*ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯ ಉದ್ಘಾಟನೆ, ನಾಮಕರಣ ಸಮಾರಂಭ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವೀರಶೈವ ಲಿಂಗಾಯತ ಸಮಾಜದ ಬಡ ಹೆಣ್ಣು ಮಕ್ಕಳು ಅದರಲ್ಲಿಯೂ ಗ್ರಾಮೀಣ ಭಾಗದ ಕಡುಬಡ ವಿದ್ಯಾರ್ಥಿನಿಯರು ಶೈಕ್ಷಣಿಕ ಕ್ಷೇತ್ರದಲ್ಲಿ ಅಗಾಧವಾದ ಸಾಧನೆಯನ್ನು ಗೈಯಬೇಕು, ಅವರು ಇನ್ನೂ ಹೆಚ್ಚಿನ ಶಿಕ್ಷಣದ ಮೂಲಕ ಸಾಧನೆ ಮಾಡಿದರೆ ಸಮಾಜದ ಶಕ್ತಿ ಇಮ್ಮಡಿಯಾಗುವುದರಲ್ಲಿ ಸಂದೇಹವಿಲ್ಲ. ಅವರ ಶೈಕ್ಷಣಿಕ ಪ್ರಗತಿಯೇ ವೀರಶೈವ ಲಿಂಗಾಯತ ಸಮಾಜದ ಗುರಿ.
ಅಂತೆಯೆ ಪದವಿ, ಉನ್ನತ ಶಿಕ್ಷಣವನ್ನು ಪಡೆಯಲು ಬೆಳಗಾವಿಗೆ ಆಗಮಿಸುವ ಬಡ ಹೆಣ್ಣುಮಕ್ಕಳಿಗಾಗಿ ವಿದ್ಯಾರ್ಥಿನಿ ನಿಲಯವನ್ನು ಸ್ಥಾಪಿಸಬೇಕೆಂಬುದು ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರ ಸದೃಢವಾದ ಇಚ್ಛಾಶಕ್ತಿಯಾಗಿತ್ತು.
ಈ ಕುರಿತು ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿಯಾದ ಡಾ.ಪ್ರಭಾಕರ ಕೋರೆ ಹಾಗೂ ತಂಡದವರು ಅವರ ಸಹಾಯ ಸಹಕಾರದಿಂದ ಬೆಳಗಾವಿ ಸುಭಾಷ್ ನಗರದ ಎಸ್‌ಪಿ ಆಫೀಸ್ ಪಕ್ಕದಲ್ಲಿ ೨೪ ಗುಂಟೆ ನಿವೇಶನವನ್ನು ಪಡೆದು ಕಾಮಗಾರಿಗೆ ಚಾಲನೆ ನೀಡಿದ್ದು ಒಂದು ಮೈಲುಗಲ್ಲು. ಇಂದು ವಿಸ್ತಾರವಾದ ನಿವೇಶನದಲ್ಲಿ ಅದ್ಭುತವಾದ ಕಟ್ಟಡ ನಿರ್ಮಾಣಗೊಂಡು ಡಾ.ಕೋರೆಯವರ ಕನಸು ಸಾಕಾರಗೊಂಡಿದೆ.
ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಕಡುಬಡ ವಿದ್ಯಾರ್ಥಿನಿಯರಿಗೆ ಒಂದು ಉಚಿತ ವಸತಿ ನಿಲಯವನ್ನು ನಿರ್ಮಿಸಿದ್ದರೆ ಬಿ.ಎಸ್. ಯಡಿಯೂರಪ್ಪನವರ ಕೊಡುಗೆ ಅನನ್ಯವೆನಿಸಿದೆ. ಈ ವಸತಿ ನಿಲಯಕ್ಕೆ ಸಮಾಜದ ಅನೇಕ ದಾನಿಗಳು ಮುಂದೆ ಕೈಜೋಡಿಸಿದ್ದಾರೆ. “ಈ ಮಹತ್ ಕಾರ್ಯವನ್ನು ಒಬ್ಬರೇ ನೆರವೇರಿಸುವಷ್ಟು ವೀರಶೈವ ಲಿಂಗಾಯತ ಸಮಾಜದಲ್ಲಿ ಶ್ರೀಮಂತರುಂಟು. ಆದರೆ ಇದು ಸಮಾಜದ ಕೆಲಸ ಎಲ್ಲರೂ ಜೊತೆಯಾಗಬೇಕೆಂಬುದು” ಡಾ.ಪ್ರಭಾಕರ ಕೋರೆಯವರ ಸಂಕಲ್ಪವಾಗಿತ್ತು.
ಅನೇಕ ದಾನಿಗಳು ಮುಂದೆ ಬಂದು ವಸತಿ ನಿಲಯ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಅದರಲ್ಲಿಯೂ ಖ್ಯಾತ ಉದ್ಯಮಿಗಳಾದ ಮಹೇಶ ಬೆಲ್ಲದ ಅವರು ೧ ಕೋಟಿ ರೂ.ಗಳ ದಾನವನ್ನು ನೀಡಿ ಉದಾರ ದಾನಕ್ಕೆ ಸಾಕ್ಷಿಯಾಗಿದ್ದಾರೆ. ಅಂತೆಯೇ ಪ್ರಸ್ತುತ ಉಚಿತ ವಸತಿ ನಿಲಯಕ್ಕೆ ಅವರ ತಾಯಿಯವರ ನೆನಪಿಗಾಗಿ “ಲಿಂ. ಶರಣೆ ಅನ್ನಪೂರ್ಣ ಬಸಲಿಂಗಪ್ಪ ಬೆಲ್ಲದ, ಕಬ್ಬೂರ” ಎಂದು ನಾಮಕರಣ ಮಾಡಿ ಮಹಾಸಭೆಯು ಕೃತಜ್ಞತೆಯನ್ನು ಸಲ್ಲಿಸಿದೆ. ಪ್ರಸ್ತುತ ೨೧ ಕೋಣೆಗಳನ್ನು ಹೊಂದಿರುವ ವಸತಿ ನಿಲಯದ ಪ್ರತಿಯೊಂದು ಕೋಣೆಗಳಿಗೂ ದಾನಿಗಳ ಹೆಸರನ್ನು ನಾಮಕರಣ ಮಾಡಲಾಗುತ್ತಿದೆ.
ಶಿಕ್ಷಣಕ್ಕಾಗಿ ಮಾಡಿದ ದಾನ ಅಮರ: ಒಂದು ಕೈಯಿಂದ ಮಾಡಿದ ದಾನ ಇನ್ನೊಂದು ಕೈಗೆ ಗೊತ್ತಾಗಬಾರದು ಎಂಬ ಮಾತಿದೆ ನಾವು ಮಾಡುವ ದಾನ ಚಿರಸ್ಥಾಯಿಯಾಗಿ ಉಳಿಯಬೇಕು, ಕೊಡುವ ಮನಸ್ಸು ದೊಡ್ಡದಾಗಿರಬೇಕು. ಕೊಡುವ ಹೃದಯವಂತಿಗೆಗಿಂತ ದೊಡ್ಡದಾವುದು. ಬಸವಣ್ಣನವರ ದಾಸೋಹಂ ಭಾವದಿಂದ ಸಮರ್ಪಣಾಭಾವದ ವ್ಯಕ್ತಿಗಳಿದ್ದರೆ ಸಮಾಜ ಬೆಳೆಯುತ್ತದೆ. ಶಿಕ್ಷಣಕ್ಕೆ ನೀಡುವ ದಾನ ಅದು ಅತ್ಯಂತ ಶ್ರೇಷ್ಠವಾದ ದಾನ. ಈ ವಸತಿ ನಿಲಯದಲ್ಲಿ ಕಲಿಯುವ ಬಡ ಹೆಣ್ಣು ಮಕ್ಕಳು ಸಮಾಜದ ಕೀರ್ತಿಯನ್ನು ಹೆಚ್ಚಿಸಲಿ ಎಂಬುದು ಎಲ್ಲ ದಾನಿಗಳ ಆಶಯವಾಗಿದೆ. ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ವಸತಿ ನಿಲಯದ ಪ್ರಧಾನ ಕಾರ್ಯದರ್ಶಿ ಡಾ.ಪ್ರೀತಿ ಕೋರೆ ದೊಡವಾಡ ಹಾಗೂ ಪದಾಧಿಕಾರಿಗಳ ಕೊಡುಗೆ ಅಗಾಧವೆನಿಸಿದೆ.
ಉಚಿತ ವಸತಿ ನಿಲಯದ ವೈಶಿಷ್ಯತೆ: ೧೮,೮೦೦ ಚದರ್ ಅಡಿ ವಿಸ್ತೀರ್ಣದಲ್ಲಿ ಹಾಗೂ ೩ ಕೋಟಿ ರೂಪಾಯಿಗಳಿಗೂ ಹೆಚ್ಚು ವೆಚ್ಚದಲ್ಲಿ ಹೊಸ ವಿನ್ಯಾಸದೊಂದಿಗೆ ನಿರ್ಮಾಣಗೊಂಡಿರುವ ವಸತಿ ನಿಲಯಕ್ಕೆ ಅತ್ಯಾಧುನಿಕ ಸ್ಪರ್ಶವನ್ನು ನೀಡಲಾಗಿದೆ. ೨೧ ಕೋಣೆಗಳನ್ನು ಹೊಂದಿದ್ದು, ಪ್ರತಿಯೊಂದು ಕೋಣೆಗಳಲ್ಲಿಯೂ ವಿದ್ಯಾರ್ಥಿನಿಯರಿಗೆ ಪುಸ್ತಕ ಹಾಗೂ ಬಟ್ಟೆ ಇತರ ಸಾಮಗ್ರಿಗಳನ್ನು ಇಟ್ಟುಕೊಳ್ಳಲು ರ‍್ಯಾಕ್‌ಗಳನ್ನು, ಜೊತೆಗೆ ಅಟ್ಯಾಚ್ ಸ್ನಾನ ಹಾಗೂ ಶೌಚಾಲಯದ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ.
ವಿಶಾಲವಾದ ಅಧ್ಯಯನ ಕೋಣೆ, ಗ್ರಂಥಾಲಯ, ಊಟದ ಹಾಲ್, ಬಟ್ಟೆಗಳನ್ನು ತೊಳೆದುಕೊಳ್ಳಲು ವಾಶ್‌ಮಷಿನ್, ಶುದ್ಧವಾದ ಕುಡಿಯುವ ನೀರು, ಸುಂದರವಾದ ಪರಿಸರ ಸ್ನೇಹಿ ಉದ್ಯಾನವನ ನಿರ್ಮಿಸಲಾಗಿದೆ. ಎಲ್ಲಕ್ಕೂ ಮುಖ್ಯವಾಗಿ ವಿದ್ಯಾರ್ಥಿನಿಯರಲ್ಲಿ ಬಸವ ಸಂಸ್ಕೃತಿ ಚಿಂತನೆ ಮೂಡಿಸುವ, ಅಧ್ಯಯನಶೀಲತೆಯನ್ನು, ಶಿಸ್ತು ಸೌಜನ್ಯತೆಗಳನ್ನು ತುಂಬುವ ಗೃಹ ವಾತಾವರಣವನ್ನು ನಿರ್ಮಿಸಿದೆ.
ಡಿಸೆಂಬರ್ ೧೧ ರಂದು ಉದ್ಘಾಟನೆ :
ಬೆಳಗಾವಿಯ ಸುಭಾಷ ನಗರ, ಎಸ್.ಪಿ. ಆಫೀಸ್ ಎದುರುಗಡೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ, ಬೆಳಗಾವಿ ಜಿಲ್ಲಾ ಘಟಕ ಹಾಗೂ ವೀರಶೈವ ಲಿಂಗಾಯತ ಮಹಿಳಾ ವಸತಿ ಗೃಹ ಕ್ಷೇಮಾಭಿವೃದ್ಧಿ ಸಂಘ ನೂತನವಾಗಿ ನಿರ್ಮಿಸಿರುವ “ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯ ಉದ್ಘಾಟನೆ ಹಾಗೂ ದಾನಿಗಳಾದ ಲಿಂ.ಶರಣೆ ಅನ್ನಪೂರ್ಣ ಬಸಲಿಂಗಪ್ಪ ಬೆಲ್ಲದ, ಕಬ್ಬೂರು ನಾಮಕರಣ ಸಮಾರಂಭವನ್ನು ಗುರುವಾರ ೧೧ ಡಿಸೆಂಬರ್, ೨೦೨೫ ಮಧ್ಯಾಹ್ನ ೧೨.೩೦ ಗಂಟೆಗೆ ಹಮ್ಮಿಕೊಂಡಿದೆ.
ದಿವ್ಯ ಸಾನ್ನಿಧ್ಯವನ್ನು ಕಾರಂಜಿಮಠದ ಪರಮಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ವಹಿಸಲಿದ್ದು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ, ಅರಣ್ಯ ಸಚಿವರು ಮಹಾಸಭೆ ಮಹಾಪ್ರಧಾನ ಕಾರ್ಯದರ್ಶಿಗಳಾದ ಈಶ್ವರ ಖಂಡ್ರೆ, ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ. ವೈ. ವಿಜಯೇಂದ್ರ ಉದ್ಘಾಟನೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ, ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ, ಗಣಿ, ಭೂವಿಜ್ಞಾನ ಮತ್ತು ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವ ಶರಣಬಸಪ್ಪ ದರ್ಶನಾಪೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಮಹಾಸಭೆ ರಾಜ್ಯಾಧ್ಯಕ್ಷ ಶಂಕರ ಬಿದರಿ, ಉದ್ಯಮಿ ಹಾಗೂ ದಾನಿ ಮಹೇಶ ಬಿ. ಬೆಲ್ಲದ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಹಾಸಭೆಯ ರಾಷ್ಟಿçÃಯ ಉಪಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ವಹಿಸಲಿದ್ದಾರೆ ಎಂದು ವಸತಿ ನಿಲಯದ ಅಧ್ಯಕ್ಷೆ ಹಾಗೂ ಜಿಲ್ಲಾ ಘಟಕ ಮಹಾಸಭೆ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಡಾ.ಪ್ರೀತಿ ದೊಡವಾಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಾಸಭೆಯ ಉಪಾಧ್ಯಕ್ಷ ಸ್ಥಾನದಿಂದ ಸಮಾಜದ ಕಡುಬಡ ಹೆಣ್ಣುಮಕ್ಕಳಿಗೆ ವಸತಿ ನಿಲಯ ನಿರ್ಮಾಣ ಮಾಡಬೇಕೆಂಬುದು ನನ್ನ ಗಟ್ಟಿಯಾದ ಸಂಕಲ್ಪವಾಗಿತ್ತು. ನಿವೇಶನ ದೊರಕಿಸಿಕೊಡುವಲ್ಲಿ ಹಿರಿಯ ಧುರೀಣರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಹಾಯ ಸಹಕಾರಗಳು ಅಗಾಧವಾದುದು. ನಾವು ಸಂಪರ್ಕಿಸಿದ ಅನೇಕ ದಾನಿಗಳು ಮುಂದೆ ಬಂದು ತನು-ಮನ-ಧನದಿಂದ ಕಟ್ಟಡಕ್ಕೆ ನೆರವಾಗಿದ್ದಾರೆ. ವಿಶ್ವಗುರು ಬಸವಣ್ಣನವರ ಕೃಪಾಶೀರ್ವಾದದಿಂದ ಶೀಘ್ರವಾಗಿ ಅತ್ಯಂತ ಸುಂದರವಾಗಿ ಅತ್ಯಾಧುನಿಕ ಸೌರ‍್ಯಗಳೊಂದಿಗೆ ವಸತಿನಿಲಯ ಸಿದ್ಧಗೊಂಡಿದೆ. ವಿದ್ಯಾರ್ಥಿನಿಯರು ಉತ್ತಮವಾದ ವಿದ್ಯಾಭ್ಯಾಸವನ್ನು ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಂಡರೆ ನಮ್ಮ ಶ್ರಮ ಸಾರ್ಥಕವಾಗುವುದು. ಒಂದು ಶಿಸ್ತು ಸಮಿತಿಯು ಈ ವಸತಿ ನಿಲಯವನ್ನು ಸದಾ ಕಾರ್ಯನಿರ್ವಹಿಸಲಿದೆ. ಇಲ್ಲಿ ಬೇಕಾದ ಅಗತ್ಯ ಸೌರ‍್ಯಗಳನ್ನು ನಾವು ಇನ್ನೂ ಮಾಡಿಕೊಡುತ್ತೇವೆ. ಪ್ರಸಕ್ತ ಶೈಕ್ಣಿ ಕ ವರ್ಷದಿಂದಲೇ ವಸತಿ ನಿಲಯವು ಕಾರ್ಯಾರಂಭಗೊಂಡಿರುವುದು ನಮಗೆ ಹೆಮ್ಮೆಯನ್ನುಂಟುಮಾಡಿದೆ.
–ಡಾ.ಪ್ರಭಾಕರ ಕೋರೆ
ಉಪಾಧ್ಯಕ್ಷರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ, ಬೆಂಗಳೂರು

ಶಿಕ್ಷಣವೆಂಬುದು ಶ್ರೇಷ್ಠವಾದ ಅಸ್ತ್ರ. ಅದನ್ನು ಸಮಾಜದ ಒಳಿತಿಗಾಗಿ ಬಳಸಬೇಕು. ಶಿಕ್ಷಣಕ್ಕಾಗಿ ನೀಡುವ ದಾನವು ಇನ್ನೂ ಶ್ರೇಷ್ಠ. ಬೆಳಗಾವಿಯಲ್ಲಿ ವೀರಶೈವ ಲಿಂಗಾಯತ ಮಹಾಸಭೆಯು ಬಡ ಗ್ರಾಮೀಣಭಾಗದ ಹೆಣ್ಣುಮಕ್ಕಳಿಗೆ ಉಚಿತ ವಿದ್ಯಾರ್ಥಿನಿಲಯವನ್ನು ಕಟ್ಟುತ್ತಿರುವುದು ಕಂಡು ತುಂಬ ಸಂತೋಷವಾಯಿತು. ಹಾಗೂ ಡಾ.ಪ್ರಭಾಕರ ಕೋರೆಯವರು ಇದರ ನೇತೃತ್ವ ವಹಿಸಿ ವಸತಿನಿಲಯಕ್ಕೆ ಅದ್ಭುತವಾದ ಸ್ಪರ್ಶ ನೀಡಿದ್ದಾರೆ. ಹಾಸ್ಟೇಲ್ ನಿರ್ಮಾಣಕ್ಕೆ ಬಸವಾದಿ ಶರಣರ ಕೃಪೆಯಿಂದ ಸಾಧ್ಯವಾದಷ್ಟು ಸಹಾಯವನ್ನು ಮಾಡಿರುವೆ.
– ಮಹೇಶ ಬೆಲ್ಲದ
ಉದ್ಯಮಿ ಹಾಗೂ ದಾನಿ

ವೀರಶೈವ ಲಿಂಗಾಯತ ಸಮಾಜಕ್ಕೆ ಅನನ್ಯಸಾಧಕ ಡಾ.ಪ್ರಭಾಕರ ಕೋರೆಯವರ ಮತ್ತೊಂದು ಅಪ್ರತಿಮ ಕೊಡುಗೆ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯ. ಈ ಮಹತ್ ಕಾರ್ಯದ ರೂವಾರಿ ಪ್ರೇರಣಾದಾಯಿ ಡಾ.ಪ್ರಭಾಕರ ಕೋರೆಯವರು. ಈ ಮೂಲಕ ಸಮಾಜದ ಬಡ ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೆ ಶೈಕ್ಷಣಿಕವಾಗಿ ಶಕ್ತಿತುಂಬಿದ್ದಾರೆ. ಹಿಡಿದ ಕಾರ್ಯವನ್ನು ಅಚಲವಾಗಿ ಪೂರೈಸಿ ವಿದ್ಯಾರ್ಥಿ ನಿಲಯಕ್ಕೆ ಅತ್ಯಾಧುನಿಕ ಸ್ಪರ್ಶ ನೀಡಿರುವ ಅವರಿಗೆ ಸಮಾಜ ಅನಂತ ಕೃತಜ್ಞತೆಯನ್ನು ಸಲ್ಲಿಸುತ್ತದೆ.
– ರತ್ನಪ್ರಭಾ ಬೆಲ್ಲದ
ಅಧ್ಯಕ್ಷರು, ವೀರಶೈವ ಲಿಂಗಾಯತ ಮಹಿಳಾ ವಸತಿ ಗೃಹ ಕ್ಷೇಮಾಭಿವೃದ್ಧಿ ಸಂಘ, ಬೆಳಗಾವಿ




