*ರಾಜ್ಯ ರಾಜಧಾನಿಯಲ್ಲಿಅಕ್ರಮ ಗನ್ ಡೀಲಿಂಗ್:* *7 ಆರೋಪಿಗಳ ಬಂಧನ, 5 ಪಿಸ್ತೂಲ್ ವಶ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿಯಲ್ಲಿ ಅಕ್ರಮ ಗನ್ ಡೀಲಿಂಗ್ ನಡೆಸುತ್ತಿದ್ದ ಆರೋಪದ ಮೇಲೆ ಆನೇಕಲ್ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ. ಇನ್ಸ್ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿತರಾದವರ ಪೈಕಿ 6 ಮಂದಿ ರೌಡಿ ಶೀಟರ್ಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಪ್ರದೀಪ್ ರಮೇಶ್, ಮನೋಜ್ ಅಲಿಯಾಸ್ ಜಾಕಿ, ರಿಜ್ವಾನ್ ಪಾಷ ಅಲಿಯಾಸ್ ಕುಳ್ಳ ರಿಜ್ವಾನ್, ನಂಜಪ್ಪ ಅಲಿಯಾಸ್ ಡೆಡ್ಲಿ ನಂಜ, ವೆಂಕಟರಾಜು ಅಲಿಯಾಸ್ ತುಕಡಿ, ಗೋಪಿ ಅಲಿಯಾಸ್ ಸುಣವಾರ ಗೋಪಿ ಹಾಗೂ ಶಿವರಾಜ್ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 5 ಕಂಟ್ರಿ ಮೇಡ್ ಪಿಸ್ತೂಲ್ಗಳು ಹಾಗೂ 10 ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಹಿಂದೆ ಪ್ರಭಾವಿ ರಾಜಕಾರಣಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ಸಂಪರ್ಕವಿರುವ ಶಂಕೆಯೂ ವ್ಯಕ್ತವಾಗಿದ್ದು, ಈ ಆಯಾಮದಲ್ಲೂ ತನಿಖೆ ಮುಂದುವರಿದಿದೆ.
ಕಳೆದ ತಿಂಗಳು 14ರಂದು ಆನೇಕಲ್ ಸಮೀಪದ ಹಾಲ್ದೇನಹಳ್ಳಿ ರೈಲ್ವೆ ಹಳಿ ಬಳಿ ಗಸ್ತಿನಲ್ಲಿದ್ದ ಪೊಲೀಸರಿಗೆ ಬ್ಯಾಗ್ ಹಿಡಿದು ಅನುಮಾನಾಸ್ಪದವಾಗಿ ನಿಂತಿದ್ದ ಕೆಲವರು ಸಿಕ್ಕಿಬಿದ್ದಿದ್ದರು. ಅವರನ್ನು ತಡೆದು ಪರಿಶೀಲಿಸಿದಾಗ 3 ಕಂಟ್ರಿ ಮೇಡ್ ಪಿಸ್ತೂಲ್ಗಳು ಹಾಗೂ 10 ಗುಂಡುಗಳು ಪತ್ತೆಯಾಗಿದ್ದವು.
ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಕ್ರಮ ಗನ್ ಮಾರಾಟ ಜಾಲದ ಮಾಹಿತಿ ಹೊರಬಂದಿದೆ. ತನಿಖೆಯಲ್ಲಿ ಮಧ್ಯಪ್ರದೇಶದ ಬೇಡಘಾಟ್ ಗ್ರಾಮದ ದಾವೂದ್ ಈ ದಂಧೆಯ ಕಿಂಗ್ಪಿನ್ ಎಂದು ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ದಾವೂದ್, ಪ್ರದೀಪ್ ರಮೇಶ್ ಮೂಲಕ ರೈಲಿನಲ್ಲಿ ಆನೇಕಲ್ಗೆ ಪಿಸ್ತೂಲ್ಗಳನ್ನು ಕಳುಹಿಸಿದ್ದ ಎನ್ನಲಾಗಿದೆ.
ಆನೇಕಲ್ಗೆ ಗನ್ಗಳನ್ನು ತಂದಿದ್ದ ಪ್ರದೀಪ್ ರಮೇಶ್ ಅವುಗಳನ್ನು ಡೆಲಿವರಿ ಮಾಡಲು ಕಾಯುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಇನ್ನು ತನಿಖೆಯಲ್ಲಿ 2 ಕಂಟ್ರಿ ಮೇಡ್ ಪಿಸ್ತೂಲ್ಗಳ ಮಾರಾಟದ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಕೆ.ಜಿ.ಹಳ್ಳಿ ರೌಡಿ ಶೀಟರ್ ಕುಳ್ಳ ರಿಜ್ವಾನ್ ಹಾಗೂ ರೌಡಿ ಶೀಟರ್ ಮನೋಜ್ ಅಲಿಯಾಸ್ ಜಾಕಿಗೆ ತಲಾ ಒಂದೊಂದು ಪಿಸ್ತೂಲ್ ಮಾರಾಟ ಮಾಡಲಾಗಿದೆ ಎನ್ನಲಾಗಿದೆ. ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದಲ್ಲಿ 7 ಆರೋಪಿಗಳನ್ನು ಬಂಧಿಸಲಾಗಿದ್ದು, ಗನ್ ಸಪ್ಲೈಯರ್ನೊಂದಿಗೆ ಸಂಪರ್ಕ ಹೊಂದಿರುವ ಇತರ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.




