ಉಪಮುಖ್ಯಮಂತ್ರಿ ಶಬ್ದ ಕೇಳಿದರೆ ಬೆಂಗಳೂರಿನ ಜನ ಬೆಚ್ಚಿ ಬೀಳುತ್ತಾರೆ!

ಉಪಮುಖ್ಯಮಂತ್ರಿ ಶಬ್ದ ಕೇಳಿದರೆ ಬೆಂಗಳೂರಿನ ಜನ ಬೆಚ್ಚಿ ಬೀಳುತ್ತಾರೆ!

 

ಎಂ.ಕೆ.ಹೆಗಡೆ

ರಾಜ್ಯದಲ್ಲಿ ಈಗ ಎಲ್ಲಿ ನೋಡಿದರೂ ಉಪಮುಖ್ಯಮಂತ್ರಿ ಹುದ್ದೆಯದ್ದೇ ಸುದ್ದಿ. ಮೊದಲ ಬಾರಿಗೆ ಕರ್ನಾಟಕದಲ್ಲಿ ಮೂವರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿರುವುದು ಒಂದು ಕಡೆಯಾದರೆ, ಮೂವರಿಗೆ ಹಿಂಬಡ್ತಿ ನೀಡಿ ಸಚಿವರನ್ನಾಗಿಸಿರುವುದು  ಸುದ್ದಿಯ ಮೂಲ.

ಸಾಮಾನ್ಯವಾಗಿ ಮುಖ್ಯಮಂತ್ರಿ ಹುದ್ದೆಗೇರುವುದಕ್ಕೇ ಪೈಪೋಟಿ ಇದ್ದಾಗ ಒಬ್ಬರಿಗೆ ಸಮಾಧಾನಪಡಿಸಲು ಉಪಮುಖ್ಯಮಂತ್ರಿ ಸ್ಥಾನ ನೀಡುವುದು, ಎರಡು ಪಕ್ಷಗಳು ಸೇರಿ ಅಧಿಕಾರ ನಿರ್ವಹಿಸುವಾಗ ಒಂದು ಪಕ್ಷಕ್ಕೆ ಮುಖ್ಯಮಂತ್ರಿ, ಮತ್ತೊಂದು ಪಕ್ಷಕ್ಕೆ ಉಪಮುಖ್ಯಮಂತ್ರಿ ಹುದ್ದೆ ನೀಡುವುದು ನಡೆದು ಬಂದ ಪದ್ದತಿ.

ಆದರೆ ಈ ಬಾರಿ ಅದ್ಯಾವುದೂ ಇಲ್ಲದಿದ್ದರೂ ಮೂವರನ್ನು ಉಪಮುಖ್ಯಮಂತ್ರಿ ಸ್ಥಾನದಲ್ಲಿ ಕೂಡ್ರಿಸಲಾಗಿದೆ. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರನ್ನು ಕಟ್ಟಿ ಹಾಕುವುದಕ್ಕಾಗಿಯೇ ಮೂವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಆಂದ್ರದಲ್ಲಿ 5 ಉಪಮುಖ್ಯಮಂತ್ರಿ

2006ರಲ್ಲಿ ಜೆಡಿಎಸ್ -ಬಿಜೆಪಿ ಸಮ್ಮಿಶ್ರ ಸರಕಾರ ಮಾಡಿದಾಗ ಜೆಡಿಎಸ್ ನ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ, ಬಿಜೆಪಿಯ ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದರು. 2008ರಲ್ಲಿ ಬಿಜೆಪಿ ಸರಕಾರ ಬಂದಾಗ ಆರ್.ಅಶೋಕ ಮತ್ತು ಕೆ.ಎಸ್.ಈಶ್ವರಪ್ಪ ಅವರನ್ನು ಉಪಮುಖ್ಯಮಂತ್ರಿ ಮಾಡಲಾಗಿತ್ತು. ನೆರೆಯ ಆಂದ್ರಪ್ರದೇಶದಲ್ಲಿ ಪ್ರಸ್ತುತ 5 ಜನ ಉಪಮುಖ್ಯಮಂತ್ರಿಗಳಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ ಮೂವರು ಉಪಮುಖ್ಯಮಂತ್ರಿಗಳಿದ್ದಾರೆ. ಗೋವಿಂದ ಕಾರಜೋಳ, ಅಶ್ವತ್ಥ ನಾರಾಯಣ ಹಾಗೂ ಲಕ್ಷ್ಮಣ ಸವದಿ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲಾಗಿದೆ. ಹಾಗೆ ನೋಡಿದರೆ ಇವರ್ಯಾರೂ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನೀಡಿದವರಲ್ಲ. ಉಪಮುಖ್ಯಮಂತ್ರಿ ಸ್ಥಾನ ನೀಡದಿದ್ದರೂ ಖ್ಯಾತೆ ತೆಗೆಯುತ್ತಿರಲಿಲ್ಲ. ಈಗ ಉಪಮುಖ್ಯಮಂತ್ರಿಗಳಾದವರಿಗಿಂತಲೂ ಅನೇಕ ಹಿರಿಯರು ಬಿಜೆಪಿಯಲ್ಲಿದ್ದಾರೆ.

ಬೆಂಗಳೂರಿನ ಟ್ರಾಫಿಕ್

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಧ್ಯ ಸಂಪುಟದಲ್ಲಿ ಸಾಮಾನ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾಜಿ ಉಪಮುಖ್ಯಮಂತ್ರಿಗಳಾದ ಆರ್.ಅಶೋಕ, ಕೆ.ಎಸ್.ಈಶ್ವರಪ್ಪ ಸಚಿವ ಸಂಪುಟದಲ್ಲಿದ್ದಾರೆ. ಈ ಮೂವರಿಗೂ ಉಪಮುಖ್ಯಮಂತ್ರಿ ಸ್ಥಾನ ನೀಡಲಿಲ್ಲ. ಇವರೆಲ್ಲರ ಜೊತೆಗೆ ಶ್ರೀರಾಮುಲು ಉಪಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಆದರೆ ಇವರನ್ನೆಲ್ಲ ಬಿಟ್ಟು ಬೇರೆ ಮೂವರನ್ನು ಉಪಮುಖ್ಯಮಂತ್ರಿಗಳನ್ನಾಗಿ ಮಾಡಿರುವುದರ ಹಿಂದೆ ಬಿಜೆಪಿ ಲೆಕ್ಕಾಚಾರ ಬೇರೆ ಇರಬಹುದು.

ಸಾಂವಿಧಾನಿಕ ಮಹತ್ವ

ಇಷ್ಟೆಲ್ಲ ಸುದ್ದಿಯಾಗಿರುವ ಉಪಮುಖ್ಯಮಂತ್ರಿ ಹುದ್ದೆಯ ಸಾಂವಿಧಾನಿಕ ಮಹತ್ವ ನೋಡಲು ಹೋದರೆ ಅಕ್ಷರಶಃ ಜೀರೋ. ಸಂವಿಧಾನದ ಪ್ರಕಾರ ಉಪಮುಖ್ಯಮಂತ್ರಿ ಹುದ್ದೆಗೆ ಯಾವುದೇ ಮಾನ್ಯತೆ ಇಲ್ಲ. ಮುಖ್ಯಮಂತ್ರಿ ಮತ್ತು ಮಂತ್ರಿ ಹುದ್ದೆಗಳಿಗೆ ಮಾತ್ರ ಸಂವಿಧಾನದಲ್ಲಿ ಮಾನ್ಯತೆ ಇದೆ.

ಉಪಮುಖ್ಯಮಂತ್ರಿಗಳಿಗೆ ಯಾವುದೇ ವಿಶೇಷ ಸ್ಥಾನಮಾನ, ಗೌರವ ಇಲ್ಲ. ಮಂತ್ರಿಗಳಿಗೆ ಇರುವ ಸೌಲಭ್ಯಗಳೇ ಉಪಮುಖ್ಯಮಂತ್ರಿಗಳಿಗೂ ಇರುತ್ತದೆ. ಆದರೆ ಈ ಹುದ್ದೆ ಮುಖ್ಯಮಂತ್ರಿ ಹುದ್ದೆಯ ನಂತರದ ಹುದ್ದೆ ಎಂದೇ ಪರಿಗಣಿಸಲಾಗುತ್ತದೆ.

ಬೆಂಗಳೂರಿಗರಿಗೆ ಆತಂಕ

ಬೆಂಗಳೂರಿನ ಟ್ರಾಫಿಕ್

ಉಪಮುಖ್ಯಮಂತ್ರಿ ಹುದ್ದೆ ಹೆಚ್ಚಾದಷ್ಟೂ ಬೆಂಗಳೂರು ಜನರ ಆತಂಕ ಮಾತ್ರ ಹೆಚ್ಚಾಗುತ್ತದೆ. ಇದಕ್ಕೆ ಕಾರಣ ಟ್ರಾಫಿಕ್ ದಟ್ಟಣೆ. ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಜೀರೋ ಟ್ರಾಫಿಕ್ ಸೌಲಭ್ಯ ನೀಡಲಾಗಿದೆ. ಇತರ ಯಾವುದೇ ಮಂತ್ರಿಗಳಿಗೆ ಜೀರೋ ಟ್ರಾಫಿಕ್ ಸೌಲಭ್ಯಗಳಿಲ್ಲ.

ಆದರೆ ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದಾಗ ಜೀರೋ ಸೌಲಭ್ಯ ಬಳಸಿಕೊಂಡಿದ್ದರು. ಸಚಿವಸಂಪುಟ ಸಭೆಯಲ್ಲೇ ಈ ಬಗ್ಗೆ ನಿರ್ಣಯ ಅಂಗೀಕರಿಸಲಾಗಿತ್ತು. ಜೀರೋ ಟ್ರಾಫಿಕ್ ಬಳಸಿಕೊಳ್ಳುವುದು ಉಪಮುಖ್ಯಮಂತ್ರಿಯ ವಿವೇಚನೆಗೆ ಬಿಟ್ಟಿದ್ದು ಎಂದು ಉಲ್ಲೇಖಿಸಲಾಗಿತ್ತು.

ಕಳೆದ ಸಮ್ಮಿಶ್ರ ಸರಕಾರದಲ್ಲಿ ಡಾ.ಜಿ.ಪರಮೇಶ್ವರ ಉಪಮುಖ್ಯಮಂತ್ರಿಯಾಗಿದ್ದರು. ಅವರು ಹೋದಲ್ಲಿ ಬಂದಲ್ಲಿ ಜೀರೋ ಟ್ರಾಫಿಕ್ ಬಳಸಿಕೊಂಡು ವಿವಾದಕ್ಕೋಳಗಾಗಿದ್ದರು. ಅವರ ಓಡಾಟಕ್ಕೆ ಬೆಂಗಳೂರು-ತುಮಕೂರಿನ ಜನ ಹೈರಾಣಾಗಿದ್ದರು. ಮೊದಲೇ ಟ್ರಾಫಿಕ್ ಸಮಸ್ಯೆಯಿಂದ ತತ್ತರಿಸಿ ಹೋಗಿರುವ ಜನ ಪರಮೇಶ್ವರ ಹೊರಟರೆಂದರೆ ಹಿಡಿಶಾಪ ಹಾಕುತ್ತಿದ್ದರು.

ಹಾಗಾಗಿಯೇ ಉಪಮುಖ್ಯಮಂತ್ರಿ ಎನ್ನುವ ಹೆಸರು ಕೇಳಿದರೇ ಬೆಂಗಳೂರಿನ ಜನ ಬೆಚ್ಚಿ ಬೀಳುತ್ತಾರೆ. ಕಳೆದ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಒಬ್ಬ ಉಪಮುಖ್ಯಮಂತ್ರಿ ಇದ್ದಾಗಲೇ ಹೈರಾಣಾಗಿದ್ದ ಜನ ಈಗ ಮೂವರು ಉಪಮುಖ್ಯಮಂತ್ರಿಯಾಗಿರುವುದನ್ನು ಕೇಳಿ ಕಂಗಾಲಾಗಿದ್ದಾರೆ.

ಇನ್ನು ಮುಂದೆ ರಸ್ತೆಯ ಮೇಲೆಯೇ ಜೀವನ ಕಳೆಯಬೇಕಾಗುತ್ತದೆಯೋ ಎನ್ನುವ ಆತಂಕಕ್ಕೆ ಒಳಗಾಗಿದ್ದಾರೆ. ಈಗಿನ ಉಪಮುಖ್ಯಮಂತ್ರಿಗಳು ಜೀರೋ ಟ್ರಾಫಿಕ್ ಬಳಸುತ್ತಾರೋ… ಸಾಮಾನ್ಯ ಮಂತ್ರಿಗಳಂತೆ ಓಡಾಡುತ್ತಾರೋ ಕಾದು ನೋಡಬೇಕಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button