Belagavi NewsBelgaum News

*ಎನ್ಇಪಿಯಿಂದ ಕಲಿಕಾ ಗುಣಮಟ್ಟ ಹೆಚ್ಚಳ: ಕಡಾಡಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ನಮ್ಮ ಶಾಲೆ ಮಕ್ಕಳ ಕಲಿಕೆಯ ಗುಣಮಟ್ಟವನ್ನು ಎತ್ತರಿಸಬೇಕಾದದ್ದು ಅನಿವಾರ್ಯವಾಗಿದೆ ಅದಕ್ಕೆ ಪೂರಕವಾಗಿ ಹೊಸ ತಂತ್ರಜ್ಞಾನವುಳ್ಳ ಶಿಕ್ಷಣ ಜಾರಿಗೊಳಿಸುವುದಕ್ಕಾಗಿ ಸ್ಟೆಮ್ ಲ್ಯಾಬ್, ಅಟಲ್ ಟಿಂಕರಿಂಗ್ ಲ್ಯಾಬ್ ಮತ್ತು ಸ್ಮಾಟ್ ಕ್ಲಾಸ್ ಪರಿಕಲ್ಪನೆ ಮೂಡಿ ಬಂದಿದ್ದು ಅವುಗಳ ಉಪಯೋಗದಿಂದ ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೆಚ್ಚಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಮಂಗಳವಾರ ಬೆಳಗಾವಿ ಹನುಮಾನ ನಗರ 2ನೇ ಹಂತದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ 2022-23ನೇ ಸಾಲಿನ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಲ್ಲಿ ನಿರ್ಮಿಸಿದ ಸ್ಮಾಟ್ ಕ್ಲಾಸ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಮೀರಿಸುವ ಮಟ್ಟದಲ್ಲಿ ಸರ್ಕಾರಿ ಶಾಲೆಗಳು ಕೂಡಾ ಮುಂದೆ ಬಂದಿದ್ದು, ಅಂತಹ ಸರ್ಕಾರಿ ಶಾಲೆಗಳಿಗೆ ಚುನಾಯಿತ ಪ್ರತಿನಿಧಿಗಳ ಅನುದಾನವನ್ನು ಉಪಯೋಗಿಸಿ ಮಾದರಿ ಶಾಲೆಗಳಾಗಿ ಮಾಡಬೇಕಾದ ಅಗತ್ಯವಿದೆ ಎಂದರು.

ಇಂದಿನ ಅಧುನಿಕ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧೆ ಮಾಡಬೇಕಾಗಿರುವದರಿಂದ ಅವರಿಗೆ ಕಂಪ್ಯೂಟರ್ ಸ್ಮಾರ್ಟ್ ಕ್ಲಾಸ್ ಪೀಠೋಪಕರಣಗಳಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸುವದು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ತಂತ್ರಜ್ಞಾನವುಳ್ಳ ಕಲಿಕಾಶಕ್ತಿ ಹೆಚ್ಚು ಮಾಡಬೇಕಾಗಿರುವದರಿಂದ ಜಿಲ್ಲೆಯಲ್ಲಿ ಈಗಾಗಲೇ ಆರು ಸರ್ಕಾರಿ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಸ್ಮಾರ್ಟ್ಕ್ಲಾಸ್ ಅಳವಡಿಸಿ ತಂತ್ರಜ್ಞಾನವುಳ್ಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಲಾಗುತ್ತದೆ ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಅನಿಲ ಬೆನಕೆ, ಡಾ. ರವಿ ಪಾಟೀಲ, ನಗರ ಸೇವಕ ಸಂದೀಪ ಜಿರಗ್ಯಾಳ, ಬಿ.ಇ.ಒ ಪ್ರಭಾವತಿ ಹಿರೇಮಠ, ಬಿಜೆಪಿ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಘೇಂದ್ರಗೌಡ ಪಾಟೀಲ, ಶರದ ಪಾಟೀಲ, ಮಂಡಲ ಅಧ್ಯಕ್ಷ ವಿಜಯ ಕೊಡಗನ್ನವರ, ಪ್ರಧಾನ ಗುರುಗಳಾದ ಬಸವರಾಜ ಹಟ್ಟಿಹೊಳಿ, ರಾಜೇಶ ಚೌಗಲಾ, ಅಶೋಕ ತೊರಾತ, ಕೆ.ಆರ್.ಡಿ.ಎಲ್ ಸಿಬ್ಬಂದಿ ರವಿ ಮಗದುಮ್ಮ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button