Kannada NewsLatest

ಬೆಳಗಾವಿ ಜಿಲ್ಲೆಯ ಪ್ರಮುಖ ಸುದ್ದಿ ಮತ್ತು ಪ್ರಕಟಣೆ

ಬೆಳಗಾವಿ ಜಿಲ್ಲೆಯ ಪ್ರಮುಖ ಸುದ್ದಿ ಮತ್ತು ಪ್ರಕಟಣೆ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : 

ಋಣ ಪರಿಹಾರ ವಿಧೇಯಕ 2018ರ ಅವಕಾಶಗಳು ಸಾರ್ವಜನಿಕರ ಗಮನಕ್ಕೆ

ಕರ್ನಾಟಕ ಋಣ ಪರಿಹಾರ ವಿಧೇಯಕ 2018 ಈ ಕಾಯ್ದೆಯು 23 ಜುಲೈ 2019 ರಿಂದ ಜಾರಿಗೆ ಬಂದಿದ್ದು, ಸಣ್ಣ ರೈತರು, ಭೂರಹಿತ ಕೃಷಿ ಕಾರ್ಮಿಕರು, ದುರ್ಬಲ ವರ್ಗಗಳ ಜನರಿಗೆ ಋಣದ ಪರಿಹಾರ ಒದಗಿಸಲು ಇದು ಒಂದು ಪ್ರಮುಖ ಸಾಧನವಾಗಿದೆ.

ಸಣ್ಣರೈತ ಈ ಅಧಿನಿಯಮದ ಪ್ರಾರಂಭದ ದಿನಾಂಕದಂದು, ಎರಡು ಘಟಕಗಳಿಗಿಂತ ಹೆಚ್ಚಿಲ್ಲದ ಜಮೀನನ್ನು ಅದರ ಮಾಲೀಕನಾಗಿ, ಗುತ್ತಿಗೆದಾರನಾಗಿ ಅಥವಾ ಅಡಮಾನದಾರನಾಗಿ ಅಥವಾ ಭಾಗಶ: ಒಂದು ಅನುಭವದಲ್ಲಿ ಮತ್ತು ಭಾಗಶ: ಇನ್ನೊಂದರಲ್ಲಿ ತನ್ನ ಸ್ವಾಧೀನದಲ್ಲಿ ಹೊಂದಿರುವ, ಅದರಿಂದ ಬರುವ ವಾರ್ಷಿಕ ಆದಾಯವು 1,20 ಲಕ್ಷ ರೂ.ಗಳನ್ನು ಮೀರದಿರುವ ಮತ್ತು ಕೃಷಿಯಿಂದಲ್ಲದೇ ಬೇರೆ ಯಾವ ಮೂಲದಿಂದಲೂ ಆದಾಯವಿಲ್ಲದ ಒಬ್ಬ ವ್ಯಕ್ತಿ. ದುರ್ಬಲ ವರ್ಗಗಳ ಜನರು ಅಂದರೆ ಸಣ್ಣ ರೈತರಲ್ಲದ ಅಥವಾ ಭೂರಹಿತ ಕೃಷಿ ಕಾರ್ಮಿಕರಲ್ಲದ ಅವರ ವಾರ್ಷಿಕ ಅಧಾಯವು ಎಲ್ಲ ಮೂಲಗಳಿಂದ 1.20 ಲಕ್ಷಗಳಷ್ಟು ಹೊಂದಿರುವ ಜನರು ಈ ಕಾಯ್ದೆಯ ಪ್ರಯೋಜನವನ್ನು ಪಡೆಯಬಹುದಾಗಿದೆ ಎಂದು ಬೆಳಗಾವಿ ಸಹಕಾರ ಸಂಘಗಳ ಉಪ ನಿಬಂಧಕರು ಹೇಳಿದ್ದಾರೆ.

ಈ ಕಾಯ್ದೆಯು ಜಾರಿಗೆ ಬಂದ ದಿನಾಂಕದಿಂದ 90 ದಿನಗಳೊಳಗೆ ಆಯಾ ಪ್ರದೇಶದ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಋಣ ಪರಿಹಾರ ಅಧಿಕಾರಿಗೆ ಸಂಬಂಧಪಟ್ಟ ಉಪ ವಿಭಾಗಾಧಿಕಾರಿಗಳಿಗೆ ನಿಗದಿತ ನಮೂನೆಯಲ್ಲಿ ಲೇಣಿದಾದರನು ಸಾಲದಬಾಕಿ ಇರುವ ವಿವರಗಳುಳ್ಳ ಮಾಹಿತಿಯನ್ನು ಸಲ್ಲಿಸಬೇಕಾಗುತ್ತದೆ.

ಸಾಲ ಪಡೆದಿರುವವರ ಪರವಾಗಿ ಜಾಮೀನುದಾರನು ಸಹ ಅಡಮಾನ ಮಾಡಿದ ಚರ, ಸ್ಥಿರ, ಚಿನ್ನಾಭರಣ ವಾಪಸ್ಸಾತಿ ಕೋರಿ ಋಣ ಪರಿಹಾರ ಅಧಿಕಾರಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಋಣ ಪರಿಹಾರ ಅಧಿಕಾರಿಯು ಖಾಸಗಿ ಲೇವಾದೇವಿಗಾರರು ಮತ್ತು ಗಿರವಿದಾರರಿಂದ ಸಾಲ ಪಡೆದಿದ್ದಲ್ಲಿ ಈ ಕಾಯ್ದೆಯಡಿಯಲ್ಲಿ ಪರಿಹಾರ ನೀಡಲು ಅವನು ಅರ್ಹನಾಗಿರುವ ಬಗ್ಗೆ ನಿರ್ಣಯಿಸಿ ಆದೇಶ ಮಾಡಬೇಕಾಗಿರುತ್ತದೆ.

ಈ ಮೂರು ವರ್ಗದ ಜನರು ಕರ್ನಾಟಕ ಋಣ ಪರಿಹಾರ ಕಾಯ್ದೆಯಡಿಯಲ್ಲಿ ಋಣ ಪರಿಹಾರ ಪಡೆಯುವ ಸಂಬಂಧವಾಗಿ ಋಣ ಪರಿಹಾರ ಅಧಿಕಾರಿಯ ಮುಂದೆ ದಾಖಲಾಗುವ ನಡುವಳಿಯಲ್ಲಿ ಕಾನೂನು ವೃತ್ತಿಪರರು ಹಾಜರಾಗಲು ಕಾಯ್ದೆಯಲ್ಲಿ ಅವಕಾಶವಿರುವುದಿಲ್ಲ.

ಋಣ ಪರಿಹಾರ ಅಧಿಕಾರಿಯು ಋಣ ಪರಿಹಾರ ಕೋರಿ ಬರುವ ಜನರ ಪರವಾಗಿ ಮಾಡಿದ ಆದೇಶ, ನಿರ್ದೇಶನವನ್ನು ಸಾಲ ನೀಡಿದಂತಹ ವ್ಯಕ್ತಿಯು ಪಾಲಿಸಲು ವಿಫಲನಾದರೆ, ಅಂತಹವರಿಗೆ ಒಂದು ವರ್ಷದವರೆಗೆ ಜೈಲು ಹಾಗೂ 1.00 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲು ಅವಕಾಶವಿರುತ್ತದೆ.

ಕರ್ನಾಟಕ ಋಣ ಪರಿಹಾರ ವಿಧೇಯಕ 2018ರ ಅನುಸಾರ ಋಣ ಪರಿಹಾರ ಅಧಿಕಾರಿಯು ಅರ್ಜಿಗಳನ್ನು ಒಂದು ವರ್ಷದ ಒಳಗೆ ಅರ್ಜಿಯ ಕುರಿತು ವಿಚಾರಣೆ ಜರುಗಿಸಿ ಆದೇಶ ಹೊರಡಿಸಬೇಕಾಗಿತ್ತದೆ.

ಕರ್ನಾಟಕ ಋಣ ಪರಿಹಾರ ಕಾಯ್ದೆಯು ಸಾಲಗಾರನೇ ಬಿಟ್ಟುಕೊಟ್ಟ ಕೃಷಿ ಭೂಮಿಯ ಸ್ವತ್ತನಿಂದ ಬಾಕಿ ಇರುವ ಬಾಡಿಗೆ, ಭೂಕಂದಾಯದ ಹಿಂಬಾಕಿ ವಸೂಲಿ, ನ್ಯಾಯಾಲಯದ ಬಿಕರಿ, ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಕ್ಕೆ ಪಾವತಿಸಬೇಕಾದ ಯಾವುದೇ ಕಂದಾಯ, ತೆರಿಗೆ, ಉಪಪ್ರಕರ, ನಂಬಿಕೆ ದ್ರೋಹದ ಯಾವುದೇ ಹೊಣೆಗಾರಿಕೆ, ಸಲ್ಲಿಸಿದ ಸೇವೆಗಾಗಿ ಸಂಬಳ, ಸರ್ಕಾರಿ ಕಂಪನಿ, ಭಾರತೀಯ ಜೀವ ವೀಮಾ ನಿಗಮ, ಸಹಕಾರ ಸಂಘಗಳು, ಸೌಹಾರ್ದ ಸಹಕಾರ ಸಂಘಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಬ್ಯಾಂಕುಗಳು ತೆರಿಗೆ ಋಣ ಕರ್ನಾಟಕ ಸಂಘಗಳ ನೊಂದಣಿ ಕಾಯ್ದೆ 1960 ರಲ್ಲಿ ನೊಂದಣಿಯಾದ ಸಂಸ್ಥೆಗಳು ಹಾಗೂ ಕರ್ನಾಟಕ ಚೀಟಿ ನಿಧಿ ಕಾಯ್ದೆ 1982 ರಡಿ ನೊಂದಣಿಯಾದ ಚೀಟಿ ಸಂಸ್ಥೆಗಳು ಕರ್ನಾಟಕ ಋಣ ಪರಿಹಾರ ವಿಧೇಯಕ 2018 ರ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಬೆಳಗಾವಿ ಸಹಕಾರ ಸಂಘಗಳ ಉಪ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿರಿಯ ನಾಗರಿಕರ ಗಮನಕ್ಕೆ

2018-19 ನೇ ಸಾಲಿನಿಂದ ರಾಜ್ಯದ ಹಿರಿಯ ನಾಗರಿಕರಿಗೆ ಗುರುತಿನ ಚೀಟಿಗಳನ್ನು ಆನ್‍ಲೈನ್ ಮುಖಾಂತರ ವಿತರಿಸಲು ಸೇವಾ ಸಿಂಧು ಪೋರ್ಟಲ್‍ನ್ನು ಪ್ರಾರಂಭಿಸಲಾಗಿದೆ. ಕಾರಣ ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಗುರುತಿನ ಚೀಟಿಗಳನ್ನು ವಿತರಿಸುತ್ತಿರುವ ಎಲ್ಲಾ ಸ್ವಯಂ-ಸೇವಾ ಸಂಸ್ಥೆಯವರಿಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಲಾಗಿದೆ.

ಬೆಂಗಳೂರಿನ ಓಂ ಸೇವಾ ಸಮಿತಿ, ಎಂಬ ಸಂಸ್ಥೆಯವರು ರಾಮದುರ್ಗ ತಾಲೂಕಿನಲ್ಲಿ ಮ್ಯಾನುವಲ್ ಗುರುತಿನ ಚೀಟಿಗಳನ್ನು ತಯಾರಿಸಿ ವಿತರಿಸುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಆದ್ದರಿಂದ ಜಿಲ್ಲೆಯ ಹಿರಿಯ ನಾಗರಿಕರು ಈ ಸಂಸ್ಥೆಯವರಿಂದ ಗುರುತಿನ ಚೀಟಿ ಮಾಡಿಸಿಕೊಂಡು ಮೋಸ ಹೋಗದಂತೆ ಮನವಿ ಮಾಡುತ್ತೇವೆ.

ಒಂದು ವೇಳೆ ಯಾವುದೇ ಸ್ವಯಂ-ಸೇವಾ ಸಂಸ್ಥೆಯವರು ಮ್ಯಾನುವಲ್ ಗುರುತಿನ ಚೀಟಿಗಳನ್ನು ವಿತರಿಸುತ್ತಿರುವುದು ಕಂಡು ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳು ಬೆಳಗಾವಿ ಇವರಿಗೆ ಲಿಖಿತ ದೂರು ನೀಡುವಂತೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಚೇರಿಯ ದೂರವಾಣಿ ಸಂಖ್ಯೆ: 0831-2476096/7 ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಪ್ರಶಸ್ತಿಗಾಗಿ ಅರ್ಜಿ ಅಹ್ವಾನ

2019 -20 ನೇ ಸಾಲಿನ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ 5 ವರ್ಷ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿ ಮತ್ತು ಸಂಸ್ಥೆಗಳಿಂದ ಜಿಲ್ಲೆಗೆ ಸಂಬಂಧಿಸಿದವರಿಗೆ ರಾಜ್ಯ ಪ್ರಶಸ್ತಿಗಾಗಿ ಅರ್ಜಿ ಅಹ್ವಾನಿಸಲಾಗಿದೆ.

ಕರ್ನಾಟಕ ಸರ್ಕಾರವು ಮಕ್ಕಳ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸುವಂತ ವ್ಯಕ್ತಿಗಳಿಗೆ ತಲಾ 35 ಸಾವಿರಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ಸಂಸ್ಥೆಗಳಿಗೆ ತಲಾ ರೂಪಾಯಿ 1 ಲಕ್ಷ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಮಕ್ಕಳ ದಿನಾಚರಣೆಯಂದು ಪ್ರಧಾನ ಮಾಡಿ ಗೌರವಿಸುತ್ತದೆ.

ಅರ್ಜಿ ಸಲ್ಲಿಸಲು ಅಗಸ್ಟ್ 31 ಕೊನೆಯ ದಿನವಾಗಿದ್ದು, ನಂತರ ಬಂದಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿ ನಮೂನೆಯನ್ನು ಶಿವಾಜಿ ನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಉಪನಿರ್ದೇಶಕರ ಕಚೇರಿಯಿಂದ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0831-2407235 ಗೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಕಲಚೇತನ ಕ್ರೀಡಾಪಟುಗಳ ದಾಖಲಾತಿಗಳ ಪರಿಶೀಲನೆ

2015,2016 ಮತ್ತು 2017ನೇ ಸಾಲಿನ ನಗದು ಪುರಸ್ಕಾರಕ್ಕಾಗಿ ಈಗಾಗಲೇ ಅರ್ಜಿಗಳನ್ನು ಸಲ್ಲಿಸಿದ ವಿಕಲಚೇತನ ಕೀಡಾಪಟುಗಳಿಗೆ ಮಾತ್ರ ಕ್ರೀಡಾ ಸಾಧನೆಯ ಮೂಲ ದಾಖಲಾತಿಗಳ ಪರಿಶೀಲನೆಯನ್ನು ಅಗಸ್ಟ 16 ರಂದು ಬೆಳಿಗ್ಗೆ 10 ಗಂಟೆಗೆ ಆಯುಕ್ತರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೃಪತುಂಗ ರಸ್ತೆ, ಬೆಂಗಳೂರು ನಡೆಸಲಾಗುತ್ತಿದೆ.

ಆದ್ದರಿಂದ 2015, 2016 ಮತ್ತು 2017ನೇ ಸಾಲಿನ ನಗದು ಪುರಸ್ಕಾರಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿದ ವಿಕಲಚೇತನ ಕ್ರೀಡಾಪಟುಗಳು ಮಾತ್ರ ಕ್ರೀಡಾ ಸಾಧನೆಗಳ ಮೂಲ ದಾಖಲಾತಿಗಳೊಂದಿಗೆ ಅಗಸ್ಟ 16 ರಂದು ಬೆಳಿಗ್ಗೆ 10 ಗಂಟೆಗೆ ಆಯುಕ್ತರ ಕಛೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೃಪತುಂಗ ರಸ್ತೆ, ಬೆಂಗಳೂರು ಇಲ್ಲಿ ಹಾಜರಾಗಲು ತಿಳಿಸಲಾಗಿದೆ. ಸದರಿ ದಿನದಂದು ಪರಿಶೀಲನೆಗೆ ಗೈರು ಹಾಜರಾದ ಕ್ರೀಡಾಪಟುಗಳ ಅರ್ಜಿಗಳನ್ನು ಅನರ್ಹಗೊಳಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಳಗಾವಿ ಕಚೇರಿಯನ್ನು ಖುದ್ದಾಗಿ ಸಂಪರ್ಕಿಸಬೇಕೆಂದು ಬೆಳಗಾವಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button