Latest

ಭಾವಗಳ ರೆಕ್ಕೆ ಬಿಚ್ಚಿದರೆ ಎಷ್ಟೊಂದು ಸೊಗಸು ಈ ಬದುಕು?


 ಜಯಶ್ರೀ ಜೆ. ಅಬ್ಬಿಗೇರಿ
ಒಮ್ಮೆ ದೊಡ್ಡ ಯಾತ್ರೆಗೆ ಜನರು ಗುಂಪುಗೂಡಿ ಪಾದಯಾತ್ರೆಯಲ್ಲಿ ಸಾಗುತ್ತಿದ್ದರು. ವೃದ್ಧರು, ಮಕ್ಕಳು, ಯುವಕರು, ಹೆಣ್ಣುಮಕ್ಕಳು, ಹೀಗೆ ಎಲ್ಲ ವಯೋಮಾನದವರು ದೇವರ ಹೆಸರು ಹೇಳುತ್ತ ಭಕ್ತಿಯಿಂದ ಮುನ್ನಡೆಯುತ್ತಿದ್ದರು. ಅದರಲ್ಲಿ ಒಬ್ಬ ವಯಸ್ಸಾದ ಯೋಗಿಯೂ ಇದ್ದ. ದೊಡ್ಡ ದಂಡಿನಲ್ಲಿ ಹನ್ನೆರಡು ಹದಿಮೂರರ ಪೋರಿಯೊಬ್ಬಳು ಏದುಸಿರು ಬಿಡುತ್ತ ಬೆವರು ಒರೆಸಿಕೊಳ್ಳುತ್ತ ಸಾಗುತ್ತಿದ್ದಳು. ಅವಳ ಬೆನ್ನಿಗೆ ಏಳೆಂಟು ವರ್ಷದ ಅಂಗವಿಕಲನೊಬ್ಬನ್ನನ್ನು ಸೀರೆಯಿಂದ ಕಟ್ಟಿಕೊಂಡಿದ್ದಳು. ದೇವರ ದರ್ಶನ ಪಡೆಯಬೇಕೆಂದು ಓಡುತ್ತಿದ್ದಳು. ಅವಳನ್ನು ನೋಡಿದ ಯೋಗಿ ಮಗಳೆ, ನೀನು ಬಹಳ ದಣಿದಿರಬೇಕು. ದೊಡ್ಡ ಭಾರವನ್ನು ಹೊತ್ತು ಸಾಗುತ್ತಿರುವೆ. ನಡುನಡುವೆ ಸ್ವಲ್ಪ ವಿಶ್ರಾಂತಿ ಪಡೆಯುತ್ತ ಮುನ್ನಡೆಯುವುದು ಒಳ್ಳೆಯದು ಎಂದನು. ಅದನ್ನು ಕೇಳಿದ ಹದಿಮೂರರ ಪೋರಿಯ ಉತ್ತರ ಅಚ್ಚರಿ ತರುವಂತಹದು. ’ಗುರೂಜಿ ತಾವು ಭಾರವನ್ನು ದೊಡ್ಡ ಜೋಳಿಗೆಯಲ್ಲಿ ಹೊತ್ತು ನಡೆಯುತ್ತಿದ್ದೀರಿ.. ನನ್ನ ಬೆನ್ನಿಗಂಟಿರುವುದು ನನ್ನ ಭಾರವಲ್ಲ. ಅವನು ನನ್ನ ತಮ್ಮ. ಅವನೆಂದೂ ನನಗೆ ಭಾರವಾಗುವುದಿಲ್ಲ.’
ಎಷ್ಟು ನಿಜವಲ್ಲವೇ? ಮಕ್ಕಳು ಮೊಮ್ಮಕ್ಕಳು ಸಂಬಂಧಗಳ ನಿಭಾವಣೆಯನ್ನು ಹೊರೆ ಅಂದುಕೊಂಡರೆ ಅದು ದೊಡ್ಡ ಭಾರವೆನಿಸುವುದು. ಕರ್ತವ್ಯ ಎಂದುಕೊಂಡರೆ ಪ್ರೀತಿ ಎನಿಸುವುದು. ಭಾರವೆನಿಸಲಾರದು. ನಾವು ಕನಸಿನಲ್ಲಿ ಕಂಡ ಸುಂದರವಾದ ಎತ್ತರದ ಬೆಟ್ಟವನ್ನೇರಿದರೂ ದಣಿವೆನಿಸುವುದಿಲ್ಲ. ಆದರೆ ನಮಗೆ ಇಷ್ಟವಿಲ್ಲದ ಚಿಕ್ಕ ಕೆಲಸ ಮಾಡುವುದು ಭಾರವೆನಿಸುವುದು ದಣಿವು ತರಿಸುವುದು. ಹಕ್ಕಿ ಪಕ್ಕಿಗಳೊಂದಿಗೆ ಕಣ್ಮನ ಸೆಳೆಯುವ ಪ್ರಕೃತಿ ಸಿರಿಯಲ್ಲಿ ವಿಹರಿಸಿ ಹಾಡಿ ನಲಿಯುವುದು ಎಂಥ ಕಲ್ಲು ಹೃದಯದವರಿಗೂ ಸಂತಸವನ್ನು ತಂದು ಸುರಿಯುವುದು. ಸೋಜಿಗವೆನಿಸಿದರೂ ಸತ್ಯ! ನಮ್ಮ ಬದುಕು ಪ್ರವಾಹದಂತೆ ಸದಾ ಹರಿಯುತ್ತಲೇ ಇರುತ್ತದೆ. ಹರಿದು ಹೋದುದು ಎಂದೂ ಮರಳಿ ಬಾರದು. ನಿರಂತರ ಹರಿಯುವ ಈ ಜೀವನದಿಯಲ್ಲಿ ದಿನ ನಿತ್ಯ ಭಿನ್ನ ವಿಭಿನ್ನ ಸಮಯ ಸಂದರ್ಭ ಸನ್ನಿವೇಶಗಳು ನಮ್ಮೆದುರಿಗೆ ಬಂದು ನಿಲ್ಲುತ್ತವೆ. ಅವುಗಳನ್ನು ಪ್ರೀತಿಸುತ್ತ ಸೋತರೂ ಮಂದಹಾಸದ ನಗು ಅರಳುತ್ತದೆ. ಇದರ ತಾತ್ಪರ್ಯವಿಷ್ಟೆ, ಪರಿಸ್ಥಿತಿ ಎಲ್ಲರಿಗೂ ಒಂದೇ ಆಗಿರುತ್ತದೆ. ಆದರೆ ಎದುರಿಸುವ ಮನಸ್ಥಿತಿಯಲ್ಲಿ ವ್ಯತ್ಯಾಸ ಇರುತ್ತದೆ. ಅಷ್ಟೇ ಅಲ್ಲ ಮನಸ್ಥಿತಿಯೇ ಇಲ್ಲಿ ಮುಖ್ಯವಾಗುತ್ತದೆ. ಪರಿಸ್ಥಿತಿ ಎಂಥ ಪ್ರತಿಕೂಲ ಸ್ಥಿತಿಯಲ್ಲಿದ್ದರೂ ನೋಡುವ ದೃಷ್ಟಿಕೋನ ಸಕಾರಾತ್ಮಕವಾಗಿದ್ದರೆ ಮನಸ್ಸಿನ ಶಕ್ತಿ ಇಮ್ಮಡಿಸುವುದು.
ಹೇಳುವ-ಕೇಳುವ, ನೋಡುವ-ಮಾಡುವ ಎಲ್ಲ ಕಾರ್ಯಗಳಲ್ಲಿ ’ನಾನೇ ಮಾಡಬೇಕಾದ ಪರಮ ಕರ್ತವ್ಯದಿಂದ ಇದನ್ನು ಪ್ರೀತಿಯಿಂದ ಚಿತ್ತಾರ ಬಿಡಿಸಿದಂತೆ ಮಾಡಬೇಕು. ಸುಂದರ ಸಾಲುಗಳಲ್ಲಿ ಕವಿತೆ ಕಟ್ಟಿದಂತೆ ಕಟ್ಟಬೇಕು. ಎಂಬ ಭಾವ ಬೆರೆತರೆ ಆ ಕ್ರಿಯೆಗಳಲ್ಲಿ ಒಂದು ತೆರನಾದ ಮಾಧುರ್ಯ ಉಂಟಾಗುತ್ತದೆ. ಇದರಿಂದ ತಲೆ ಮೇಲಿನ ಹೊರೆ ಹೆಗಲಿಗಿಳಿಯುತ್ತದೆ. ಹೆಗಲಿನಿಂದ ಎದೆಯೊಳಗಿನ ಒಲವ ಹನಿಯಾಗುತ್ತದೆ. ಕರ್ತವ್ಯಗಳು ಜಡ ಕ್ರಿಯೆಗಳೆನಿಸದೇ ಸಂತಸದ ಸುಮಧುರ ಕ್ಷಣಗಳ ಭಾವಪೂರ್ಣ ಕಾರ್ಯವೆನಿಸುತ್ತವೆ. ಇಡೀ ವಯಸ್ಸು ಮಕ್ಕಳನ್ನು ಸಾಕುವುದೇ ಆಯಿತು. ವಯಸ್ಸಾದ ತಂದೆ ತಾಯಿಗಳನ್ನು ನೋಡಿಕೊಳ್ಳುವುದೇ ಆಯಿತು ಎಂದು ಗೊಣುಗುವುದನ್ನು ಬಿಡಬೇಕು. ಗೊಣುಗುವಿಕೆ ಬದುಕನ್ನು ಭಾರವಾಗಿಸುತ್ತದೆ. ಜೀವನ ಪೂರ್ತಿ ಇವರೇ ನನ್ನವರು ಒಲವಿನ ಹನಿ ಹನಿ ಇಬ್ಬನಿ ಸುರಿಯುವವರು ಎಂದು ಕೊಂಡರೆ ಅವರೊಂದಿಗೆ ಸಿಗುವ ಖುಷಿಯನ್ನು ಹೇಳಲು ಪದಪುಂಜಗಳು ಸಾಲವು. ಅಷ್ಟೇ ಅಲ್ಲ ಮನದಲ್ಲಿ ಪ್ರೀತಿಯ ತರಂಗಗಳನ್ನು ಎಬ್ಬಿಸುತ್ತದೆ.

ಜವಾಬ್ದಾರಿ ಅನ್ನೋ ಪದ ಕೇಳಿದರೆ ಸಾಕು ದೂರ ಸರಿಯುವ ಮನಸ್ಸು. ಇದ್ದುದನ್ನು ಬಿಟ್ಟು ಹೊಸದನ್ನು ಮಾಡಲು ಬೇಡ ಎನ್ನುವ ಮನಸ್ಥಿತಿ ನೋಡ ನೋಡುತ್ತಿದ್ದಂತೆ ಕೆಳಕ್ಕೆ ತಳ್ಳುತ್ತದೆ. ಬದುಕಿನಲ್ಲಿ ಗೆಲುವಿನ ರುಚಿ ಕಂಡವರೆಲ್ಲ ಜವಾಬ್ದಾರಿಯ ಶಕ್ತಿಯನ್ನು ಅರಿತವರು. ಜವಾಬ್ದಾರಿ ಕೊಡುವಂತಹದಲ್ಲ ನಾವೇ ಪಡೆದುಕೊಳ್ಳುವಂತಹದು. ನಾವು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹಿಂಜರಿಯುತ್ತಿದ್ದರೆ ಇತರರಿಗೆ ಕೊಡಲು ಸಾಧ್ಯವಿಲ್ಲ.
ನಾವಿಂದು ಅತಿ ವೇಗದಲ್ಲಿ ಮಾಹಿತಿ ಮತ್ತು ಜ್ಞಾನ ಸಿಗುವ ಕಾಲದಲ್ಲಿ ಬದುಕುತ್ತಿದ್ದೇವೆ. ಮಾಹಿತಿಯನ್ನು ಜ್ಞಾನವನ್ನು ಕೇವಲ ಅಂಕಗಳಿಕೆಗೆ, ಇಲ್ಲವೇ ಸಂಬಂಧಿಸಿದ ಕಛೇರಿ ಕೆಲಸಗಳಿಗೆ ಬಳಸದೇ ಅದರಲ್ಲಿರುವ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಆನಂದಪೂರ್ಣವಾಗುತ್ತದೆ. ಬದುಕು ತಾಪತ್ರಯ ಜಂಜಡಗಳಿಂದ ತುಂಬಿ ಹೋಗಿ ತಲೆ ಗಿರ್ ಎನ್ನುತ್ತದೆ ಎನ್ನುವ ನಕಾರಾತ್ಮಕ ಬಲೆಯಿಂದ ಹೊರ ಬರಬೇಕಿದೆ. ಜೀವನದಲ್ಲಿ ಸಾವಿರ ಸಾವಿರ ಕಷ್ಟಗಳು ಇನ್ನಿಲ್ಲದಂತೆ ಜೀವ ತಿನ್ನುತ್ತವೆ. ಮೇಲೇಳದಂತಹ ಏಟು ಕೊಟ್ಟು ಮುಸಿ ಮುಸಿ ನಗುತ್ತವೆ. ಅಂತ  ಏನೇನೋ ಬದುಕಿನ ಪ್ರತಿ ಆರೋಪ ಮಾಡುತ್ತೇವೆ. ಆರೋಪವನ್ನು ಬಿಟ್ಟು ಸ್ವಲ್ಪ ಗತ್ತು ಜೊತೆಗಿತ್ತುಕೊಂಡು ಜಗತ್ತಿನ ಜೊತೆ ಕಾಲು ಹಾಕಿದರೆ ನಡೆವ ಹಾದಿ ಸುಖಮಯ ಖಂಡಿತ. ಮಾನವ ಮೂಲತಃ ಭಾವ ಜೀವಿ ಆತ ತನ್ನ ಭಾವಗಳ ರೆಕ್ಕೆ ಬಿಚ್ಚಿದರೆ ಭಾರವಾದ ಬದುಕು ಹಗುರವೆನಿಸುತ್ತದೆ. ರಾತ್ರಿ ಕಳೆದು ಬೆಳಕು ಹರಿದಂತೆ ಬದುಕಿನ ಸೊಗಸು ಹೋದಲ್ಲೆಲ್ಲ ಸ್ವಾಗತದ ದೊಡ್ಡ ನಗು ಚೆಲ್ಲುತ್ತದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button