಾರವಾಗಿ ಯಾರನ್ನೆಲ್ಲಾ ಭೇಟಿ ಮಾಡಿದ್ದರು ಎಂದು ನಮ್ಮ ವಕ್ತಾರರು ವಿವರಿಸಿದ್ದಾರೆ. ಈ ವಿಚಾರವಾಗಿ ದೇವರಾಜೇ ಗೌಡ, ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದರು, ಅಲ್ಲದೇ ಬಿಜೆಪಿ ನಾಯಕರಿಗೆ ಈ ವಿಚಾರ ತಿಳಿಸಿದ್ದರು. ನಾವು ಈ ಪೆನ್ ಡ್ರೈವ್ ಬಿಡುಗಡೆ ಮಾಡುವುದಾಗಿದ್ದರೆ ಬೇರೆ ರೀತಿಯೇ ಮಾಡಬಹುದಾಗಿತ್ತು. ನಮಗೆ ಅದರ ಅಗತ್ಯವಿಲ್ಲ. ಈ ವಿಚಾರಗಳ ಬಗ್ಗೆ ನಾನು ಸುಮ್ಮನೆ ಕೂರುವುದಿಲ್ಲ, ಈ ವಿಚಾರವಾಗಿ ಮುಂದೆ ಮಾತನಾಡುತ್ತೇನೆ” ಎಂದರು.
ಸೂರಜ್ ರೇವಣ್ಣ ನಿಮ್ಮನ್ನು ಭೇಟಿ ಮಾಡಿದ್ದರೇ ಎಂದು ಕೇಳಿದಾಗ, “ಹೌದು, ಸೂರಜ್ ರೇವಣ್ಣ ನಮ್ಮನ್ನು ಭೇಟಿ ಮಾಡಿದ್ದರು. ಅವರು ಯಾವ ಕಾರಣಕ್ಕೆ ಭೇಟಿಯಾಗಿದ್ದರು ಎಂದು ಅವರನ್ನೇ ಕೇಳಿ” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ