
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – 7 ನೇ ವೇತನ ಪರಿಷ್ಕರಣೆ ಆಯೋಗದ ಅಧ್ಯಕ್ಷ ಡಾ: ಸುಧಾಕರ ರಾವ್ ಅವರು ಇಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಭೇಟಿ ಮಾಡಿ ಮಾತುಕತೆ ನಡೆಸಿದರು.

ಇದರಿಂದಾಗಿ ಆಯೋಗ ಅಧಿಕೃತವಾಗಿ ತನ್ನ ಕಾರ್ಯ ಆರಂಭಿಸಿದಂತಾಗಿದೆ.
ಈಗಾಗಲೆ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ ರಾವ್ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗ ರಚನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನುಮೋದನೆ ನೀಡಿದ್ದಾರೆ.
ನಿವೃತ್ತ ಐಎಎಸ್ ಅಧಿಕಾರಿ ಪಿ.ಬಿ. ರಾಮಮೂರ್ತಿ, ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ನಿವೃತ್ತ ಪ್ರಧಾನ ನಿರ್ದೇಶಕರಾದ ಶ್ರೀಕಾಂತ್ ಬಿ. ವನಹಳ್ಳಿ ಅವರನ್ನು ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲಾಗಿದ್ದು, ಮೂಲಸೌಕರ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಸರ್ಕಾರದ ಸಂಪನ್ಮೂಲಗಳು ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಿರುವ ಸಂಪನ್ಮೂಲ ಮತ್ತು ವಿತ್ತೀಯ ಹೊಣೆಗಾರಿಕೆ ಅಧಿನಿಯಮ, 2002ರ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ವೇತನ ಆಯೋಗವು ಆರು ತಿಂಗಳ ಒಳಗಾಗಿ ತನ್ನ ಶಿಫಾರಸುಗಳನ್ನು ಮಾಡಲಿದೆ.
7ನೇ ವೇತನ ಆಯೋಗವು ಸರ್ಕಾರಿ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿ (ಯುಜಿಸಿ/ ಎಐಸಿಟಿಇ/ ಐಸಿಎಆರ್ ವೇತನ ಶ್ರೇಣಿಯ ವೇತನ ಪಡೆಯುತ್ತಿರುವವರನ್ನು ಹೊರತು ಪಡಿಸಿ)ಯ ವೇತನ ಹಾಗೂ ವಿವಿಧ ಭತ್ಯೆಗಳು ಹಾಗೂ ನಿವೃತ್ತಿ ಸೌಲಭ್ಯಗಳನ್ನು ಪರಿಶೀಲಿಸಿ, ಕಾರ್ಯಸಾಧುವಾದ ನೂತನ ವೇತನ ಶ್ರೇಣಿಯನ್ನು ಶಿಫಾರಸು ಮಾಡುವುದು, ಕೇಂದ್ರದ ವೇತನ ಶ್ರೇಣಿಯನ್ನು ರಾಜ್ಯದಲ್ಲಿ ಅಳವಡಿಸುವ ಕುರಿತು ಪರಿಶೀಲಿಸುವುದು, ರಾಜ್ಯ ಸರ್ಕಾರವು ತುಟ್ಟಿ ಭತ್ಯೆ ನೀಡಲು ಅನುಸರಿಸಬೇಕಾದ ಸೂತ್ರವನ್ನು ರೂಪಿಸುವುದು, ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ಪ್ರವಾಸ ರಜೆ ಸೌಲಭ್ಯ, ವೈದ್ಯಕೀಯ ಸೌಲಭ್ಯಗಳನ್ನು ನಿಗದಿ ಪಡಿಸಲು ಹಾಗೂ ಸುಧಾರಣೆ ತರಲು ಸಲಹೆ ನೀಡುವುದು, ನಿವೃತ್ತಿ ವೇತನ ಮತ್ತು ಸಂಬಂಧಿತ ಸೌಲಭ್ಯಗಳ ಪರಿಷ್ಕರಣೆ ಮೊದಲಾದ ಅಂಶಗಳ ಕುರಿತು ವೇತನ ಆಯೋಗವು ಪರಿಶೀಲಿಸಿ ಶಿಫಾರಸು ನೀಡಲಿದೆ.
https://pragati.taskdun.com/7th-pay-commissioncm-basavaraj-bommaisudhakar-rao/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ