Latest

*ಮೃತ ಗ್ರಾಹಕರ ಖಾತೆಯಿಂದ 61.57 ಲಕ್ಷ ಅಕ್ರಮ ವರ್ಗಾವಣೆ*: *SBI ಮಾಜಿ ವ್ಯವಸ್ಥಾಪಕನಿಗೆ ಜೈಲು*

ಪ್ರಗತಿವಾಹಿನಿ ಸುದ್ದಿ: ಮೃತ ಗ್ರಾಹಕರ ಖಾತೆ ಹಾಗೂ ಬ್ಯಾಂಕಿನ ಆಂತರಿಕ ಖಾತೆಯಿಂದ 61.57 ಲಕ್ಷ ರೂಪಾಯಿ ಅಕ್ರಮವಾಗಿ ವರ್ಗಾಯಿಸಿಕೊಂಡು ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ಎಸ್‌ಬಿಐ ಮಾಜಿ ಮುಖ್ಯ ವ್ಯವಸ್ಥಾಪಕ ಎ.ವಿ. ಕುಲಕರ್ಣಿ ಅಲಿಯಾಸ್ ಅನಿರುದ್ಧ ವಸಂತರಾವ್ ಕುಲಕರ್ಣಿ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಮೈಸೂರಿನ 1ನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯವು ಅನಿರುದ್ಧ ವಸಂತರಾವ್ ಕುಲಕರ್ಣಿಗೆ 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿದೆ.

ಕುಲಕರ್ಣಿ 2009ರಿಂದ 2011ರವರೆಗೆ ಮೈಸೂರಿನ ಚಾಮುಂಡಿಪುರಂ ಎಸ್‌ಬಿಐ ಶಾಖೆಯ ಮುಖ್ಯ ವ್ಯವಸ್ಥಾಪಕರಾಗಿದ್ದರು. ಈ ಅವಧಿಯಲ್ಲಿ 2005ರಲ್ಲೇ ಮೃತಪಟ್ಟಿದ್ದ ಕೃಷ್ಣ ಅಯ್ಯರ್ ಅವರ ಖಾತೆಯಲ್ಲಿದ್ದ 40.53 ಲಕ್ಷ ರೂಪಾಯಿಯನ್ನು ತಮ್ಮ ಹಾಗೂ ಮಗನ ವೈಯಕ್ತಿಕ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದರು ಎಂದು ಪ್ರಕರಣದಲ್ಲಿ ಆರೋಪಿಸಲಾಗಿತ್ತು. ಇದರ ಜೊತೆಗೆ ಬ್ಯಾಂಕಿನ ಆಂತರಿಕ ಖಾತೆಯಿಂದ 21.04 ಲಕ್ಷ ರೂಪಾಯಿಯನ್ನೂ ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದರು.

ಒಟ್ಟು 61.57 ಲಕ್ಷ ರೂಪಾಯಿ ಅಕ್ರಮ ವರ್ಗಾವಣೆ ನಡೆದಿರುವುದು ಬ್ಯಾಂಕಿನ ಆಂತರಿಕ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ತನಿಖೆ ವೇಳೆ ಕುಲಕರ್ಣಿ ತಪ್ಪೊಪ್ಪಿಕೊಂಡಿದ್ದು, ಬಳಿಕ ಬ್ಯಾಂಕ್‌ಗೆ ಸುಮಾರು 62 ಲಕ್ಷ ರೂಪಾಯಿ ಮರುಪಾವತಿಸಿದ್ದರು.. ನಂತರ ಕೆ.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಸುದೀರ್ಘ ವಿಚಾರಣೆ ಬಳಿಕ ನ್ಯಾಯಾಧೀಶ ಪ್ರಕಾಶ್ ವಿ. ಅವರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 409ರ ಅಡಿಯಲ್ಲಿ ಕುಲಕರ್ಣಿ ಅವರನ್ನು ದೋಷಿ ಎಂದು ಘೋಷಿಸಿದ್ದಾರೆ. 50 ಸಾವಿರ ರೂ. ದಂಡ ಪಾವತಿಸಲು ವಿಫಲರಾದರೆ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಆದೇಶಿಸಲಾಗಿದೆ. ದಂಡದ ಮೊತ್ತದಲ್ಲಿ 40 ಸಾವಿರ ರೂ.ಗಳನ್ನು ಬ್ಯಾಂಕ್‌ಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಸೂಚಿಸಿದೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಕೆ. ಪ್ರಕಾಶ್ ವಾದ ಮಂಡಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button